ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾಗದಲ್ಲಿ ರಂಗಕಲೆ ಜೀವಂತ: ಮಂಜುನಾಥ ಪ್ರಸನ್ನ

Published 28 ಮಾರ್ಚ್ 2024, 4:28 IST
Last Updated 28 ಮಾರ್ಚ್ 2024, 4:28 IST
ಅಕ್ಷರ ಗಾತ್ರ

ಚಾಮರಾಜನಗರ: ‘ರಂಗಕಲೆ ಎಂಬುದು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿದೆ ಮತ್ತು ಸಿನಿಮಾದಿಂದಾಗಿ ರಂಗಭೂಮಿ ತನ್ನ ಅಸ್ತಿತ್ವ ಕಳೆದುಕೊಂಡಿಲ್ಲ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಮಂಜುನಾಥ ಪ್ರಸನ್ನ ಬುಧವಾರ ಅಭಿಪ್ರಾಯಪಟ್ಟರು. 

ಆತ್ಮೀಯ ರಂಗಪ್ರಯೋಗಾಲಯ ಟ್ರಸ್ಟ್, ಭೋಗಾಪುರದ ಸರ್ಕಾರಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜುಗಳ ಸಂಯಕ್ತ ಆಶ್ರಯದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಮತ್ತು ಯುವಕ ಯುವತಿಯರಿಗೆ ಅಭಿನಯ ಹಾಗೂ ನಾಟಕ ತರಬೇತಿ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಎಲ್ಲರನ್ನು ಕೈಬೀಸಿ ಆಶ್ರಯಕೊಡುವ ಕಲೆ ಅಂದರೆ ಅದು ರಂಗಕಲೆ. ರಂಗಭೂಮಿ ಮನುಷ್ಯನನ್ನ ಯಾವಾಗಲೂ ಖುಷಿಯಿಂದ ಇಡುತ್ತದೆ. ಜಗತ್ತಿನಲ್ಲಿ ಭೂಮಿಯೇ ಒಂದು ರಂಗಭೂಮಿ ಇದ್ದಂತೆ ಇಲ್ಲಿ ಎಲ್ಲರೂ ನಟರೇ. ಮನುಷ್ಯ ಪ್ರತಿಕ್ಷಣ ಒಂದಲ್ಲ ಒಂದು ರೀತಿಯ ಅಭಿನಯದಲ್ಲಿ ತೊಡಗಿಸಿಕೊಂಡಿರುತ್ತಾನೆ. ಮುಕ್ತವಾಗಿದ್ದ ರಂಗಭೂಮಿಯನ್ನು ಕಿ.ಪೂ. 5ನೇ ಶತಮಾನದಲ್ಲಿ ರಂಗಕಲೆಯನ್ನಾಗಿ ಮಾಡಿದವರು ಗ್ರೀಕರು. ಆ ಕಾಲಕ್ಕೆ ರಂಗಕಲೆಗೆ ಹೆಚ್ಚು ಬೇಡಿಕೆ ಇತ್ತು’ ಎಂದರು. 

‘ಚಾರ್ಲಿ ಚಾಪ್ಲಿನ್, ಡಾ.ರಾಜ್‌ಕುಮಾರ್, ಶಂಕರನಾಗ್‌ ಮುಂತಾದ ಶ್ರೇಷ್ಠ ಕಲಾವಿದರು ಗ್ರಾಮೀಣ ರಂಗಭೂಮಿ ಹಿನ್ನೆಲೆಯಿಂದ ಬಂದ ಪ್ರತಿಭೆಗಳು. ರಂಗಭೂಮಿಯಿಂದ ನಾವು ಯಾವುದೇ ರೀತಿಯ ಆರ್ಥಿಕ ಪ್ರಗತಿಯನ್ನು ಕೇಳಬಾರದು. ಅದು ಯಾವಾಗಲೂ ಸಮರ್ಪಣೆ ಮನೋಭಾವ ಕೇಳುತ್ತದೆ. ರಂಗನಟ ನಟನೆಗೆ ಸಮರ್ಪಿಸಿಕೊಳ್ಳಬೇಕಾಗುತ್ತದೆ. ನಟನೆ ಅನ್ನುವುದು ಸಾಂಸ್ಕೃತಿಕ ಬದುಕಿನ ಒಂದು ಅಂಗ’ ಎಂದು ತಿಳಿಸಿದರು.

ರಂಗಭೂಮಿ ಕಲಾವಿದ ಕಲೆ ನಟರಾಜು ಮಾತನಾಡಿ, ‘ಕಲೆಯ ಮೂಲಕ ಯಾರು ಕಾಯಕ ಮಾಡುತ್ತಾರೋ ಅವರು ಶಾಂತಿಯ ಸಾರ್ವತ್ರಿಕ ಪ್ರತಿಪಾದಕರಾಗಿ ನಿಲ್ಲುತ್ತಾರೆ ಎನ್ನುವುದು ಜಗತ್ತಿನ ಬಹುದೊಡ್ಡ ಸತ್ಯ’ ಎಂದರು. 

ಸರ್ಕಾರಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪಿ.ದೇವರಾಜ್ ಅಧ್ಯಕ್ಷತೆ ವಹಿಸಿದ್ದರು.

ರಂಗಸಜ್ಜಿಕೆ ವಿನ್ಯಾಸ ಕಲಾವಿದ ಮಧೂಸೂದನ್ ಎಸ್.ಹೊಸೂರು, ಆತ್ಮೀಯ ಪ್ರಯೋಗಾಲಯ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್ ಎಂ.ಜನ್ನೂರು ಹೊಸೂರು, ಅಭಿನಯ ಮತ್ತು ನಾಟಕ ತರಬೇತಿ ಶಿಬಿರದ ಸಂಚಾಲಕ ಶಿವಶಂಕರ್ ಎನ್.ಚಟ್ಟು, ಮಿಮಿಕ್ರಿ ಮಲ್ಲಣ್ಣ, ರಂಗಭೂಮಿ ಕಲಾವಿದರಾದ ರಿದಂ ರಾಮಣ್ಣ, ಎಚ್.ಎಂ.ಸುಜಾತ, ಸಿದ್ದರಾಜು, ಬಾಗಳಿ ಮಹದೇವಸ್ವಾಮಿ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT