ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

World Turtle Day | ಉಳಿಸಬೇಕಿದೆ ಆಮೆಗಳ ಆವಾಸ

ಡೈನೋಸಾರ್ ಅಳಿವವನ್ನು ಹತ್ತಿರದಿಂದ ಕಂಡಿದ್ದ ಏಕೈಕ ಜೀವಿ ‘ಕಮಠ’
ನಾ.ಮಂಜುನಾಥಸ್ವಾಮಿ
Published 23 ಮೇ 2024, 5:37 IST
Last Updated 23 ಮೇ 2024, 5:37 IST
ಅಕ್ಷರ ಗಾತ್ರ

ಯಳಂದೂರು: ಭೂ ಗ್ರಹದಲ್ಲಿ ದೀರ್ಘಾವಧಿ ಬದುಕುವ ಏಕೈಕ ಜೀವಿ ಆಮೆ! 25 ಕೋಟಿ ವರ್ಷಗಳಿಂದ ಧರೆಯನ್ನು ಆಶ್ರಯಿಸಿದೆ. ಸಮುದ್ರ ಮತ್ತು ಭೂ ವಲಯದ ತುಂಬ ಸಂಚರಿಸುತ್ತ ಡೈನೋಸಾರ್ ಅಂತ್ಯವನ್ನು ಹತ್ತಿರದಿಂದ ಕಂಡು ಬದುಕಿದ ಸರೀಸೃಪ. ಇವುಗಳ ಕೆಲವೊಂದು ಸಂತತಿ ಇಂದು ಅಳಿವಿನತ್ತ ಸಾಗಿದ್ದು, ಇವುಗಳ ಆವಾಸ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.

ತಾಲ್ಲೂಕಿನ ಬಿಳಿಗಿರಿಬೆಟ್ಟ ಸುತ್ತಮುತ್ತಲ ನಿಸರ್ಗದಲ್ಲಿ ಹಲವು ಪ್ರಭೇದದ ಕೂರ್ಮ ಸಂಕುಲಗಳಿವೆ. ಕಲ್ಲಾಮೆ, ನೀರಾಮೆ ಮೊದಲಾದ ಚಂದದ ಹೆಸರಿನ ನಡುವೆ ‘ನಕ್ಷತ್ರ ಆಮೆ’ಗಳೂ ಇಲ್ಲಿ ಬದುಕು ಸವೆಸಿವೆ. ದಕ್ಷಿಣ ಭಾರತ, ಶ್ರೀಲಂಕಾ, ಪಾಕಿಸ್ತಾನದಲ್ಲಿ ಮಾತ್ರ ಕಾಣಸಿಗುವ ಈ ಆಮೆಗಳ ಜೀವಜಾಲವನ್ನು ಉಳಿಸಿ, ಜೀವ ವೈವಿಧ್ಯವನ್ನು ಮತ್ತಷ್ಟು ಸುಂದರಗೊಳಿಸಬೇಕಿದೆ.

‘ಕಾಡು-ನಾಡು ಪರಿಸರದಲ್ಲಿ ಆಮೆ ಹಲವು ಸಂಕಷ್ಟಗಳಿಗೆ ತುತ್ತಾಗುತ್ತಿದೆ. ಹವಾಮಾನ ವೈಪರಿತ್ಯ, ಆವಾಸ ಸ್ಥಾನ ನಷ್ಟಗಳಿಗೆ ಈಡಾದರೆ, ಕೆಲವು ಕಳ್ಳ ಸಾಗಣೆ, ಮಾಂಸ, ಚಿಪ್ಪಿಗಾಗಿ ಹುಡುಕುವ ಪ್ರವೃತಿ ಹೆಚ್ಚುತ್ತಿದೆ. ಸಾಕುಪ್ರಾಣಿ ಅಕ್ರಮ ವ್ಯಾಪಾರ, ಆಹಾರ, ಔಷಧಕ್ಕೂ ಬಳಸುವವರು ಇದ್ದಾರೆ. ಮಾಟ, ಮಂತ್ರ ಮೊದಲಾದ  ಮೂಢನಂಬಿಕೆಗೂ ಆಮೆ ಮೇಲೆ ಬಲೆ ಬೀಸುವವರು ಇದ್ದಾರೆ. ಇದರಿಂದ ವಿಶೇಷವಾಗಿ ಕಂಡುಬರುವ ತಳಿಗಳು ಅಪಾಯಕಾರಿ ದರದಲ್ಲಿ ನಾಶವಾಗುತ್ತಿದೆ’ ಎನ್ನುತ್ತಾರೆ ಬಿಆರ್‌ಟಿ ವನ್ಯಧಾಮದ ಏಟ್ರೀ ಕ್ಷೇತ್ರಪಾಲಕ ಜಡೇಸ್ವಾಮಿ.

‘ಈಚೆಗೆ ಆಮೆಗಳನ್ನು ಮನೆಯಲ್ಲಿ ಇಟ್ಟು ಸಾಕುವುದು ಫ್ಯಾಷನ್ ಆಗುತ್ತಿದೆ. ಸಹಿ ಮತ್ತು ಉಪ್ಪು ನೀರಿನಲ್ಲಿ ಬದುಕುವ ಹತ್ತಾರು ತಳಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅಕ್ವೇರಿಯಂ ಸ್ವಚ್ಛ ಮಾಡುವ ಪ್ರಾಣಿಯಾಗಿ ಹೊಂದಿಸುವ ಹೈಬ್ರಿಡ್ ತಳಿ ಮಾರುಕಟ್ಟೆ ವಸ್ತುವಾಗಿ ಬಳಸಲಾಗುತ್ತಿದೆ. ಮಾಟ, ಮಂತ್ರ, ವಾಮಾಚಾರ, ರೈಸ್ ಪುಲ್ಲಿಂಗ್ ಮೊದಲಾದ ಮೌಢ್ಯಕ್ಕೂ ಆಮೆ ಬಲಿಪಶು ಆಗುವುದನ್ನು ತಡೆಯಬೇಕು’ ಎನ್ನುತ್ತಾರೆ ಪ್ರಾಣಿ ತಜ್ಞರು.

ವೇಗದ ಕಾರಣಕ್ಕೆ ಆಮೆ ಕಥೆ ಮಕ್ಕಳಿಗೆ ಕಚಗುಳಿ ಇಡುತ್ತದೆ. ಧರೆಯ ಮೇಲಿರುವ ಆಮೆ ಹೆಚ್ಚು ಸಸ್ಯಾಹಾರಿ. ಜಲಚರಗಳು ಮಾಂಸ ಸೇವಿಸುತ್ತವೆ. ಬಹುತೇಕ ಸಸ್ಯ ಪದಾರ್ಥ ಇಲ್ಲವೇ ಮೃದ್ವಂಗಿ, ಹುಳು, ಕೀಟದ ಲಾರ್ವ ಭಕ್ಷಿಸುತ್ತವೆ. ಇಂತಹ ವಿಶಿಷ್ಟ ಜೀವಿಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಐಯುಸಿಎನ್ ಕರೆ ನೀಡಿದೆ.

ಮೊಟ್ಟೆ ಹಂತದಲ್ಲಿ ಕಳ್ಳತನ: ‘ಪ್ರಪಂಚದಲ್ಲಿ 360 ಜಾತಿಗಳ ಆಮೆಗಳಿದ್ದು, ಈ ಪೈಕಿ 129 ಪ್ರಭೇದ ಅಪಾಯದಲ್ಲಿ ಇದೆ. ಕೆಲವು 4 ಇಂಚಿನಿಂದ 2 ಮೀಟರ್ ತನಕ ಬೆಳೆಯುತ್ತವೆ. 188 ವರ್ಷಗಳ ಕಾಲ ಬದುಕಿದ ದಾಖಲೆಗಳಿವೆ. ಬಿಆರ್‌ಟಿ ನಿಸರ್ಗದಲ್ಲಿ ಆಮೆಯ 3 ತಳಿಗಳಿವೆ. ಈಚೆಗೆ ಬೆಂಗಳೂರು ನಗರದಲ್ಲಿ 26 ಗ್ರಾಂ ತೂಕದ 218 ನಕ್ಷತ್ರ ಆಮೆಗಳನ್ನು ಬಸ್‌ನಲ್ಲಿ ಸಾಗಿಸುವಾಗ ವಶಕ್ಕೆ ಪಡೆಯಲಾಗಿದೆ. ಸುಮಾರು ₹21 ಲಕ್ಷ ಮೌಲ್ಯದ ನಕ್ಷತ್ರ ಆಮೆಗಳನ್ನು ಅರಣ್ಯ ಇಲಾಖೆ ಉಳಿಸಿದೆ. ಸ್ಥಳೀಯ ಮಟ್ಟದಲ್ಲಿ ವಾರಕ್ಕೆ 100 ರಿಂದ 250 ಮೊಟ್ಟೆ ಇಡುವ ಹಂತದಲ್ಲಿ ಕಳ್ಳತನ ಮಾಡಲಾಗುತ್ತಿದೆ’ ಎಂದು ವನ್ಯಜೀವಿ ತಜ್ಞ ನವೀನ್ ಜಗಲಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಬೆಟ್ಟದ ಕೆರೆ ಬಾವಿಗಳಲ್ಲಿ ಸದಾ ವಿಶ್ರಾಂತಿ ಪಡೆಯುವ ಸಾಮಾನ್ಯ ಆಮೆ
ಬೆಟ್ಟದ ಕೆರೆ ಬಾವಿಗಳಲ್ಲಿ ಸದಾ ವಿಶ್ರಾಂತಿ ಪಡೆಯುವ ಸಾಮಾನ್ಯ ಆಮೆ

ಆಮೆಗಳಲ್ಲಿ 260 ಪ್ರಭೇದ ದೀರ್ಘಾವಧಿ ಬದುಕುವ ಪ್ರಾಣಿ 2000ದಿಂದ ಆಮೆಗಳ ದಿನ ಆಚರಣೆ

ವಿಶ್ವ ಆಮೆಗಳ ದಿನ ಇಂದು

ಆಮೆಗಳ ಸಂರಕ್ಷಣೆ ಪರಿಸರದಲ್ಲಿ ಅದರ ಉಪಸ್ಥಿತಿಯ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲು 2000ನೇ ಇಸವಿಯಿಂದ ಪ್ರತಿ ವರ್ಷ ಮೇ 23 ರಂದು ‘ವಿಶ್ವ ಆಮೆ ದಿನ’ವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.  ‘ಜಲಚರ ಹಾಗೂ ಭೂ ಪರಿಸರ ಸಮತೋಲನದಲ್ಲಿ ಬಹುಮುಖ್ಯ ಕೊಂಡಿಯಾದ ಆಮೆಗಳನ್ನು ಸಂರಕ್ಷಿಸಬೇಕು. ಯುವಜನರು ಆಮೆ ಉತ್ಪನ್ನಗಳಾದ ಬೆಲ್ಟ್ ಮಾಂಸ ಆಟಿಕೆ ಸಾಮಾನು ಬಳಕೆ ನಿಲ್ಲಿಸಬೇಕು. ಮಾನವನೊಂದಿಗೆ ಬದುಕು ಕಟ್ಟಿಕೊಂಡ  ಆಮೆ ಸಂಸಾರ ಉಳಿಸಿ ಮುಂದಿನ ಪೀಳಿಗೆಗೆ ಕಾಪಿಡಬೇಕು’ ಎಂಬುದು ವನ್ಯಪ್ರೇಮಿಗಳ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT