ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುಗಾದಿ ಜಾತ್ರೆ ಆರಂಭ; ಮಾದಪ್ಪನಿಗೆ ವಿಶೇಷ ಪೂಜೆ

Published 6 ಏಪ್ರಿಲ್ 2024, 16:06 IST
Last Updated 6 ಏಪ್ರಿಲ್ 2024, 16:06 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಶನಿವಾರ ಚಾಲನೆ ದೊರೆತಿದ್ದು, ಮೊದಲ ದಿನ ಮಾದಪ್ಪನಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.

ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು ನಡೆದವು. ವಿವಿಧ ಅಭಿಷೇಕ ಅರ್ಚನೆಗಳು ನಡೆದು ಮಹದೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಯಿತು. ಮಹಾಮಂಗಳಾರತಿ ಮಾಡಿದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಯಿತು.

ರಾಜ್ಯದ ವಿವಿಧ ಭಾಗಗಳಿಂದ ಕಾಲ್ನಡಿಗೆಯಲ್ಲಿ ಬಂದಿದ್ದ ಹಾಗೂ ನೆರೆ ರಾಜ್ಯದಿಂದ ಬಂದಿದ್ದ ಭಕ್ತರು ದೇವರ ದರ್ಶನವನ್ನು ಮಾಡಿದ ಬಳಿಕ ರುದ್ರಾಕ್ಷಿ ಮಂಟಪ, ಹುಲಿವಾಹನ, ಬಸವ ವಾಹನ, ಪಂಜಿನ ಸೇವೆ, ಧೂಪದ ಸೇವೆ, ಉರುಳು ಸೇವೆಯನ್ನು ಮಾಡಿದರು. 

ಬೆಳಿಗ್ಗೆಯ ಬೆಳ್ಳಿ ರಥೋತ್ಸವ, ರಾತ್ರಿ ಚಿನ್ನದ ರಥೋತ್ಸವದಲ್ಲೂ ಸಾವಿರಾರು ಭಕ್ತರು ಪಾಲ್ಗೊಂಡರು. 

ಜಾತ್ರೆಯ ಎರಡನೇ ದಿನವಾದ ಭಾನುವಾರ ಮಹದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದೆ. 

ಸ್ವಚ್ಛತೆ ಕಾಪಾಡಲು ಸೂಚನೆ: ದೇವಾಲಯದ ಆವರಣ ಹಾಗೂ ಅಂಗಡಿ ಮಳಿಗೆ ಮುಂಭಾಗ ಸ್ವಚ್ಚತೆಯನ್ನು ಕಾಪಾಡಲು ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಮಳಿಗೆಯ ಮಾಲೀಕರಿಗೆ ಸೂಚಿಸಿದ್ದಾರೆ. 

ಮಳಿಗೆಗಳ ಸುತ್ತಮುತ್ತ ತ್ಯಾಜ್ಯ ವಸ್ತುಗಳು ಎಲ್ಲೆಂದರಲ್ಲಿ ಬಿದ್ದು ಅನೈರ್ಮಲ್ಯ ವಾತಾವರಣವನ್ನು ಗಮನಿಸಿದ ಕಾರ್ಯದರ್ಶಿಯವರು, ‘ಬಸ್ ನಿಲ್ದಾಣದಲ್ಲಿರುವ ಸಾಲು ಮಳಿಗೆಗೆ ತೆರಳಿ ಸ್ಥಳ ಪರಿಶೀಲಿಸಿ ಪ್ರತಿ ನಿತ್ಯವೂ ತಮ್ಮ ತಮ್ಮ ಅಂಗಡಿ ಮಳಿಗೆಗೆಗಳ ಮುಂಭಾಗದಲ್ಲಿ ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಾ ವಸ್ತುಗಳನ್ನು ಎಸೆಯದಂತೆ ನೋಡಿಕೊಳ್ಳಬೇಕು. ಪ್ರತಿ ಮಳಿಗೆ ಮುಂಭಾಗದಲ್ಲಿ ಕಸದ ಬುಟ್ಟಿ ಇರಿಸಬೇಕು.  ಅದರಲ್ಲಿ ಸಂಗ್ರಹವಾಗುವ ಕಸವನ್ನು ಪ್ರಾಧಿಕಾರದ ಕಸದ ವಾಹನ ಬರುವಾಗ ಅದಕ್ಕೆ ಹಾಕಬೇಕು’ ಎಂದು ಸೂಚಿಸಿದರು. 

‘ತಿಂಡಿ ತಿನಿಸುಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ಶುದ್ಧವಾದ ತಿನಿಸುಗಳನ್ನು ನೀಡಬೇಕು. ಸ್ವಚ್ಚತೆ ಕಾಪಾಡದೇ ಇದ್ದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು’ ಎಂದು ಮಾಲೀಕರಿಗೆ ಎಚ್ಚರಿಸಿದರು. 

ಬೃಹತ್‌ ಪರದೆಯಲ್ಲಿ ದರ್ಶನ: ಗರ್ಭಗುಡಿಯಲ್ಲಿರುವ ಮಹದೇಶ್ವರ ಸ್ವಾಮಿಯ ದರ್ಶನವನ್ನು  ದೇವಾಲಯದ ಹೊರ ಆವರಣದಲ್ಲಿ ನಿಂತಿರುವ ಭಕ್ತರಿಗೂ ಕಾಣಲು ಅನುಕೂಲ ಕಲ್ಪಿಸುವುದಕ್ಕಾಗಿ ಪ್ರಾಧಿಕಾರವೂ ಹೊರಗಡೆ ಬೃಹತ್‌ ಎಲ್‌ಇಡಿ ಪರದೆಯನ್ನು ಅಳವಡಿಸಿದೆ. ಅದರಲ್ಲಿ ನೇರಪ್ರಸಾರ ಮಾಡುತ್ತಿದೆ. 

ಮಹದೇಶ್ವರ ಬೆಟ್ಟದಲ್ಲಿ ದೇವಾಲಯದ ಹೊರ ಆವರಣದಲ್ಲಿ ಮಹದೇಶ್ವರ ಸ್ವಾಮಿಯ ದರ್ಶನವನ್ನು ಎಲ್‌ಇಡಿ ‍‍ಪರದೆ ಮೂಲಕ ನೇರ ಪ್ರಸಾರ ಮಾಡಲಾಗುತ್ತಿದೆ
ಮಹದೇಶ್ವರ ಬೆಟ್ಟದಲ್ಲಿ ದೇವಾಲಯದ ಹೊರ ಆವರಣದಲ್ಲಿ ಮಹದೇಶ್ವರ ಸ್ವಾಮಿಯ ದರ್ಶನವನ್ನು ಎಲ್‌ಇಡಿ ‍‍ಪರದೆ ಮೂಲಕ ನೇರ ಪ್ರಸಾರ ಮಾಡಲಾಗುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT