ಶನಿವಾರ, ಏಪ್ರಿಲ್ 1, 2023
29 °C
ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಕಾವೇರಿ

ಚಾಮರಾಜನಗರ | ಕುಡಿಯುವ ನೀರು: ಕಾಮಗಾರಿ ತ್ವರಿತಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಯೋಜನೆಯ ವಿವಿಧ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಆಡಳಿತಾಧಿಕಾರಿ ಬಿ.ಬಿ.ಕಾವೇರಿ ಸೋಮವಾರ ಸೂಚಿಸಿದರು. 

ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಭಿವೃದ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಜಲ ಜೀವನ್ ಮಿಷನ್ ಅಡಿ ಬಾಕಿ ಇರುವ ಎರಡನೇ ಬ್ಯಾಚ್‌ನ ಕುಡಿಯುವ ನೀರಿನ ಕಾಮಗಾರಿ ವೇಗವಾಗಿ ಪೂರ್ಣ ಮಾಡಬೇಕು. ಉಳಿದ ಮುಂದಿನ ಹಂತದ ಬ್ಯಾಚ್ ಕಾಮಗಾರಿಗೂ ಬಾಕಿ ಇರುವ ಟೆಂಡರ್ ಪ್ರಕ್ರಿಯೆಯನ್ನು ಕೈಗೊಂಡು ನಿಗದಿತ ವೇಳೆಗೆ ಕುಡಿಯುವ ನೀರಿನ ಕೆಲಸಗಳು ಆಗುವಂತೆ ನೋಡಿಕೊಳ್ಳಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನವೂ ಶೀಘ್ರವಾಗಿ ಮುಗಿಯಬೇಕು’ ಎಂದರು. 

ಜಿಲ್ಲಾ ಪಂಚಾಯಿತಿ ವತಿಯಿಂದ ನಿರ್ಮಾಣವಾಗುತ್ತಿರುವ ರಸ್ತೆ, ಶಾಲೆ, ಅಂಗನವಾಡಿ ಇನ್ನಿತರ ಕಟ್ಟಡ ಕಾಮಗಾರಿಗಳನ್ನೂ ತ್ವರಿತವಾಗಿ ಮುಗಿಸಬೇಕು. ಟೆಂಡರ್ ಪ್ರಕ್ರಿಯೆಯನ್ನು ಬಾಕಿ ಉಳಿಸಿಕೊಳ್ಳಬಾರದು. ಆಯಾ ಇಲಾಖೆಗಳು ಮುತುವರ್ಜಿ ವಹಿಸಿ ಕಾಲಮಿತಿಯೊಳಗೆ ಕೆಲಸ ಮುಗಿಸಬೇಕು’ ಎಂದರು. 

‘ಪರಿಶಿಷ್ಟರ ಕಾರ್ಯಕ್ರಮಗಳ ಅನುದಾನ ಆಯಾ ಸಮುದಾಯಗಳ ಅಭಿವೃದ್ದಿಗಾಗಿ ಸಂಪೂರ್ಣ ವಿನಿಯೋಗವಾಗಬೇಕು. ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು, ವಿವಿಧ ಇಲಾಖೆಗಳು ನಿರ್ವಹಿಸಿರುವ ಸಾಧನೆಗಳ ಕುರಿತ ಪ್ರಗತಿ ಪರಿಶೀಲಿಸಬೇಕು’ ಎಂದು ಕಾವೇರಿ ನಿರ್ದೇಶಿಸಿದರು.  

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕೆ ಬಗ್ಗೆ ವಿವರ ಪಡೆದ ಅವರು, ‘ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಫಲಿತಾಂಶಕ್ಕಾಗಿ ಅಧ್ಯಯನ ಕಡೆ ಹೆಚ್ಚು ಗಮನ ನೀಡುವಂತಾಗಬೇಕು. ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕಿದೆ. ಶಿಕ್ಷಣ ಇಲಾಖೆ ವಿಶೇಷ ಆಸಕ್ತಿ ವಹಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಮಾತನಾಡಿ, ‘ಕ್ರಿಯಾ ಯೋಜನೆ ಅನುಸಾರ ಎಲ್ಲ ಕಾರ್ಯಕ್ರಮಗಳು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕಿದೆ. ಎಲ್ಲಿಯೂ ವಿಳಂಬ ಮಾಡಬಾರದು. ಅಧಿಕಾರಿಗಳು ಯೋಜನೆಗಳ ಸೌಲಭ್ಯಗಳನ್ನು ಜನರಿಗೆ ತಲುಪಿಸಬೇಕು’ ಎಂದರು. 

ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. 

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಧರಣೇಶ್, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು