ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಗಳ: ಇದು ಸಮಸ್ಯೆಗಳ ಅಂಗಳ

Last Updated 31 ಜುಲೈ 2013, 11:00 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ವರ್ಷ ಕಳೆದರೂ ವಿಲೇವಾರಿ ಆಗದ ಕಸ, ಹೂಳು ತುಂಬಿರುವ ಚರಂಡಿಗಳು, ಕುಡಿಯುವ ನೀರಿಗಾಗಿ ಅಲೆದಾಟ, ಮೂಲ ಸೌಕರ್ಯಗಳಿಗೆ ಪರದಾಟ ಇದು ತಾಲೂಕಿನ ಹಂಗಳ ಗ್ರಾಮದ ಜನರು ಹಲವು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳ ಪರಿಸ್ಥಿತಿ.

ತಾಲೂಕಿನ ದೊಡ್ಡ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಕೇಂದ್ರ, ಐತಿಹಾಸಿಕ ಮಹತ್ವ ಪಡೆದ ಗ್ರಾಮ ಮತ್ತು ಪ್ರಸಿದ್ದ ಪ್ರವಾಸಿ ತಾಣಗಳ ಸಂಪರ್ಕ ಕೊಂಡಿ. ಆದರೂ ಇಲ್ಲಿ ಅಭಿವೃದ್ಧಿ ಮರೀಚಿಕೆ. ಸುತ್ತಲಿನ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಬೇಕಾದ ಗ್ರಾಮ ಪಂಚಾಯಿತಿ  ಕೇಂದ್ರವೇ ಸಮಸ್ಯೆಗಳನ್ನು ಹೊದ್ದು ಮಲಗಿದೆ.

ವಿಲೇವಾರಿ ಆಗದ ಕಸ: ಗ್ರಾಮದ ಹಂಗಳಪುರ ತಿರುವು, ಬಾಬುಜಗಜೀವನರಾಂ ಬಡಾವಣೆ ಬಳಿ ರಾಷ್ಟ್ರೀಯ ಹೆದ್ದಾರಿ 212 ಕ್ಕೆ ಹೊಂದಿಕೊಂಡಂತೆ ಭಾರಿ ಪ್ರಮಾಣದಲ್ಲಿ ಕಸವನ್ನು ರಾಶಿ ಹಾಕಲಾಗಿದೆ. ಇತರೆ ಬಡಾವಣೆಗಳು ಕೂಡಾ ಇದರಿಂದ ಹೊರತಾಗಿಲ್ಲ. ವಿಲೇವಾರಿಗೆ ಕ್ರಮ ವಹಿಸದ ಕಾರಣ ಗೆಬ್ಬೆದ್ದು ನಾರುತ್ತಿದೆ. ಹಂದಿ, ನಾಯಿಗಳ ಹಾವಳಿಯಿಂದ ವಾತಾವರಣ ಕಲುಷಿತಗೊಂಡಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಂತೂ  ಇದೆ.

ಹೂಳು ತುಂಬಿದ ಚರಂಡಿಗಳು: ಗ್ರಾಮ ಎತ್ತರ ಪ್ರದೇಶದಲ್ಲಿದ್ದು, ಹಿಂದೆ ನಿರ್ಮಿಸಿರುವ ಒಳಚರಂಡಿ ವ್ಯವಸ್ಥೆ ಉತ್ತಮವಾಗಿದೆ. ಆದರೆ ಗ್ರಾಮ ಪಂಚಾಯಿತಿ ಆಡಳಿತ ಕಾಲಕಾಲಕ್ಕೆ ಹೂಳು ತೆಗೆಸುತ್ತಿಲ್ಲ. ಹೊಸ ಚರಂಡಿಗಳನ್ನು ಇಳಿಜಾರು ಅನುಸರಿಸಿ ನಿರ್ಮಿಸಿಲ್ಲ. ಸಂಪರ್ಕ ಕೊರತೆ ಕಾರಣ ಮನೆಗಳಿಂದ ಬರುವ ಕೊಳಚೆ ನೀರು, ಹರಿದು ಹೋಗದೇ ಅಲ್ಲಲ್ಲಿ ಸಂಗ್ರಹವಾಗಿ ಕೊಳೆತು ನಾರುತ್ತಿದೆ. ರಸ್ತೆ ಮಧ್ಯ ಕೊಳಚೆ ನೀರು ಸಂಗ್ರಹವಾಗಿ ಸಂಚಾರಕ್ಕೆ ಅಡಚಣೆ ಆಗುತ್ತಿದೆ.

ಕುಡಿಯುವ ನೀರು: ಗ್ರಾಮದಲ್ಲಿ ಅಂತರ್ಜಲ ಕುಸಿತ ಮತ್ತು ಎಂಟು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿದೆ. ಇದರಿಂದಾಗಿ ಸುತ್ತಲಿನ ನೀರಾವರಿ ಜಮೀನುಗಳಿಂದ ಮೊಪೆಡ್, ಬೈಸಿಕಲ್ ಮತ್ತು ತಲೆಯಲ್ಲಿ ನೀರು ಹೊತ್ತು ತರುವುದು ಸಾಮಾನ್ಯ. ವಾಣಿಜ್ಯ ಉದ್ದೇಶಕ್ಕೆ ಹಣ ಕೊಟ್ಟು ನೀರು ಖರೀದಿಸಬೇಕಿದೆ. 2011-12 ನೇ ಸಾಲಿನ ಬರಪರಿಹಾರ ಯೋಜನೆಯಡಿ ಕೊಳವೆ ಬಾವಿ ಕೊರೆಯಿಸಿ, ಪೈಪ್ ಲೈನ್ ಮತ್ತು ಯಂತ್ರಗಾರ ನಿರ್ಮಾಣ ಮಾಡಲಾಗಿದೆ. ಆದರೆ ಅನುದಾನ ಬಿಡುಗಡೆಯಾಗಿರುವ  ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರೂ ಸಂಪರ್ಕ ಕಲ್ಪಿಸುವ ಯೋಜನೆ ಇಂದಿಗೂ ಅನುಷ್ಟಾನ ವಾಗಿಲ್ಲ. ಗ್ರಾಮಕ್ಕೆ ಪಟ್ಟಣದಿಂದ ಕಬಿನಿ ಕುಡಿಯುವ ನೀರು ಪೂರೈಸುವ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ಆದರೂ ಯೋಜನೆ ತಾಂತ್ರಿಕ ಕಾರಣದಿಂದ ಇಂದಿಗೂ ಉದ್ಘಾಟನೆಯಾಗಿಲ್ಲ.

ಪರಿಶಿಷ್ಟ ಸಮುದಾಯದ ಜನರು ವಾಸಿಸುವ ಬಡಾವಣೆಗಳ ಆಯ್ದ ಭಾಗದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಣಗೊಂಡಿದೆ. ಆದರೆ ಇತರೆ ಬಡಾವಣೆ ಗಳಲ್ಲಿ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣ ವಾಗಿವೆ. ಮಳೆ ಗಾಲದಲ್ಲಿ ತಿರುಗಾಡಲು ಸಮಸ್ಯೆಯಾಗುತ್ತಿದೆ. ಗ್ರಾಮದಲ್ಲಿ ಪ್ರಯಾಣಿಕರ ತಂಗುದಾಣ  ಶಿಥಿಲವಾ ಗಿದೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಂಡರ ಹಾವಳಿಯಿಂದ ಸೊರಗಿದೆ. ಆದ್ದರಿಂದ ಇನ್ನಾದರೂ ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟವರು ಕ್ರಮ ವಹಿಸುವರೇ ಕಾದು ನೋಡಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT