ಜಗಳೂರು: ‘ತಾಲ್ಲೂಕಿನಲ್ಲಿ ವ್ಯಾಪಕ ಭ್ರಷ್ಟಾಚಾರ, ಲೂಟಿ ಮತ್ತು ಲಂಚಗುಳಿತನದಿಂದ ಜಡ್ಡುಗಟ್ಟಿರುವ ಆಡಳಿತವನ್ನು ಸರಿದಾರಿಗೆ ತರುವುದೇ ನನ್ನ ಮೊದಲ ಆದ್ಯತೆ’ ಎಂದು ನೂತನವಾಗಿ ಚುನಾಯಿತರಾಗಿರವ ಎಸ್.ವಿ. ರಾಮಚಂದ್ರ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಭದ್ರಾ ಮೇಲ್ದಂಡೆ ಯೋಜನೆ ನಮ್ಮ ಕನಸಿನ ಕೂಸು. ಸ್ಥಗಿತವಾಗಿರುವ ಯೋಜನೆಗೆ ಚಾಲನೆ ನೀಡಲಾಗುವುದು. ತಾಲ್ಲೂಕಿನ 52 ಹಾಗೂ ಅರಸಿಕೆರೆ ಹೋಬಳಿಯ 16 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಮಹತ್ವದ ಯೋಜನೆ ಜಾರಿ ಮತ್ತು ಮುಖ್ಯವಾಗಿ ಪ್ರತಿಯೊಂದು ಕುಟುಂಬಕ್ಕೆ ಸೂರು ಮತ್ತು ನೀರು ಒದಗಿಸುವ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ’ ಎಂದು ತಿಳಿಸಿದರು.
ಒಟ್ಟಾರೆ ಸರ್ಕಾರಿ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಶ್ರಮಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಂದಾಯ ಇಲಾಖೆ, ಪಟ್ಟಣ ಪಂಚಾಯ್ತಿ ಲಾಖೆಗಳಲ್ಲಿ ಭಯಂಕರ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಚುನಾವಣಾ ಸಂದರ್ಭದಲ್ಲಿ ನನಗೆ ಸಂಬಂಧಿಸಿದ ದಾಖಲಾತಿ ಕೊಡಲು ₹ 2500 ಲಂಚಕ್ಕೆ ಪಟ್ಟು ಹಿಡಿದಿದ್ದರು. ಲಂಚ ಕೊಟ್ಟ ನಂತರವೇ ದಾಖಲೆ ಕೊಟ್ಟಿದ್ದಾರೆ. ಇದು ಎಲ್ಲಾ ಇಲಾಖೆಗಳಲ್ಲಿನ ಸ್ಥಿತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
‘ಉದ್ಯೋಗಖಾತ್ರಿ ಯೋಜನೆಯಡಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಸೂಕ್ತ ತನಿಖೆ ನಡೆಸಿ, ಸಾರ್ವಜನಿಕರ ಹಣವನ್ನು ಲೂಟಿ ಹೊಡೆದ ಗುತ್ತಿಗೆದಾರರನ್ನು ಜೈಲಿಗೆ ಅಟ್ಟಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ಚುನಾವಣೆಯಲ್ಲಿ ನನ್ನನ್ನು ಸರ್ವ ಜನಾಂಗದವರು, ಯುವ ಜನರು, ಮಹಿಳೆಯರು ವ್ಯಾಪಕವಾಗಿ ಬೆಂಬಲಿಸಿದ್ದಾರೆ. ಹಿಂದಿನ ಶಾಸಕರು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ, ಕುತಂತ್ರ ನಡೆಸಿ ವಿವಾದ ಸೃಷ್ಟಿಸಲು ಯತ್ನಿಸಿದರು. ಆದರೆ ಜನತೆ ನನ್ನನ್ನು ಅಭೂತಪೂರ್ವವಾಗಿ ಗೆಲ್ಲಿಸುವ ಮೂಲಕ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ’ ಎಂದರು.
‘ಮುಂದಿನ ನಾಲ್ಕು ವರ್ಷ ರಾಜಕೀಯಕ್ಕೆ ಮಹತ್ವ ನೀಡುವುದಿಲ್ಲ. ಕ 5 ವರ್ಷದಿಂದ ಅಭಿವೃದ್ಧಿಯಿಂದ ವಂಚಿತವಾಗಿ ಹಿಂದುಳಿದಿರುವ ಕ್ಷೇತ್ರವನ್ನು ಸರ್ವ ರೀತಿಯಲ್ಲೂ ಪ್ರಗತಿಯತ್ತ ಕೊಂಡೊಯ್ಯುವುದು ನನ್ನ ಆದ್ಯತೆಯಾಗಿದೆ. ಎಲ್ಲಾ ಹಂತದ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದು ತಂಡವಾಗಿ ಕೆಲಸ ಮಾಡಲಾಗುವುದು. ಜನರಿಗೆ ಸ್ಪಂದಿಸುವ ಅಧಿಕಾರಿಗಳಿಗೆ ಮಾತ್ರ ಇಲ್ಲಿ ಜಾಗ. ಸ್ವಾರ್ಥ, ವೈಯಕ್ತಿಕ ಲಾಭದ ಆಸೆ ಇರುವ ಅಧಿಕಾರಿಗಳು ಕೂಡಲೇ ಬೇರೆ ಸ್ಥಳ ನೋಡಿಕೊಳ್ಳಲಿ’ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಸ್.ಕೆ. ,ಮಂಜುನಾಥ್, ಶಾಂತಕುಮಾರಿ, ಸವಿತಾ ಕಲ್ಲೇಶಪ್ಪ , ಮಾಜಿ ಸದಸ್ಯ ಎಚ್. ನಾಗರಾಜ್, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಮರೇನಹಳ್ಳಿ ಬಸವರಾಜ್, ಶಂಕ್ರನಾಯ್ಕ, ತಿಮ್ಮಾಭೋವಿ, ಸಿದ್ದೇಶ್ ಮುಖಂಡರಾದ ಡಿ.ವಿ. ನಾಗಪ್ಪ, ಎಚ್. ನಾಗರಾಜ್, ಬಿ.ಆರ್. ನಾಗಪ್ಪ, ಕೆ.ಇ. ಮಂಜಣ್ಣ, ಚಟ್ನಳ್ಳಿ ರಾಜಪ್ಪ, ಸೂರಡ್ಡಿಹಳ್ಳಿ ಶರಣಪ್ಪ. ತಿಪ್ಪೇಸ್ವಾಮಿ ಇದ್ದರು
ಕೊನೆವರೆಗೂ ಬಿಎಸ್‌ವೈ ಜೊತೆ ಇರುತ್ತೇನೆ; ಎಸ್‌ವಿಆರ್
‘ ಅಧಿಕಾರ ಮತ್ತು ಆಮಿಷಕ್ಕೆ ಒಳಗಾಗಿ ಬೇರೆ ಯಾವುದೇ ಪಕ್ಷಗಳಿಗೆ ಹೋಗುವ ಪ್ರಶ್ನೆಯೇ ಇಲ್ಲ. ರಾಜಕೀಯ ಜೀವನದ ಕೊನೆವರೆಗೂ ಯಡಿಯೂರಪ್ಪ ಅವರ ಜೊತೆ ಇರುತ್ತೇನೆ’ ಎಂದು ರಾಮಚಂದ್ರ ಸ್ಪಷ್ಟಪಡಿಸಿದರು.
‘ಪಕ್ಷ ಜವಾಬ್ದಾರಿ ನೀಡಿದಲ್ಲಿ ಸಚಿವ ಸ್ಥಾನ ಸೇರಿದಂತೆ ಯಾವುದೇ ಜವಾಬ್ದಾರಿ ನಿಭಾಯಿಸಲು ಸಿದ್ಧ. ಈ ಬಗ್ಗೆ ನಾನು ಯಾರ ಮೇಲೂ ಒತ್ತಡ ಹಾಕಿಲ್ಲ. ನನಗೆ ಅಧಿಕಾರದ ಆಸೆ ಇಲ್ಲ. ಕ್ಷೇತ್ರದ ಜನರ ಒಳಿತಿಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸಲು ಬದ್ಧನಾಗಿದ್ದೇನೆ. ಸಿಎಂ ಯಡಿಯೂರಪ್ಪ ಅವರು ಸದನದಲ್ಲಿ ಬಹುಮತ ಸಾಬೀತುಪಡಿಸಿದ ನಂತರ ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ ಸುದ್ದಿಗೋಷ್ಟಿ ಕರೆದು ಮಾತನಾಡುತ್ತೇನೆ’ ಎಂದು ಹೇಳಿದರು.
**
ನನ್ನಿಂದಲೇ ಲಂಚ ಪಡೆದವರು ಇನ್ನೂ ಜನಸಾಮಾನ್ಯರನ್ನು ಹೇಗೇ ಪೀಡಿಸಿರಬಹುದು. ಸಣ್ಣ ನೀರಾವರಿ ಇಲಾಖೆಯಡಿ ಬೃಹತ್ ಚೆಕ್‌ಡ್ಯಾಂ, ಕೆರೆ ಕಾಮಗಾರಿ ಕಳಪೆಯಾಗಿದ್ದು, ಹನಿ ನೀರು ನಿಲ್ಲುತ್ತಿಲ್ಲ
- ಎಸ್.ವಿ.ರಾಮಚಂದ್ರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.