ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಸಿದ್ಧತೆ, ಜನಸಂಪರ್ಕ ಅಭಿಯಾನಕ್ಕೆ ಚಾಲನೆ

ಗಾಂಧಿ ಜಯಂತಿಯಂದು ಪಕ್ಷದ ಅವಲೋಕನ
Last Updated 2 ಅಕ್ಟೋಬರ್ 2018, 14:20 IST
ಅಕ್ಷರ ಗಾತ್ರ

ಚಾಮರಾಜನಗರ: ಕಾಂಗ್ರೆಸ್‌ ಜಿಲ್ಲಾ ಘಟಕವು ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಗಾಂಧಿ ಜಯಂತಿಯಂದು ಜನಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡುವುದರ ಮೂಲಕ ಜನರ ಬಳಿಗೆ ತೆರಳಿ ಪಕ್ಷವನ್ನು ಸಂಘಟಿಸಲು ಮುಂದಡಿ ಇಟ್ಟಿದೆ.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಪಿ.ಮರಿಸ್ವಾಮಿ, ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಹಾಗೂ ಬಡವರ ಮತ್ತು ರೈತ ವಿರೋಧಿ ನೀತಿಗಳನ್ನು ಜನಸಂಪರ್ಕ ಅಭಿಯಾನದಲ್ಲಿ ಜನರ ಮುಂದೆ ಇಡಲಾಗುವುದು’ ಎಂದರು.

ಎಐಸಿಸಿಯು ಈ ಬಗ್ಗೆ ಕಿರು ಹೊತ್ತಗೆಯನ್ನು ನೀಡಲಿದೆ. ಅದನ್ನು ಜನರ ಮುಂದೆ ಇಟ್ಟು ಮನಮೋಹನ ಸಿಂಗ್‌ ನೇತೃತ್ವದ ಹಿಂದಿನ ಯುಪಿಎ ಸರ್ಕಾರ ಮಾಡಿದ್ದ ಅಭಿವೃದ್ಧಿ ಹಾಗೂ ಬಿಜೆಪಿ ಸರ್ಕಾರದ ನಾಲ್ಕೂವರೆ ವರ್ಷಗಳ ದುರಾಡಳಿತವನ್ನು ಹೋಲಿಕೆ ಮಾಡಿ ಜನರಿಗೆ ಮನವರಿಕೆ ಮಾಡಬೇಕು ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜನರ ಬಳಿಗೆ ಹೋಗಿ, ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ, ರಫೇಲ್‌ ಹಗರಣಗಳ ಬಗ್ಗೆ ಜನರಿಗೆ ತಿಳಿಸಿಕೊಡಬೇಕು ಎಂದರು.

ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್‌ ಸರ್ಕಾರದ ಸಾಧನೆ, ರಾಜ್ಯದಲ್ಲೇ ಅತ್ಯುತ್ತಮ ಸಂಸದ ಎಂದು ಹೆಸರು ಮಾಡಿರುವ ಆರ್‌.ಧ್ರುವನಾರಾಯಣ ಹಾಗೂ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿ.ಪುಟ್ಟರಂಗಶೆಟ್ಟಿ ಅವರ ಸಾಧನೆಗಳನ್ನೂ ಜನರ ಮುಂದೆ ಇಡಬೇಕ ಎಂದು ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಮರಿಸ್ವಾಮಿ ಕರೆ ನೀಡಿದರು.

ಪಕ್ಷಕ್ಕೆ ಹಿನ್ನಡೆ: ಸಂಸದ ಆರ್‌.ಧ್ರುವನಾರಾಯಣ ಮಾತನಾಡಿ, ‘ಚಾಮರಾಜನಗರ ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆ ಎಂದು ಈ ಹಿಂದೆ ಕರೆಯಲಾಗುತ್ತಿತ್ತು. ಈಗ ಆ ಸ್ಥಾನಕ್ಕೆ ಕೊಂಚ ಧಕ್ಕೆಯಾಗಿದೆ.ವಿಧಾನಸಭಾ ಚುನಾವಣೆಯಲ್ಲಿ ನಾವು ಎರಡು ಕ್ಷೇತ್ರಗಳನ್ನು ಕಳೆದುಕೊಂಡಿದ್ದೇವೆ. ನಗರಸಭಾ ಚುನಾವಣೆಯಲ್ಲೂ ಸ್ವಲ್ಪ ಹಿನ್ನಡೆಯಾಗಿದೆ’ ಎಂದರು.

‘ನಮ್ಮಲ್ಲಿರುವ ಭಿನ್ನಾಭಿಪ್ರಾಯ, ನ್ಯೂನತೆಗಳನ್ನು ಸರಿಪಡಿಸಿಕೊಂಡು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಬೇರುಮಟ್ಟದಿಂದ ಆಗಬೇಕು. ಬೂತ್‌ ಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.

7ರಿಂದ ತರಬೇತಿ: ಪಕ್ಷದ ಬಲವರ್ಧನೆಗಾಗಿ ಬೂತ್‌ ಮಟ್ಟದ ಏಜೆಂಟರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಮೊದಲಿಗೆ ಅಕ್ಟೋಬರ್‌ 7ರಂದು ಕೊಳ್ಳೇಗಾಲ ಕ್ಷೇತ್ರದ ಬಿಳಿಗಿರಿ ರಂಗನಬೆಟ್ಟದಲ್ಲಿ ತರಬೇತಿ ಆರಂಭವಾಗುತ್ತದೆ. ನಂತರ ಜಿಲ್ಲೆಯ ಇತರ ತಾಲ್ಲೂಕುಗಳಲ್ಲೂ ಈ ಕಾರ್ಯಕ್ರಮ ನಡೆಯಲಿದೆ ಎಂದರು.

ಪಕ್ಷದ ಜಿಲ್ಲಾ ಉಸ್ತುವಾರಿ ಪುಷ್ಪಾ ಅಮರನಾಥ್‌, ಪ್ರಧಾನ ಕಾರ್ಯದರ್ಶಿ ಬಸವರಾಜು, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲತಾ ಜಯಣ್ಣ, ಜಿಲ್ಲಾ‌ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ನಗರಸಭಾ ಸದಸ್ಯರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಇದ್ದರು.

ಲೋಕಸಭೆ ಚುನಾವಣೆ: ಧ್ರುವನಾರಾಯಣ ಅಭ್ಯರ್ಥಿ?

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದಕಾಂಗ್ರೆಸ್‌ ಅಭ್ಯರ್ಥಿಯಾಗಿ ಧ್ರುವನಾರಾಯಣ ಅವರು ಮತ್ತೆ ಕಣಕ್ಕಿಳಿಯಲಿದ್ದಾರೆಯೇ?

ಪಕ್ಷದ ಜಿಲ್ಲಾ ಮುಖಂಡರ ಮಾತು ಕೇಳಿದರೆ, ಈ ಸಾಧ್ಯತೆ ನಿಚ್ಚಳವಾಗಿದೆ.‌

ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡುವ ಸಂದರ್ಭದಲ್ಲಿ, ‘ಧ್ರುವನಾರಾಯಣ ಅವರನ್ನು ಮತ್ತೆ ಗೆಲ್ಲಿಸಲು ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.

‘ಸಂಸದರಾಗಿ ಧ್ರುವನಾರಾಯಣ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅವರ ಕಾರ್ಯವನ್ನುಮಾಧ್ಯಮಗಳೂ ಶ್ಲಾಘಿಸಿವೆ. ಹಾಗಾಗಿ ಅವರನ್ನು ಮತ್ತೆ ಲೋಕಸಭೆಗೆ ಕಳಿಸುವ ಜವಾಬ್ದಾರಿ ನಮ್ಮ ಮೇಲಿದೆ. 10 ವರ್ಷಗಳಲ್ಲಿ ಅವರು ಮಾಡಿರುವ ಸಾಧನೆಯನ್ನು ನಾವು ಜನರ ಮುಂದಿಡಬೇಕು’ ಎಂದರು.

ದೇಣಿಗೆ ನೀಡಲು ಮನವಿ

ಪಕ್ಷವನ್ನು ಸಂಘಟಿಸಲು ದೇಣಿಗೆ ನೀಡುವಂತೆ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಧ್ರುವನಾರಾಯಣ ಮನವಿ ಮಾಡಿದರು.

ಪಕ್ಷವು ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ದೇಣಿಗೆ ಸಂಗ್ರಹಿಸಲು ನಿರ್ಧರಿಸಿದೆ. ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಇದು ಯಶಸ್ವಿಯಾಗಿದೆ. ಪಕ್ಷವನ್ನು ಕಟ್ಟಲು ಪ್ರತಿಯೊಬ್ಬರು ಸಣ್ಣ ಕಾಣಿಕೆ ನೀಡಬೇಕು ಎಂದರು.

ಪ್ರತಿ ಬೂತ್‌ಗೂ ₹10 ಸಾವಿರ ಸಂಗ್ರಹಿಸಲು ಗುರಿ ನೀಡಲಾಗಿದೆ. ಈ ಮೊತ್ತದಲ್ಲಿ ಶೇ 25ರಷ್ಟು ಬೂತ್‌ಗೆ ಹೋಗುತ್ತದೆ. ಶೇ 50ರಷ್ಟು ಎಐಸಿಸಿಗೆ, ಶೇ 15ರಷ್ಟು ಜಿಲ್ಲಾ ಸಮಿತಿಗೆ ಹಾಗೂ ಶೇ 10ರಷ್ಟು ಮೊತ್ತ ಕೆಪಿಸಿಸಿಗೆ ಹೋಗಲಿದೆ ಎಂದು ಹೇಳಿದರು.

ಗಾಂಧೀಜಿ ಗುಣಗಾನ

ಇದಕ್ಕೂ ಮೊದಲು ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಗಾಂಧೀಜಿ ಹಾಗೂ ಅಕ್ಟೋಬರ್‌ 2ರಂದು ಜನಿಸಿದ ಮಾಜಿ ಪ್ರಧಾನಿ ಲಾಲ್‌ ಬಹದೂರ್‌ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪಕ್ಷದ ಮುಖಂಡರು ಪುಷ್ಪನಮನ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಮುಖಂಡರಾದ ಎಸ್‌. ಬಾಲರಾಜು, ಎ.ಆರ್‌. ಕೃಷ್ಣಮೂರ್ತಿ, ಆರ್‌.ಧ್ರುವನಾರಾಯಣ ಅವರು ಗಾಂಧೀಜಿ ಅವರ ಗುಣಗಾನ ಮಾಡಿದರು. ಅವರು ಸ್ವಾತಂತ್ರ್ಯಕ್ಕೆ ಕೊಟ್ಟ ಕೊಡುಗೆ, ಅಸ್ಪೃಶ್ಯತೆ ನಿವಾರಣೆಗೆ ನಡೆಸಿದ ಹೋರಾಟಗಳನ್ನು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT