ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗದಲ್ಲಿ ಬಂದ್‌ ನೀರಸ

Last Updated 29 ಮೇ 2018, 9:38 IST
ಅಕ್ಷರ ಗಾತ್ರ

ಶಿವಮೊಗ್ಗ: ರೈತರ ಸಾಲ ಮನ್ನಾ ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ಸ್ವಯಂಪ್ರೇರಿತ ಕರ್ನಾಟಕ ಬಂದ್‌ಗೆ ಶಿವಮೊಗ್ಗ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಿವಮೊಗ್ಗದ ನಗರದ ಎಲ್ಲಾ ಭಾಗಗಳಲ್ಲೂ ಬಂದ್‌ನ ಯಾವುದೇ ಲಕ್ಷಣಗಳು ಕಂಡು ಬರಲಿಲ್ಲ. ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ಹೋಟೆಲ್, ಚಿತ್ರಮಂದಿರ, ಆಟೊ, ಟ್ಯಾಕ್ಸಿ, ಸರ್ಕಾರಿ ಹಾಗೂ ಖಾಸಗಿ ಬಸ್ ಸೇವೆ ಎಂದಿನಂತೆ ಮುಂದುವರಿದಿತ್ತು. ಬಂದ್‌ಗೂ ತಮಗೂ ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ನಗರದ ಪ್ರಮುಖ ವಾಣಿಜ್ಯ ಸ್ಥಳಗಳಾದ ಬಿ.ಎಚ್.ರಸ್ತೆ, ಗಾಂಧಿಬಜಾರ್, ನೆಹರೂ ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ, ಸವಳಂಗ ರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳು ಎಂದಿನಂತೆ ತೆರೆದಿದ್ದವು.

ನಗರ ಸಾರಿಗೆ ಬಸ್‌ಗಳು ಎಂದಿನಂತೆ ಸಂಚರಿಸಿದರೆ ಬೆಳಿಗ್ಗೆಯಿಂದಲೇ ಕೆಎಸ್ಆರ್‌ಟಿಸಿ ಬಸ್‌ಗಳು ದೂರದೂರುಗಳಿಗೆ ತೆರಳುತ್ತಿರುವುದು ಕಂಡುಬಂದಿತು. ಶಿವಮೊಗ್ಗ-ಭದ್ರಾವತಿ ನಡುವೆ ಕೆಎಸ್ಆರ್‌ಟಿಸಿ ಬಸ್ ಸಂಚಾರದಲ್ಲೂ ಯಾವುದೇ ವ್ಯತ್ಯಯ ಕಂಡುಬರಲಿಲ್ಲ. ಉಳಿದಂತೆ ಜನಸಂಚಾರ ಎಂದಿನಂತೆಯೇ ಇತ್ತು. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಪ್ರಮುಖ ಸ್ಥಳ ಹಾಗೂ ವೃತ್ತಗಳಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಶಾಲಾ ಕಾಲೇಜುಗಳು ಎಂದಿನಂತೆ ನಡೆದವು.

ಬಿಜೆಪಿಯಿಂದ ಪ್ರತಿಭಟನೆ:
ನಗರದ ಕೆಲವೆಡೆ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಶಿವಮೂರ್ತಿ ವೃತ್ತದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಮಹಾವೀರ ವೃತ್ತದಲ್ಲಿ ಅಂಗಡಿ ಮುಚ್ಚುವಂತೆ ಒತ್ತಾಯಿಸಿದರು. ಒತ್ತಾಯಪೂರ್ವಕವಾಗಿ ಬಂದ್ ಮಾಡದಂತೆ ಪೊಲೀಸರು ಪ್ರತಿಭಟನಾನಿರತರಿಗೆ ಸೂಚಿಸಿದರು. ಇದೇ ವೇಳೆ ಶಿವಮೂರ್ತಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

ಬಿಜೆಪಿಯ ಕೆಲ ಕಾರ್ಯಕರ್ತರು ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಮೆರವಣಿಗೆ ನಡೆಸಿ ಶಿವಪ್ಪ ನಾಯಕ ವೃತ್ತದಲ್ಲಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರು ಮಾತನಾಡಿ, ‘ರೈತರ ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಚನಭ್ರಷ್ಟರಾಗಿದ್ದಾರೆ. ಶೀಘ್ರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

ಬಿಜೆಪಿ ರೈತ ಮೋರ್ಚಾದ ಮುಖಂಡರಾದ ಪವಿತ್ರಾ ರಾಮಯ್ಯ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರಮುಖರಾದ ಎಚ್.ಸಿ.ಬಸವರಾಜಪ್ಪ, ಡಿ.ಎಸ್.ಅರುಣ್, ಎಸ್.ಎನ್.ಚನ್ನಬಸಪ್ಪ, ದೇವರಾಜ್, ಮಾಲತೇಶ್, ಜಯಣ್ಣ, ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT