ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗದ ಸಾಲಮನ್ನಾ; ರೈತ ಆತ್ಮಹತ್ಯೆ

Last Updated 6 ಜುಲೈ 2018, 11:39 IST
ಅಕ್ಷರ ಗಾತ್ರ

ಚಾಮರಾಜನಗರ/ಸಂತೇಮರಹಳ್ಳಿ: ಈ ವರ್ಷದಫೆಬ್ರುವರಿ ತಿಂಗಳಲ್ಲಿ ತಾನುಮಾಡಿದ್ದ ಸಾಲ ಮನ್ನಾ ಆಗುವುದಿಲ್ಲ ಎಂದು ಮನನೊಂದು ತಾಲ್ಲೂಕಿನ ದೇಮಹಳ್ಳಿ ಗ್ರಾಮದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಕ್ಕಸ್ವಾಮಿ (45) ಅಲಿಯಾಸ್‌ ಬೆಳ್ಳಪ್ಪ ಮೃತಪ‍ಟ್ಟ ರೈತ. ಅಪ್ಪ ನಂಜುಡಪ್ಪ ಹಾಗೂ ತಾತನ ಹೆಸರಿನಲ್ಲಿ 2 ಎಕರೆ 28 ಗುಂಟೆ ಜಮೀನನ್ನು ಅವರು ಹೊಂದಿದ್ದರು. ಈ ವರ್ಷದ ಫೆಬ್ರುವರಿಯಲ್ಲಿ ದೇಮಹಳ್ಳಿ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ನಲ್ಲಿ ₹40 ಸಾವಿರ ಮತ್ತು ಉಮ್ಮತ್ತೂರು ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ ₹45 ಸಾವಿರ ಸಾಲ ಮಾಡಿದ್ದರು. ಇದಲ್ಲದೇ ಖಾಸಗಿಯವರಿಂದ ಸುಮಾರು ₹2 ಲಕ್ಷ‌ದಷ್ಟು ಕೈ ಸಾಲವನ್ನೂ ಪಡೆದಿದ್ದರು.

ಒಂದು ಎಕರೆ ಜಮೀನಿನಲ್ಲಿಬಾಳೆ ಹಾಗೂ ಉಳಿದ ಜಾಗದಲ್ಲಿ ಹೆಸರು ಮತ್ತು ಉದ್ದು ಬೆಳೆದಿದ್ದರು. ಕೃಷಿಯ ಜೊತೆಗೆಹಪ್ಪಳ, ಖಾರಾ ಪುಡಿಯ ವ್ಯಾಪಾರವನ್ನೂ ಚಿಕ್ಕಸ್ವಾಮಿ ಮಾಡುತ್ತಿದ್ದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗುರುವಾರ ಮಂಡಿಸಿದ್ದ ಬಜೆಟ್‌ನಲ್ಲಿ 2017ರ ಡಿಸೆಂಬರ್‌ 31ರವರೆಗೆ ರೈತರು ಮಾಡಿದ್ದ ₹2 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಈ ವರ್ಷದ ಆರಂಭದಲ್ಲಿ ತಾನು ಮಾಡಿರುವ ಸಾಲ ಮನ್ನಾ ಆಗುವುದಿಲ್ಲ ಎಂದು ನೊಂದುಕೊಂಡ ಚಿಕ್ಕಸ್ವಾಮಿ ಅವರು ಗುರುವಾರ ರಾತ್ರಿ 2 ಗಂಟೆಗೆ ಮನೆಯ ತೊಲೆಗೆ ತೊಟ್ಟಿದ್ದ ಪಂಚೆಯಿಂದ ನೇಣುಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.

ಒತ್ತಾಡುತ್ತಿದ್ದ ಚಿಕ್ಕಸ್ವಾಮಿಯವರನ್ನು ಅವರ ತಂದೆ ನಂಜುಡಪ್ಪ ಕೆಳಗಿಳಿಸಿ ಸಂಬಂಧಿಕರು ಹಾಗೂ ಸ್ಥಳೀಯರ ನೆರವಿನಿಂದ ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಶುಕ್ರವಾರ ಬೆಳಿಗ್ಗೆ 7.30ರ ಹೊತ್ತಿಗೆ ಅವರು ಮೃತಪಟ್ಟಿದ್ದಾರೆ.

ಮೃತ ರೈತರ ಮನೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಪ್ರಸನ್ನ, ಡಿವೈಎಸ್‌ಪಿ ಜಯಕುಮಾರ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ರಾಜೇಂದ್ರ, ಸಬ್‌ ಇನ್‌ಸ್ಪೆಕ್ಟರ್‌ ಸಿದ್ದಯ್ಯ, ಕೃಷಿ ಅಧಿಕಾರಿ ಸುಂದರಮ್ಮ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT