ಬುಧವಾರ, ಜುಲೈ 28, 2021
20 °C
ಅರಿಕೆರೆ ಗ್ರಾಮದ ಸರ್ವೇ ನಂಬರ್ 10 ರಲ್ಲಿ ಇರುವ ಬೆಟ್ಟದ ಮೇಲಿನ ಶಿಲುಬೆ ತೆರವಿಗೆ ಹಿಂದೂ ಸಂಘಟನೆಗಳ ಆಗ್ರಹ

ಚಿಕ್ಕಬಳ್ಳಾಪುರ: ಮಿಷನರಿ ವಿರುದ್ಧ ಗೋಮಾಳ ಕಬಳಿಕೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂಸೇಪಾಳ್ಯದ ಬೆಟ್ಟದಲ್ಲಿ ನೆಟ್ಟಿರುವ ಬೃಹತ್ ಸಿಲುಬೆ, ಬಂಡೆಯ ಮೇಲೆ ಚಿತ್ರಿಸಿರುವ ಏಸು ಚಿತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಆವಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಿಕೆರೆ ಗ್ರಾಮದ ಸರ್ವೇ ನಂಬರ್ 10 ರಲ್ಲಿ ಕ್ರೈಸ್ತ ಮಿಷನರಿಯೊಂದು ಗೋಮಾಳ ಜಾಗ ಅತಿಕ್ರಮಣ ಮಾಡಿದೆ. ಅದನ್ನು ಕೂಡಲೇ ತೆರವುಗೊಳಿಸಬೇಕು ಎಂಬ ಆಗ್ರಹ ಹಿಂದೂಪರ ಸಂಘಟನೆಗಳಿಂದ ವ್ಯಕ್ತವಾಗುತ್ತಿದೆ.

ಅರಿಕೆರೆಯಲ್ಲಿ ಕ್ರೈಸ್ತ ಮಿಷನರಿಯಿಂದ ನಡೆದಿರುವ ಗೋಮಾಳ ಕಬಳಿಕೆ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ರಾಘವೇಂದ್ರ ಜೆಟ್ಟಿ ಎಂಬುವರು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಜೂನ್ 2 ರಂದು ಲಿಖಿತ ದೂರು ನೀಡಿದ್ದಾರೆ.

‘ಅರಿಕೆರೆ ಗ್ರಾಮದ ಸರ್ವೇ ನಂಬರ್ 10 ರಲ್ಲಿರುವ 173 ಗೋಮಾಳದ ಪೈಕಿ ಕ್ರೈಸ್ತ ಮಿಷನರಿ ಸುಮಾರು 170 ಎಕರೆಯಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಅಲ್ಲಲ್ಲಿ ಶಿಲುಬೆ ನೆಟ್ಟು, ಬೆಟ್ಟದ ಮೇಲೆ ದೊಡ್ಡ ಶಿಬುಲು ನೆಟ್ಟು ಗೋಮಾಳ ಕಬಳಿಕೆ ಹುನ್ನಾರ ನಡೆಸಿದೆ. ಕೂಡಲೇ ಒತ್ತುವರಿ ತೆರವುಗೊಳಿಸಬೇಕು’ ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

‘ಸೂಸೇಪಾಳ್ಯ ಬೆಟ್ಟದ ಮೇಲೆ 2014ರಲ್ಲಿ ಸುಮಾರು 14 ಅಡಿ ಎತ್ತರದ ಶಿಲುಬೆಯನ್ನು ನೆಟ್ಟು, ಅಲ್ಲಿ ಪ್ರಾರ್ಥನಾ ಕೂಟಗಳನ್ನು ಏರ್ಪಡಿಸುವ ಮೂಲಕ ಗೋಮಾಳ ಜಾಗ ಕಬಳಿಸುವ ಮತ್ತು ಅನ್ಯ ಧರ್ಮಗಳ ಮುಗ್ಧ ಜನರನ್ನು ಮತಾಂತರಿಸುವ ಹುನ್ನಾರ ನಡೆದಿದೆ’ ಎಂದು ರಾಘವೇಂದ್ರ ಆರೋಪಿಸಿದರು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಬಿ.ವಿ.ಮಂಜುನಾಥ್, ‘ಸುಮಾರು 40 ವರ್ಷಗಳ ಹಿಂದೆ ಸಿಎಸ್‌ಐ ಆಸ್ಪತ್ರೆಯಲ್ಲಿ ಸಾಮಾಜಿಕ ಸೇವೆ ಮಾಡಲು ಬಂದಿದ್ದ ಇಂಗ್ಲೆಡ್‌ ಮೂಲ ಮಹಿಳೆಯೊಬ್ಬರು ಸೂಸೇಪಾಳ್ಯದ ಶಿಕ್ಷಕರೊಬ್ಬರನ್ನು ಮದುವೆಯಾದರು. ನಂತರದಲ್ಲಿ ಸೂಸೇಪಾಳ್ಯದಲ್ಲಿ ಚರ್ಚ್‌ ಸ್ಥಾಪಿಸುವ ಮೂಲಕ ಅನ್ಯಧರ್ಮದವರನ್ನು ಮತಾಂತರ ಕೆಲಸಕ್ಕೆ ಶುರುವಿಟ್ಟರು’ ಎಂದು ಹೇಳಿದರು.

‘ಇವತ್ತು ಸೂಸೇಪಾಳ್ಯ ಗ್ರಾಮದಲ್ಲಿ ಶೇ 90ರಷ್ಟು ಜನರನ್ನು ಮತಾಂತರ ಮಾಡಲಾಗಿದೆ. ಪ್ರಾರ್ಥನೆ ನೆಪದಲ್ಲಿ ಬಡವರ ಮಕ್ಕಳನ್ನು ಕರೆತಂದು ಬಿರಿಯಾನಿ ಕೊಟ್ಟು ಆಮಿಷ ಒಡ್ಡಿ ಮತಾಂತರ ಮಾಡಲಾಗುತ್ತಿದೆ. ಇವತ್ತು ಸೂಸೇಪಾಳ್ಯ ಬ್ರಿಟಿಷ್‌ ಕಾಲೋನಿಯಂತೆ ಭಾಸವಾಗುತ್ತದೆ’ ಎಂದು ಆರೋಪಿಸಿದರು.

‘ಮುಗ್ಧ ಜನರನ್ನು ಮತಾಂತರಿಸುವುದು ಮಾತ್ರವಲ್ಲದೆ ಸರ್ಕಾರಿ ಜಾಗದಲ್ಲಿ ಸಿಕ್ಕ ಸಿಕ್ಕಲ್ಲಿ ಸಿಲುಬೆಗಳನ್ನು ನೆಟ್ಟು ಅತಿಕ್ರಮಣ ಮಾಡಿಕೊಳ್ಳಲಾಗುತ್ತಿದೆ. ಇವತ್ತು ಸೂಸೇಪಾಳ್ಯದ ಬೆಟ್ಟದ ಸುತ್ತ ಅನೈತಿಕ ಚಟುವಟಿಕೆಗಳು ಹೆಚ್ಚಿವೆ. ಬೆಟ್ಟದ ಬಳಿ ಇರುವ ಆಂಜನೇಯ ಸ್ವಾಮಿ ದೇವಾಲಯದ ಬಳಿ ಉದ್ದೇಶಪೂರ್ವಕವಾಗಿಯೇ ಮದ್ಯದ ಬಾಟಲಿ ಎಸೆಯುವುದು, ಗಲೀಜು ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಕನಕಪುರ ತಾಲ್ಲೂಕಿನ ಹಾರೋಬೆಲೆ ಬಳಿಯ ಮುನೇಶ್ವರ ಸ್ವಾಮಿ ಬೆಟ್ಟದ ಮಾದರಿಯಲ್ಲಿಯೇ ಇಲ್ಲೂ ಕ್ರೈಸ್ತ ಮಿಷನರಿಯ ಭೂಕಬಳಿಕೆ ಸಂಚು ಸ್ಪಷ್ಟವಾಗಿ ಗೋಚರಿಸುತ್ತಿದೆ. ಬೆಟ್ಟದಲ್ಲಿ ಧಾರ್ಮಿಕ ಆಚರಣೆಗೆ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಕೂಡಲೇ ಒತ್ತುವರಿ ತೆರವುಗೊಳಿಸಬೇಕು. ಈ ವಿಚಾರದಲ್ಲಿ ಆರ್‌ಎಸ್‌ಎಸ್‌, ಹಿಂದೂ ಜಾಗರಣ ವೇದಿಕೆ, ಭಜರಂಗದಳ, ಯುವ ಬಿಗ್ರೇಡ್‌ ಸಹಯೋಗದಲ್ಲಿ ಹೋರಾಟ ರೂಪಿಸಲಾಗುತ್ತಿದೆ’ ಎಂದರು.

ಈ ಕುರಿತು ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್ ಅವರನ್ನು ವಿಚಾರಿಸಿದರೆ, ‘ಅರಿಕೆರೆ ಗ್ರಾಮದಲ್ಲಿ ಗೋಮಾಳ ಕಬಳಿಕೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸುತ್ತೇವೆ’ ಎಂದರು.

ಭೂಕಬಳಿಕೆ ಮಾಡಿಲ್ಲ

ಈ ಆರೋಪ ಕುರಿತಂತೆ ಆವಲಗುರ್ಕಿ ಗ್ರಾಮ ಪಂಚಾಯಿತಿಯ ಸೂಸೇಪಾಳ್ಯದ ಸದಸ್ಯೆ, ಸ್ಥಳೀಯ ಚರ್ಚ್‌ ಭಕ್ತರಾದ ಪುಷ್ಪಲತಾ ಅವರನ್ನು ಪ್ರಶ್ನಿಸಿದರೆ, ‘ಬೆಟ್ಟದ ಮೇಲೆ ಅನೇಕ ದಶಕಗಳ ಹಿಂದೆ ಶಿಬುಲೆ ನೆಡಸಲಾಗಿದೆ. ಅಲ್ಲಿ ಪ್ರಾರ್ಥನೆ ಮಾತ್ರ ಮಾಡಲಾಗುತ್ತಿದೆ. ಯಾವುದೇ ಭೂಕಬಳಿಕೆ ಕೆಲಸ ನಡೆದಿಲ್ಲ’ ಎಂದು ತಿಳಿಸಿದರು.

* ಅರಿಕೆರೆಯಲ್ಲಿ ಕ್ರಿಶ್ಚಿಯನ್ ಮಿಷನರಿಯಿಂದ ಆಗಿರುವ ಭೂಕಬಳಿಕೆ ತೆರವು ಮಾಡುವವರೆಗೂ ಹೋರಾಟ ಮಾಡುತ್ತೇವೆ.

– ಡಾ.ಬಿ.ವಿ.ಮಂಜುನಾಥ್, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಘಟಕದ ಉಪಾಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು