ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಮಿಟ್ಟಹಳ್ಳಿಯಲ್ಲಿ ಮತ್ತೆ ನಿಗೂಢ ಶಬ್ದ

Last Updated 11 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಮಿಟ್ಟಹಳ್ಳಿಯಲ್ಲಿ ಗುರುವಾರ ನಸುಕಿನಿಂದ ಬೆಳಿಗ್ಗೆ 10 ಗಂಟೆವರೆಗೆ ಮತ್ತೇ ನಾಲ್ಕು ಬಾರಿ ನಿಗೂಢ ಶಬ್ದ ಕೇಳಿ ಬಂದಿದೆ. ಆತಂಕಕ್ಕೆ ಒಳಗಾದ ಕೆಲವು ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ಗುಳೆ ಹೋಗುತ್ತಿದ್ದಾರೆ.

ರಾತ್ರಿ 1.45, ಬೆಳಿಗ್ಗೆ 5.10, 5.40 ಹಾಗೂ ಬೆಳಿಗ್ಗೆ 9.50 ಗಂಟೆಗೆ ಬಾರಿ ಶಬ್ದ ಕೇಳಿಬಂದಿದೆ. ಅದರಲ್ಲೂ ಬೆಳಿಗ್ಗೆ 5.40 ಮತ್ತು ಬೆಳಿಗ್ಗೆ 9.50ರಲ್ಲಿ ಕೇಳಿಬಂದ ಸದ್ದು ಭಯಾನಕವಾಗಿತ್ತು. ಇದರಿಂದ ಭಯವಾಗಿ ಮನೆಯಿಂದ ಹೊರ ಬಂದು ರಸ್ತೆಗಳಲ್ಲಿ ಕಾಲ ಕಳೆಯುತ್ತಿರುವುದಾಗಿ ಗ್ರಾಮಸ್ಥರು ಅನುಭವ ಹಂಚಿಕೊಂಡಿದ್ದಾರೆ.

ಒಂದೆಡೆ ಜಡಿಮಳೆ, ಮತ್ತೊಂದೆಡೆ ಮನೆಗಳಿಗೆ ಹೋಗಲು ಹಿಂಜರಿಯುತ್ತಿರುವ ಜನರ ಮುಖದಲ್ಲಿ ಆತಂಕ ಕಾಣುತ್ತಿದೆ. ಜಡಿಮಳೆಯಲ್ಲಿ ಛತ್ರಿ ಹಿಡಿದು ಬಯಲು, ಬೀದಿಗಳಲ್ಲಿ ನಿಂತಿದ್ದಾರೆ.

ಗ್ರಾಮದಲ್ಲಿ ಮಂಗಳವಾರ ರಾತ್ರಿ ಮೊದಲ ಬಾರಿಗೆ ಭೂಮಿ ಕಂಪಿಸಿದ ಅನುಭವವಾಗಿತ್ತು. ನಂತರ ಮೂರು ಬಾರಿ ಶಬ್ದ ಕೇಳಿಬಂದಿತ್ತು. ಮನೆಯಲ್ಲಿಯ ಪಾತ್ರೆ ಮತ್ತಿತರ ಸಾಮಗ್ರಿಗಳು ಅಲುಗಾಡಿದ್ದವು. ರಾತ್ರಿಯೇ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು.

ಬುಧವಾರ ಜಿಲ್ಲಾಧಿಕಾರಿ ಆರ್. ಲತಾ ಮತ್ತು ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಗ್ರಾಮಕ್ಕೆ ಭೇಟಿ ನೀಡಿದ್ದರು. ‘ಇದು ಖಂಡಿತ ಭೂಕಂಪವಲ್ಲ. ಜನರು ಹೆದರುವ ಅವಶ್ಯಕತೆ ಇಲ್ಲ. ಶಬ್ದದ ಮೂಲದ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡುತ್ತಾರೆ’ ಎಂದು ಭರವಸೆ ನೀಡಿದ್ದರು.

‘ಅಧಿಕಾರಿಗಳು ಭರವಸೆ ನೀಡಿ ಹೋದ ಕೆಲವೇ ಗಂಟೆಗಳಲ್ಲಿ ನಾಲ್ಕು ಬಾರಿ ಶಬ್ದ ಕೇಳಿಬಂದಿರುವುದು ಗ್ರಾಮದ ಜನರ ನಿದ್ದೆಗೆಡಿಸಿದೆ. ಜನರು ಎರಡು ರಾತ್ರಿ ನಿದ್ದೆ ಇಲ್ಲದೆ ಪರದಾಡಿದ್ದಾರೆ. ಕೆಲವು ಮಕ್ಕಳು ಭಯದಿಂದ ಜ್ವರಪೀಡಿತರಾಗಿದ್ದಾರೆ. ಕೆಲವರು ಗ್ರಾಮ ತೊರೆಯಲು ನಿರ್ಧರಿಸಿದ್ದಾರೆ’ ಎಂದು ಗ್ರಾಮಸ್ಥ ಶಶಿಕುಮಾರ್ ತಿಳಿಸಿದರು.

‘ರಾತ್ರಿ ಢಂ, ಢಂ.. ಎಂಬ ಶಬ್ದ ಕೇಳಿಬರುತ್ತಿದೆ. ಮನೆ ಮೇಲೆ ಏನೋ ದೊಡ್ಡ ಬಿದ್ದ ಅನುಭವವಾಗುತ್ತಿದೆ. ಕೆಲವು ಕಡೆ ಮನೆಯ ಗೋಡೆಗಳು ಬಿರುಕುಬಿಟ್ಟಿವೆ. ಮಧ್ಯರಾತ್ರಿಯಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ಜನರು ಮನೆಗಳಿಂದ ಹೊರಗೆ ಬಂದು ಜಡಿಮಳೆಯಲ್ಲಿ ನಲುಗುತ್ತಿದ್ದಾರೆ’ ಎಂದರು.

ಶಬ್ದದ ನಿಗೂಢತೆಯನ್ನು ಬೇಗ ನಿವಾರಿಸಬೇಕು. ಮನೆಗಳಲ್ಲಿ ಮಹಿಳೆಯರು ಅಡುಗೆ ಮಾಡುತ್ತಿಲ್ಲ. ವಿಜ್ಞಾನಿಗಳನ್ನು ಕರೆಸಿ ಶಬ್ದದ ನಿಗೂಢತೆಯನ್ನು ಭೇದಿಸಬೇಕು. ಅಧಿಕಾರಿಗಳು ಲಘುವಾಗಿ ಕಾಣದೇ ಗಂಭೀರವಾಗಿ ಪರಿಗಣಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT