ಸೋಮವಾರ, ಜನವರಿ 18, 2021
15 °C

ಜೆಡಿಎಸ್‌ ಬೆಂಬಲಿತರ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ‘ಕಳೆದ ಹಲವಾರು ವರ್ಷಗಳ ಗ್ರಾಮ ಪಂಚಾಯಿತಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿಹೆಚ್ಚು ಮಂದಿ ಜೆಡಿಎಸ್ ಬೆಂಬಲಿತರನ್ನು ಶಿಡ್ಲಘಟ್ಟ ಕ್ಷೇತ್ರದ ಜನತೆ ಬೆಂಬಲಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಗುರಿ’ ಎಂದು ಜೆಡಿಎಸ್ ಮುಖಂಡ ಮೇಲೂರು ಬಿ.ಎನ್. ರವಿಕುಮಾರ್ ತಿಳಿಸಿದರು.

ತಾಲ್ಲೂಕಿನ ಮೇಲೂರಿನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಶಿಡ್ಲಘಟ್ಟ ಕ್ಷೇತ್ರದ ಒಟ್ಟು 30 ಗ್ರಾಮ ಪಂಚಾಯಿತಿಗಳಲ್ಲಿ 460 ಮಂದಿ ಜೆಡಿಎಸ್ ಬೆಂಬಲಿತರು ಸ್ಪರ್ಧಿಸಿದ್ದರು. ಅವರಲ್ಲಿ 268 ಮಂದಿ ಜನರ ಆಶೀರ್ವಾದದೊಂದಿಗೆ ಜಯಶೀಲರಾಗಿದ್ದಾರೆ. 15 ಗ್ರಾಮ ಪಂಚಾಯಿತಿಗಳಲ್ಲಿ ನಮಗೆ ಬಹುಮತ ಸಿಕ್ಕಿದೆ. 4 ರಲ್ಲಿ ಸಮಬಲರಾಗಿದ್ದೇವೆ. ಮಾಜಿ ಸಚಿವ ಹಾಗೂ ಹಾಲಿ ಶಾಸಕರ ಸ್ವಗ್ರಾಮ ಹಂಡಿಗನಾಳ ಗ್ರಾಮ ಪಂಚಾಯಿತಿ ಜೆಡಿಎಸ್ ಪಾಲಾಗಿರುವುದು ಸಂತಸ ತಂದಿದೆ ಎಂದರು.

ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ದುರಾಡಳಿತವನ್ನು ವಿರೋಧಿಸಿ 2003ರಲ್ಲಿ ರಾಜಕಾರಣ ಪ್ರವೇಶಿಸಿದೆ. ಅಧಿಕಾರ ಅಥವಾ ಹಣ ಬಯಸಿ ರಾಜಕಾರಣಕ್ಕೆ ಬರಲಿಲ್ಲ. ಜನರ ನೋವನ್ನು ನಿವಾರಿಸುವುದು, ಕ್ಷೇತ್ರದ ಅಭಿವೃದ್ಧಿ ಮಾಡುವುದು ನನ್ನ ಧ್ಯೇಯ. ಗ್ರಾಮ ಪಂಚಾಯಿತಿಯಲ್ಲಿ ಗೆದ್ದವರು ಜನಸೇವೆ ಮಾಡಿ, ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಲು ಸಹಕರಿಸಬೇಕೆಂದು ಹೇಳಿದರು.

ಮುಖಂಡ ತಾದೂರು ರಘು ಮಾತನಾಡಿ, ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಒಳಒಪ್ಪಂದ ಮಾಡಿಕೊಂಡು ಕೆಟ್ಟ ರಾಜಕಾರಣವನ್ನು ಮಾಡಿದ್ದಾರೆ. ಇವರ ವಿರುದ್ಧ ಸೈದ್ಧಾಂತಿಕವಾಗಿ ಜೆಡಿಎಸ್ ಬೆಂಬಲಿಗರು ಸ್ಪರ್ಧಿಸಿ ಜನಬೆಂಬಲದಿಂದ ಜಯ ಪಡೆದಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಸ್ಥಾಯಿಸಮಿತಿ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಮುಖಂಡ ರವಿಕುಮಾರ್ ಜನರಲ್ಲಿ ಬೆರೆತು, ವಿಶ್ವಾಸ ಗಳಿಸಿರುವುದಕ್ಕೆ ಈ ಚುನಾವಣೆ ಫಲಿತಾಂಶವೇ ನಿದರ್ಶನ. ಮುಂದಿನ ದಿನಗಳಲ್ಲಿ ಶಿಡ್ಲಘಟ್ಟ ಕ್ಷೇತ್ರದ ಜನತೆ ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ಬೆಂಬಲಿಸಲಿದ್ದಾರೆ ಎಂದರು. 

ಮುಖಂಡ ನಂದನವನಂ ಶ್ರೀರಾಮರೆಡ್ಡಿ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದವರು ವಿನಯವಂತರಾಗಿ ಜನಸೇವೆ ಮಾಡಬೇಕು ಎಂದರು.

ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಕೆ. ರಾಜಶೇಖರ್, ಡಾ.ಧನಂಜಯ ರೆಡ್ಡಿ, ಹುಜಗೂರು ರಾಮಣ್ಣ, ಗೋಪಾಲ್, ಮೇಲೂರು ಆರ್.ಎ. ಉಮೇಶ್, ಕೆ.ಎಸ್. ಮಂಜುನಾಥ್, ಮುಗಿಲಡಿಪಿ ನಂಜಪ್ಪ, ಶಶಿಕುಮಾರ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು