ಗುರುವಾರ , ಜುಲೈ 29, 2021
23 °C
ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದ ಶಾಸಕ ಎಂ. ಕೃಷ್ಣಾರೆಡ್ಡಿ

‘ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ‘ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ತಂತ್ರಜ್ಞಾನಗಳ ಸಂಶೋಧನೆಯಾಗುತ್ತಿದೆ. ಹಾಗಾಗಿ, ವಿದ್ಯಾರ್ಥಿಗಳು ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು’ ಎಂದು ಶಾಸಕ ಎಂ. ಕೃಷ್ಣಾರೆಡ್ಡಿ ಸಲಹೆ ನೀಡಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜು, ಸರ್ಕಾರಿ ಬಾಲಕರ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಟ್ಯಾಬ್, ಲ್ಯಾಪ್‌ಟಾಪ್‌ನಂತಹ ಪರಿಕರಗಳು ಅಗತ್ಯ. ಬಹುತೇಕ ವಿದ್ಯಾರ್ಥಿಗಳು ಇವುಗಳನ್ನು ಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಟ್ಯಾಬ್ ನೀಡುತ್ತಿರುವುದು ಅತ್ಯುತ್ತಮ ಯೋಜನೆಯಾಗಿದೆ. ಕಳೆದ ವರ್ಷ ಕೆಲವರಿಗೆ ಮಾತ್ರ ವಿತರಿಸಲಾಗಿತ್ತು. ಈ ವರ್ಷ ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ವಿತರಿಸುತ್ತಿರುವುದು ಶ್ಲಾಘನೀಯ ಎಂದು
ತಿಳಿಸಿದರು.

ವಿದ್ಯಾರ್ಥಿಗಳು ಟ್ಯಾಬ್‌ಗಳನ್ನು ಜೋಪಾನವಾಗಿಟ್ಟುಕೊಂಡು ಪಾಠ ಸೇರಿದಂತೆ ಜ್ಞಾನವೃದ್ಧಿಗಾಗಿ ಮಾತ್ರ ಬಳಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನ ಎರಡು ಅಲುಗಿನ ಕತ್ತಿಯಂತೆ. ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರುತ್ತದೆ. ವಿದ್ಯಾರ್ಥಿಗಳು ಒಳ್ಳೆಯದಕ್ಕೆ ಮಾತ್ರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲ ಪ್ರೊ.ಕೆ.ಆರ್. ಶಿವಶಂಕರಪ್ರಸಾದ್, ನಗರಸಭೆ ಸದಸ್ಯರಾದ ಮಂಜುನಾಥ್, ದೇವಳಂ ಶಂಕರ್, ನಟರಾಜ್, ಮುಖಂಡರಾದ ವಿ. ಅಮರ್, ಆಯಿಷಾ ಸುಲ್ತಾನಾ, ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.