ಚಿಂತಾಮಣಿ: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ನಗರಸಭೆ, ಪೊಲೀಸ್, ಬೆಸ್ಕಾಂ ಇಲಾಖೆ ಅನುಮತಿ ಪಡೆಯಬೇಕು ಎಂದು ಡಿವೈಎಸ್ಪಿ ಪಿ.ಮುರಳೀಧರ್ ಹೇಳಿದರು.
ನಗರ ಪೊಲೀಸ್ ಠಾಣೆ ವತಿಯಿಂದ ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ದಿನ ಸೇರಿದಂತೆ ಸಂಪೂರ್ಣ ಮಾಹಿತಿ ಅನುಮತಿ ಅರ್ಜಿಯೊಂದಿಗೆ ನೀಡಬೇಕು. ಪೊಲೀಸರು ಸೂಚಿಸಿದ ಮಾರ್ಗದಲ್ಲಿ ಮೆರವಣಿಗೆ ತೆರಳಬೇಕು.ಸೂಚಿಸಿದ ಸ್ಥಳದಲ್ಲೇ ವಿಸರ್ಜನೆ ಮಾಡಬೇಕು.ಖಾಸಗಿ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡುವವರು ಮಾಲೀಕರಿಂದಲೂ ಅನುಮತಿ ಪಡೆದಿರಬೇಕು. ನಿಯಮ ಮತ್ತು ನಿಬಂಧನೆ ಚಾಚೂ ತಪ್ಪದಂತೆ ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಭಕ್ತಿ ಸಂಕೇತವಾಗಿ ಆಚರಿಸುವ ಗಣೇಶ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು.ಯಾವುದೇ ಘಟನೆ ನಡೆದರೂ ಸಂಘಟಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಕಾಲ ಕಾಲಕ್ಕೆ ಪೊಲೀಸ್ ಇಲಾಖೆ ನೀಡುವ ಸಲಹೆ, ಸೂಚನೆ, ಆದೇಶ ಪಾಲಿಸುವ ಮೂಲಕ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಗಣೇಶ ಪ್ರತಿಷ್ಠಾಪನೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿಸರ್ಜನಾ ಸಮಯದಲ್ಲಿ ಕರ್ಕಶ ಸದ್ದು ಮಾಡುವುದನ್ನು ನಿಷೇಧಿಸಲಾಗಿದೆ. ಹಿರಿಯ ನಾಗರಿಕರು, ಅನಾರೋಗ್ಯದಿಂದ ಬಳಲುತ್ತಿರುವವರು, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಶಬ್ದ ಕಡಿಮೆ ಮಾಡಬೇಕು.ರಾತ್ರಿ 10ಗಂಟೆ ನಂತರ ಧ್ವನಿವರ್ಧಕ ಹಾವಳಿ ನಿಲ್ಲಿಸಬೇಕು.ಶಾಂತಿ ಸುವ್ಯವಸ್ಥೆಗೆ ಯಾವುದೇ ರೀತಿ ಅಡಚಣೆ ಆಗದಂತೆ ಶಾಂತಿಯುತವಾಗಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈದ್ ಮಿಲಾದ್ ಆಚರಣೆಯಲ್ಲಿ ಮುಸ್ಲಿಮರು ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು.ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಆಗದಂತೆ ಹಿರಿಯರು ಜವಾಬ್ದಾರಿ ತೆಗೆದುಕೊಳ್ಳಬೇಕು.ಯಾವುದಾದರೂ ಸಣ್ಣ ಪುಟ್ಟ ಘಟನೆ ನಡೆದರೆ ಕೂಡಲೇ ಹಿರಿಯರು ಮಧ್ಯಪ್ರವೇಶಿಸಿ ತಿಳಿಯಾಗಿಸಬೇಕು.ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಕೆ.ಆರ್.ಸುದರ್ಶನ ಯಾದವ್,ತಾಲ್ಲೂಕು ಪಂಚಾಯಿತಿ ಇಒ ಎಸ್.ಆನಂದ್,ಪೌರಾಯುಕ್ತ ಜಿ.ಎನ್.ಚಲಪತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್,ಗಣೇಶ ಪ್ರತಿಷ್ಠಾಪನೆ ಮಾಡುವ ಮತ್ತು ಈದ್ ಮಿಲಾದ್ ಆಚರಿಸುವ ಸಂಘಟಕರು,ಸಾರ್ವಜನಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.