ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ಭೂಮಿ ಆರೈಕೆ; ಕೈಹಿಡಿದ ಕೃಷಿ

ಮಿಶ್ರಬೇಸಾಯದ ಮೂಲಕ ಗಮನ ಸೆಳೆಯುತ್ತಿದೆ ಸಬ್ಬೇನಹಳ್ಳಿಯ ಸಿ.ಎಸ್. ನಾಗರಾಜು ಅವರ ಕುಟುಂಬ
Published 25 ಫೆಬ್ರುವರಿ 2024, 6:33 IST
Last Updated 25 ಫೆಬ್ರುವರಿ 2024, 6:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಮನೆಗೆ ಅಂಗಡಿಗಳಿಂದ ಅರ್ಧ ಲೀಟರ್ ಹಾಲು ತಂದು ಬಳಕೆ ಮಾಡಬಹುದು. ಅದೇ ಭೂಮಿ ಫಲವತ್ತಾಗಿರಬೇಕು. ನಮ್ಮ ತಲೆಮಾರುಗಳನ್ನು ಕಾಪಾಡಬೇಕು ಎಂದರೆ ನಾಟಿ ಹಸುಗಳ ಸಗಣಿ, ಗಂಜಲ ಭೂಮಿಗೆ ಬೀಳಬೇಕು’–ಇದು ತಾಲ್ಲೂಕಿನ ಸಬ್ಬೇನಹಳ್ಳಿಯ ಎಸ್‌.ಎನ್.ಜಗದೀಶ್ ಅವರ ಮಾತು.

ಸಬ್ಬೇನಹಳ್ಳಿಯ ಸಿ.ಎಸ್. ನಾಗರಾಜು ಅವರ ಕುಟುಂಬ ಮಿಶ್ರ ಬೇಸಾಯದ ಮೂಲಕ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗಮನ ಸೆಳೆದಿದೆ. ದಶಕಗಳಿಂದ ನಡೆಸಿಕೊಂಡು ಬಂದ ಕೃಷಿ ಕಾರ್ಯಗಳನ್ನು ಈಗ ನಾಗರಾಜ್ ಅವರು ತಮ್ಮ ಪುತ್ರ ಎಸ್‌.ಎನ್.ಜಗದೀಶ್ ಅವರ ಕೈಗಿತ್ತಿದ್ದಾರೆ. ‘ಕೃಷಿಯೇ ನಮ್ಮ ಆರ್ಥಿಕ ಮೂಲ’ ಎನ್ನುವುದನ್ನು ಅರಿತಿರುವ ಜಗದೀಶ್ ಸಹ, ವಂಶಪಾರಂಪರ್ಯವಾಗಿ ಬಂದ ಕೃಷಿ ಬದುಕನ್ನು ಮತ್ತಷ್ಟು ವಿಸ್ತರಿಸುತ್ತಿದ್ದಾರೆ. ಭೂಮಿ ಆರೈಕೆಯ ಅವರ ಮಾತುಗಳಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ತುಂಬು ಪ್ರೀತಿಯೂ ಇಣುಕುತ್ತದೆ.

ಒಂದೇ ಬೆಳೆಗೆ ಜೋತು ಬಿದ್ದರೆ ಕೈ ಸುಟ್ಟುಕೊಳ್ಳುವುದು ಖಚಿತ. ಇದನ್ನು ಮನಗಂಡು ಜಗದೀಶ್ ಅವರು ಮಿಶ್ರಬೇಸಾಯ ಕೈಗೊಂಡಿದ್ದಾರೆ. ಶರತ್, ಕೃಷ್ಣ ತಳಿಯ ದ್ರಾಕ್ಷಿ, ಸೇವಂತಿಗೆ, ಗುಲಾಬಿ ಮತ್ತಿತರ ನಾನಾ ಬಗೆಯ ಹೂ ಬೇಸಾಯ, ದಾಳಿಂಬೆ, ದ್ರಾಕ್ಷಿ ಮತ್ತಿತರ ಬೆಳೆಗಳ ವೈವಿಧ್ಯವನ್ನು ಅವರ ತೋಟದಲ್ಲಿ ಕಾಣಬಹುದು. ಎರಡು ಎಕರೆಯಲ್ಲಿ ದ್ರಾಕ್ಷಿ, ಮೂರರಿಂದ ನಾಲ್ಕು ಎಕರೆಯಲ್ಲಿ ಗುಲಾಬಿ, ಸೇವಂತಿಗೆ ಸೇರಿದಂತೆ ಹೂ ಬೇಸಾಯ, ಆರು ಎಕರೆಯಲ್ಲಿ ದಾಳಿಂಬೆ ಅವರ ತೋಟದಲ್ಲಿ ಇವೆ.

ಇಷ್ಟೆಲ್ಲಾ ಕೃಷಿ ಕಾರ್ಯಗಳಿಗೆ ಅವರು ಆರು ಕೊಳವೆ ಬಾವಿಗಳನ್ನು ಅವಲಂಬಿಸಿದ್ದಾರೆ. ಜೊತೆಗೆ ಗೀರ್ ಹಸುಗಳ ಜೀವಾಮೃತ ಜಮೀನಿಗೆ ಟಾನಿಕ್ ಎನಿಸಿದೆ. ಆರು ಗೀರ್ ಹಸುಗಳು ಇಲ್ಲಿಯವರೆಗೆ ಅವರ ಬಳಿ ಇದ್ದವು. ಇತ್ತೀಚೆಗೆ ಮೂರು ಹಸುಗಳನ್ನು ಮಾರಾಟ ಮಾಡಿದ್ದಾರೆ. ಗೀರ್ ಹಸುಗಳನ್ನು ಈ ಕುಟುಂಬ ಹಾಲು, ಮೊಸರು, ಬೆಣ್ಣೆ, ತುಪ್ಪಕ್ಕೆ ಸಾಕಿರುವುದಕ್ಕಿಂತ ಭೂಮಿಯ ಫಲವತ್ತತೆ ಕಾಯ್ದುಕೊಳ್ಳಲು ಸಾಕಿದೆ. 

ಗೀರ್ ಹಸುಗಳ ಗಂಜಲ ಮತ್ತು ಸಗಣಿಯಿಂದ ಜೀವಾಮೃತವನ್ನು ತಯಾರಿಸುತ್ತಿದ್ದಾರೆ. ಈ ಜೀವಾಮೃತ ಇಡೀ ಜಮೀನಿಗೆ ಟಾನಿಕ್ ಎನಿಸಿದೆ. ಕಾಂಪೋಸ್ಟ್ ಗೊಬ್ಬರ ತಯಾರಿಕೆಯನ್ನೂ ಇವರೇ ಮಾಡಿಕೊಳ್ಳುತ್ತಿದ್ದಾರೆ. 

‘ಎಚ್‌.ಎಫ್ ಹಸುಗಳು ಒಮ್ಮೆ ಸಗಣಿ ಹಾಕಿದರೆ ಅವುಗಳಲ್ಲಿ 300 ಜೀವಾಣುಗಳು ಇರುತ್ತವೆ. ಅದೇ ಗೀರ್, ಹಳ್ಳಿಕಾರ್ ಸೇರಿದಂತೆ ನಾಟಿ ಹಸುಗಳ ಸಗಣಿಯಲ್ಲಿ 3 ಸಾವಿರ ಜೀವಾಣುಗಳು ಇರುತ್ತವೆ. ಗೀರ್ ಹಸುಗಳನ್ನು ನಾವು ಜೀವಾಮೃತ ತಯಾರಿಕೆಯ ಉದ್ದೇಶದಿಂದ ಸಾಕಿದ್ದೇವೆ. ಈ ಕಾರಣದಿಂದಲೇ ನಮ್ಮ ಹಿರಿಯರು ನಾಟಿ ಹಸುಗಳ ಮಹತ್ವವನ್ನು ಸಾರಿದ್ದಾರೆ’ ಎನ್ನುತ್ತಾರೆ ಜಗದೀಶ್. 

‘ಮಿಶ್ರ ಬೇಸಾಯವು ಆರ್ಥಿಕವಾಗಿ ರೈತರನ್ನು ಸುಸ್ಥಿತಿಯಲ್ಲಿ ಇಡಲಿದೆ. ಹಂತ ಹಂತವಾಗಿ ಹೂ ಬೇಸಾಯ ಮಾಡುವುದರಿಂದ ನಿತ್ಯವೂ ಗಳಿಕೆ ಇದೆ’ ಎನ್ನುತ್ತಾರೆ.

 ಜಗದೀಶ್ ಅವರ ದಾಳಿಂಬೆ ಬೆಳೆ
 ಜಗದೀಶ್ ಅವರ ದಾಳಿಂಬೆ ಬೆಳೆ

‘ಭೂಮಿ ಫಲವತ್ತತೆ ಕಾಪಾಡಬೇಕಿದೆ’

‘ಭೂಮಿ ಫಲವತ್ತತೆ ಕಾಪಾಡಬೇಕು. ಇದು ನಮ್ಮ ಕರ್ತವ್ಯ ಸಹ. ಗೊಬ್ಬರವನ್ನು ನಾವು ಖರೀದಿಸುವುದಿಲ್ಲ. ಕಾಂಪೋಸ್ಟ್ ಗೊಬ್ಬರವನ್ನು ನಾವೇ ತಯಾರಿಸುತ್ತೇವೆ. ಈ ಹಿಂದೆ ಕೃಷಿ ಮಾಡುವವರಿಗೆ ಯಾವುದೇ ತಿಳಿವಳಿಕೆ ಇಲ್ಲದಿದ್ದರೂ ನಡೆಯುತ್ತಿತ್ತು. ಆದರೆ ಇಂದಿನ ಸಂದರ್ಭದಲ್ಲಿ ಕನಿಷ್ಠ ಮಟ್ಟದಲ್ಲಿಯಾದರೂ ಕೃಷಿಗೆ ಬಗ್ಗೆ ತಿಳಿವಳಿಕೆ ಇರಬೇಕು. ಇಲ್ಲದಿದ್ದರೆ ಕೃಷಿ ಬದುಕು ಕಷ್ಟ’ ಎನ್ನುತ್ತಾರೆ ಜಗದೀಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT