ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೀರ್ತಿಗೆ ಪಾತ್ರವಾದ ‘ಮೂರ್ತಿ’ ಕೃಷಿ

ಗೌರಿಬಿದನೂರು ತಾಲ್ಲೂಕಿನ ವೆಳಪಿ ಗ್ರಾಮದ ಪ್ರಗತಿಪರ ರೈತ ನರಸಿಂಹ ಮೂರ್ತಿ 
ನರಸಿಂಹಮೂರ್ತಿ ಕೆ.ಎನ್
Published 10 ಮಾರ್ಚ್ 2024, 6:37 IST
Last Updated 10 ಮಾರ್ಚ್ 2024, 6:37 IST
ಅಕ್ಷರ ಗಾತ್ರ

ಗೌರಿಬಿದನೂರು: ಅಡಿಕೆ, ತೆಂಗು, ನೇರಳೆ, ಮಾವು, ಸೀಬೆ, ಬದನೇಕಾಯಿ ಮೆಣಸಿನಕಾಯಿ,  ಬೀನ್ಸ್, ಸಿಲ್ವರ್, ತೇಗ–ಹೀಗೆ ಈ ಜಮೀನಿನಲ್ಲಿ ನಾನಾ ರೀತಿಯ ಬೆಳೆಗಳಿವೆ. ಈ ಮಿಶ್ರ ಬೇಸಾಯ ಮತ್ತು ಬೆಳೆ ವೈವಿಧ್ಯದ ಕಾರಣದಿಂದ ತಾಲ್ಲೂಕಿನ ವೆಳಪಿ ಗ್ರಾಮದ ಪ್ರಗತಿಪರ ರೈತ ನರಸಿಂಹ ಮೂರ್ತಿ  ವಿ.ಎನ್ ಸುತ್ತಲಿನ ಹಲವು ಗ್ರಾಮಗಳ ಗಮನ ಸೆಳೆಯುತ್ತಿದ್ದಾರೆ. 

10 ಎಕರೆಯ ಜಮೀನಿನಲ್ಲಿ ನಾನಾ ಬೆಳೆಗಳನ್ನು ಬೆಳೆದಿರುವ ಮೂರ್ತಿ ಅವರ ಕೃಷಿ ಸುತ್ತಲಿನ ಹಳ್ಳಿಗಳಲ್ಲಿ ಕೀರ್ತಿಗೆ ಪಾತ್ರವಾಗಿದೆ. ಜಿಲ್ಲಾ ಮಟ್ಟದಲ್ಲಿ ಉತ್ತಮ ಕೃಷಿಕ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.

ದೀರ್ಘಾವಧಿಯ ಬೆಳೆಗಳ ಆದಾಯವೂ ದೀರ್ಘವಾಧಿಯದ್ದೇ ಆಗಿರುತ್ತದೆ. 6 ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಹೆಚ್ಚಿನ ಆದಾಯ ನಿರೀಕ್ಷಿಸಬಹುದು. ತರಕಾರಿ ಬೆಳೆಗಳಾದ ಬದನೇಕಾಯಿ ಮೆಣಸಿನಕಾಯಿ, ಚಿಕ್ಕಡಿ ಕಾಯಿ, ಬೀನ್ಸ್ ಸೇರಿದಂತೆ ಅಲ್ಪಾವಧಿ ಬೆಳೆಗಳು ಕಾಲ ಕಾಲಕ್ಕೆ ಆದಾಯ ದೊರಕಿಸಿಕೊಡುತ್ತವೆ. ಇದರಿಂದ ಆರ್ಥಿಕ ಬದುಕು ಸಹ ಉತ್ತಮವಾಗಿ ಇರುತ್ತದೆ. ‌

ಮೂರ್ತಿ ಅವರು ಸಹ ಇದೇ ಸೂತ್ರ ಅನುಸರಿಸುತ್ತಿದ್ದಾರೆ. ಮಾರುಕಟ್ಟೆಯ ಏರಿಳಿತಗಳು ಮತ್ತು ದರದ ಲೆಕ್ಕಾಚಾರಗಳನ್ನು ಗಮನಿಸಿ ಬೆಳೆಗಳನ್ನು ಇಡುತ್ತಿದ್ದಾರೆ. ಮಿಶ್ರ ಬೇಸಾಯದಿಂದ ಒಂದು ಬೆಳೆ ಕೈಕೊಟ್ಟರೂ ಮತ್ತೊಂದು ಬೆಳೆ ಕೈಹಿಡಿಯುತ್ತಿದೆ. ಈ ಎಲ್ಲ ಲೆಕ್ಕಾಚಾರದಲ್ಲಿ ವರ್ಷಕ್ಕೆ ಅವರು ಸರಾಸರಿ ₹ 10 ಲಕ್ಷ ಆದಾಯಗಳಿಸುತ್ತಾರಂತೆ. ಈ ಆದಾಯ ಕೆಲವು ಸಮಯ ಹೆಚ್ಚಲೂ ಬಹುದು ಎನ್ನುತ್ತಾರೆ ನರಸಿಂಹಮೂರ್ತಿ.

ಜಮೀನಿನ ಬದುಗಳಲ್ಲಿ ಸಿಲ್ವರ್, ತೇಗ ಸೇರಿದಂತೆ ಭವಿಷ್ಯದಲ್ಲಿ ಉತ್ತಮ ಆದಾಯ ದೊರೆಯ ನೀಡುವ ಮರಗಳನ್ನು ಸಹ ಬೆಳೆಸಿದ್ದಾರೆ. ಸಾಕಿರುವ ಎಮ್ಮೆಗಳ ಹಾಲು, ಬೆಣ್ಣೆ, ತುಪ್ಪದ ಆದಾಯ  ಕುಟುಂಬದವನ್ನು ನಿರ್ವಹಿಸುತ್ತಿದೆಯಂತೆ.

ಮಿಶ್ರಬೇಸಾಯದ ಜೊತೆಗೆ ಎಮ್ಮೆ ಮತ್ತು ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಇಡೀ ವರ್ಷ ತಮ್ಮ ಜಮೀನಿಗೆ ಅಗತ್ಯವಾದ ಗೊಬ್ಬರವೂ ಇವುಗಳಿಂದ ಉತ್ಪತ್ತಿ ಆಗುತ್ತಿದೆ. ಇದರ ಜೊತೆಗೆ ಎಲೆ, ಜೇನುಸಾಕಾಣಿಕೆ ಸೇರಿದಂತೆ ಸಣ್ಣ ಪುಟ್ಟ ಚಟುವಟಿಕೆಗಳನ್ನು ಅವರ ಜಮೀನಿನಲ್ಲಿ ಕಾಣಬಹುದು. ಹೀಗೆ ಸಮಗ್ರ ಬೇಸಾಯಕ್ಕೆ ನರಸಿಂಹಮೂರ್ತಿ ಅವರ ಮಾದರಿ ಎನಿಸಿದ್ದಾರೆ.

ತಾಲ್ಲೂಕಿನ ತೋಟಗಾರಿಕಾ ಅಧಿಕಾರಿಗಳಿಂದ ಕಾಲಕಾಲಕ್ಕೆ ಮಾಹಿತಿ ಮಾಹಿತಿ ವಿನಿಮಯ ಮಾಡಿಕೊಂಡು. ಮಾರುಕಟ್ಟೆ ಅವಲೋಕನ ಮಾಡಿಕೊಂಡು ಹೆಚ್ಚಿನ ದರಕ್ಕೆ ಬೆಳೆಗಳನ್ನು ಮಾರುತ್ತಿದ್ದೇನೆ. ಇದರ ಜೊತೆಗೆ ಕೃಷಿಮೇಳ, ಹೆಸರಘಟ್ಟದ ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೆ  ಭೇಟಿ ನೀಡಿ ಸುಧಾರಿತ ಕೃಷಿ ಬಗ್ಗೆ ಸಕಾಲಕ್ಕೆ ಮಾಹಿತಿ  ಸಂಗ್ರಹಿಸುತ್ತಿರುತ್ತೇನೆ. ಅವರ ಮಾರ್ಗದರ್ಶನದಿಂದ  ಜಿಲ್ಲಾ ಉತ್ತಮ ರೈತ ಪ್ರಶಸ್ತಿ ಸಹ ಲಭಿಸಿದೆ ಎಂದು ಖುಷಿ ಹಂಚಿಕೊಳ್ಳುತ್ತಾರೆ.

ಇಷ್ಟೆಲ್ಲಾ ಕೃಷಿ ಚಟುವಟಿಕೆಗೆ ಅವರು ಅವಲಂಬಿಸಿರುವುದು ಎರಡು ಕೊಳವೆ ಬಾವಿಗಳನ್ನು. ಉತ್ಪನ್ನಗಳ ಮಾರಾಟಕ್ಕೆ ಚಿಕ್ಕಬಳ್ಳಾಪುರ, ಗೌರಿಬಿದನೂರು ಮತ್ತು ಬೆಂಗಳೂರು ಮಾರುಕಟ್ಟೆಗಳನ್ನು ಅವಲಂಬಿಸಿದ್ದಾರೆ. ಭೂಮಿ ತಾಯಿಯ ಸೇವೆ ಮಾಡಿದರೆ ಖಂಡಿತ ಕೈಬಿಡುವುದಿಲ್ಲ ಎನ್ನುತ್ತಾರೆ ನರಸಿಂಹಮೂರ್ತಿ.

ವಿಭಿನ್ನ ಪ್ರಯತ್ನದಿಂದ ಯಶಸ್ಸು ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತರು ಮಾಡುವ ವಿಭಿನ್ನ ಪ್ರಯತ್ನಗಳಿಂದಾಗಿ ಕೆಲವರು ಯಶಸ್ಸು ಹೊಂದುತ್ತಾರೆ. ಆದರೆ ಪ್ರಾಕೃತಿಕ ವಿಕೋಪಗಳಾದ ಅತಿವೃಷ್ಟಿ ಹಾಗೂ ಅನಾವೃಷ್ಟಿ ರೈತರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದೆ. ಸಂಪ್ರದಾಯಿಕವಾಗಿ ಬೆಳೆಯುವ ದೀರ್ಘಾವಧಿಯ ಬೆಳೆಗಳ ಜೊತೆಗೆ ಅಲ್ಪಾವಧಿಯಲ್ಲಿ ಹೆಚ್ಚಿನ ಇಳುವರಿ ನೀಡುವ ಬೆಳೆಗಳಿಗೆ ಪ್ರಯತ್ನ ಪಟ್ಟರೆ ಅದರಲ್ಲಿ ಯಶಸ್ಸು ಕಾಣಬಹುದು ಎನ್ನುತ್ತಾರೆ ನರಸಿಂಹಮೂರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT