ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿಲಯದಲ್ಲಿ ಮರಗಳ ಮಾರಣಹೋಮ

Last Updated 7 ಏಪ್ರಿಲ್ 2021, 4:59 IST
ಅಕ್ಷರ ಗಾತ್ರ

ಚಿಂತಾಮಣಿ: ‘ತಾಲ್ಲೂಕಿನ ಸಂತೇಕಲ್ಲಹಳ್ಳಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದ ಆವರಣದಲ್ಲಿದ್ದ ಲಕ್ಷಾಂತರ ಬೆಲೆ ಬಾಳುವ ಬೃಹತ್ ಮರಗಳ ಮಾರಣಹೋಮ ನಡೆದಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಗೋವಿಂದಪ್ಪ ಆರೋಪಿಸಿದ್ದಾರೆ.

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ್ದ ಸುದ್ದಿಗಾರರೊಂದಿಗೆ ಮಾತನಾಡಿ, ‘ಮರಗಳನ್ನು ರಕ್ಷಣೆ ಮಾಡಬೇಕಾದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶಾಮೀಲಾಗಿ ಲಕ್ಷಾಂತರ ಬೆಲೆ ಬಾಳುವ ಬೃಹತ್ ಮರಗಳನ್ನು ಕೇವಲ ₹26 ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಯಾರದೋ ಕೈವಾಡದಿಂದ ಸರ್ಕಾರಕ್ಕೆ ಲಕ್ಷಾಂತರ ನಷ್ಟ ಉಂಟು ಮಾಡಿದ್ದಾರೆ’ ಎಂದು ಆರೋಪಿಸಿದರು.

ಗ್ರಾಮಸ್ಥರು ಮರಗಳನ್ನು ತುಂಬಿದ್ದ ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಗಳ ಮಾರಾಟದ ಕುರಿತು ತನಿಖೆ ನಡೆಸಬೇಕು. ಅವ್ಯವಹಾರದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ಸರ್ಕಾರಿ ಪ್ರೌಢಶಾಲೆ ಮತ್ತು ವಿದ್ಯಾರ್ಥಿನಿಲಯದ ಆವರಣದಲ್ಲಿ ಗ್ರಾಮಸ್ಥರು ಬೆಳೆಸಿದ್ದ ಮರಗಳು, ಅರಣ್ಯ ಇಲಾಖೆಯ ಸ್ವತ್ತಲ್ಲ. ಬೃಹತ್ ಆಗಿ ಬೆಳೆದಿದ್ದ ಮರಗಳು 2.5-3.0 ಅಡಿ ಸುತ್ತಳತೆ ಹೊಂದಿದ್ದು ಚೆನ್ನಾಗಿ ಬಲಿತಿವೆ’ಎಂದು ಆರೋಪಿಸಿದರು.

‘ಅರಣ್ಯ ಇಲಾಖೆಯ ಅಧಿಕಾರಿ ಧನಲಕ್ಷ್ಮೀ ಅವರನ್ನು ಪ್ರಶ್ನೆ ಮಾಡಿದರೆ ಸಾರ್ವಜನಿಕರ ಮೇಲೆಯೇ ಮುಗಿಬೀಳುತ್ತಾರೆ. ಲಕ್ಷಾಂತರ ರೂ ಸರ್ಕಾರಕ್ಕೆ ನಷ್ಟವಾಗುತ್ತಿರುವುದನ್ನು ಉಳಿಸಲು ಹಾಗೂ ಭ್ರಷ್ಟಾಚಾರವನ್ನು ಬಯಲಿಗೆ ಎಳೆಯುವುದು ಮಾತ್ರ ನಮ್ಮ ಉದ್ದೇಶವಾಗಿದೆ. ನಮ್ಮ ಸ್ವಾರ್ಥ ಅಥವಾ ಬೇರೆ ಯಾವುದೇ ರೀತಿಯ ಕುತಂತ್ರ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಹಿರಿಯ ಅಧಿಕಾರಿಗಳು ಸ್ಥಳಕ್ಕೇ ಆಗಮಿಸಿ ತನಿಖೆ ನಡೆಸುವವರೆಗೂ ಲಾರಿಗಳನ್ನು ಹೋಗಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT