ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಸಂವಿಧಾನ ಶಿಲ್ಪಿಯ ಗುಣಗಾನ

ಜಿಲ್ಲೆಯಾದ್ಯಂತ ಅಂಬೇಡ್ಕರ್– ಬಾಬೂಜಿ ಜಯಂತಿ ಸಂಭ್ರಮ
Last Updated 15 ಏಪ್ರಿಲ್ 2022, 5:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಸರ್ಕಾರಿ ಕಚೇರಿಗಳು, ಸಂಘ– ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ ಗುರುವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಮಾಜಿ ಉಪ ಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ನಗರದಲ್ಲಿ ಅಂಬೇಡ್ಕರ್ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಯಿತು. ಬಿ.ಬಿ ರಸ್ತೆಯಲ್ಲಿ ಕೆಲವರು ಪಾನಕ, ಮಜ್ಜಿಗೆ ವಿತರಿಸಿದರು.

ಜಿಲ್ಲಾಡಳಿತ ಜಯಂತಿ ಅಂಗವಾಗಿ ‘ಸಾಮಾಜಿಕ ನ್ಯಾಯದೆಡೆಗೆ’ ಹೆಸರಿನ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿತ್ತು. ನಗರದ ಜೈಭೀಮ್ ವಿದ್ಯಾರ್ಥಿ ನಿಲಯದಿಂದ ಆರಂಭವಾದ ಜಾಥಾಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಚಾಲನೆ ನೀಡಿದರು.

ಗೌರಿಬಿದನೂರು ರಸ್ತೆ, ಬಿ.ಬಿ ರಸ್ತೆ ಮೂಲಕ ಜಾಥಾವು ಸರ್ಕಾರಿ ಪದವಿಪೂರ್ವ ಕಾಲೇಜು ಆವರಣ ತಲುಪಿತು. ಜಾಥಾದಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿ ಗಳು, ಸಾರ್ವಜನಿಕರು, ಅಧಿಕಾರಿಗಳು ಸಾಮಾಜಿಕ ನ್ಯಾಯದ ಜಾಗೃತಿ ಕುರಿತು ಪ್ರಮಾಣ ವಚನ ಸ್ವೀಕರಿಸಿದರು.

ನಂತರ ಸಚಿವರು ಜೈ ಭೀಮ್ ಪದವಿ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ, ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಅಂಬೇಡ್ಕರ್ ಹಾಗೂ ಬಾಬೂಜಿ ಭಾವಚಿತ್ರಗಳ, ಪಲ್ಲಕ್ಕಿ ರಥಗಳು, ಕಲಾ ತಂಡಗಳೊಂದಿಗೆ ನಗರದಲ್ಲಿ ಮೆರವಣಿಗೆ ನಡೆಯಿತು.

ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದ ನಂದಿ ರಂಗ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಅಂಬೇಡ್ಕರ್ ದೇಶಕ್ಕೆ ಶಕ್ತಿ ತುಂಬಿದ ಮಹನೀಯರು. ಅವರ ಆದರ್ಶ, ಚಿಂತನೆಗಳನ್ನು ಇಂದಿನ ಯುವಪೀಳಿಗೆ ರೂಢಿಸಿಕೊಳ್ಳಬೇಕು. ಸಮಾಜವು ಸಂವಿಧಾನದಲ್ಲಿ ಅಡಕವಾದ ವಿಷಯಗಳನ್ನು ಇನ್ನೂ‌ ಮೈಗೂಡಿಸಿಕೊಂಡಿಲ್ಲ. ಕಟ್ಟಕಡೆಯ ವ್ಯಕ್ತಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನತೆ ದೊರೆತಾದ ಅಂಬೇಡ್ಕರ್ ಅವರ ಆಶಯಗಳು ಈಡೇರುತ್ತವೆ’ ಎಂದು ಹೇಳಿದರು.

‘ಇಂದಿಗೂ ಎಷ್ಟೊ ಬಡವರಿಗೆ ಮನೆಗಳು, ನಿವೇಶಗಳು ಇಲ್ಲ. ಪಾಸ್ಟಿಕ್ ಶೀಟ್‌ಗಳ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಜಯಂತಿಗಳು ಭಾಷಣಕ್ಕೆ ಮಾತ್ರ ಸೀಮಿತಆಗಬಾರದು. ಸರ್ಕಾರ ಬಡವರು, ದೀನ ದಲಿತರ ಕಲ್ಯಾಣಕ್ಕೆ ಜಾರಿಗೊಳಿಸಿದ ಯೋಜನೆಗಳು ಅರ್ಹರನ್ನು ತಲುಪಬೇಕು’ ಎಂದು ಹೇಳಿದರು.

ಸಚಿವ ಡಾ.ಕೆ. ಸುಧಾಕರ್ ಮಾತನಾಡಿ, ಈ ಕಾರ್ಯಕ್ರಮಗಳುರಾಜಕೀಯ ಲಾಭಕ್ಕೆ ಅಲ್ಲ. ಶೋಷಿತ ವರ್ಗಗಳ ಪರವಾಗಿ ನಾವು ಇದ್ದೇವೆ ಎಂದರು.

ಅಂಬೇಡ್ಕರ್ ಜನ್ಮದಿನವನ್ನು ವಿಶ್ವಜ್ಞಾನ ದಿನವನ್ನಾಗಿ ಜಗತ್ತು ಆಚರಿಸುತ್ತಿದೆ. ಇದು ಭಾರತೀಯರಾದ ನಮಗೆ ಹೆಮ್ಮೆಯ ವಿಷಯ.ಅಂಬೇಡ್ಕರ್ ರಾಷ್ಟ್ರ‌ ನಾಯಕರು. ಅವರನ್ನು ‌ಜಾತಿಗೆ ಸೀಮಿತಗೊಳಿಸಬೇಡಿ.ಅಂಬೇಡ್ಕರ್ ಅವರು ಸಮಾನತೆ, ಸಹೋದರತ್ವ ಸಾಮಾಜಿಕ ನ್ಯಾಯಕ್ಕೆ ಇಡೀ ಬದುಕನ್ನು ಮುಡುಪಾಗಿಟ್ಟಿದ್ದರು ಎಂದು ಹೇಳಿದರು.

‘ಅಂಬೇಡ್ಕರ್ ಕುರಿತು ಪಿಎಚ್‌.ಡಿ ಮಾಡುವವರ ಸಂಪೂರ್ಣ ವೆಚ್ಚವನ್ನು ವೈಯಕ್ತಿಕವಾಗಿ ಭರಿಸುತ್ತೇನೆ. ಅಂಬೇಡ್ಕರ್ ಅವರ ಬಗ್ಗೆ ಹೆಚ್ಚಿನ ವಿದ್ಯಾರ್ಥಿಗಳು ಸಂಶೋಧನೆ ನಡೆಸಬೇಕು. ಬಾಬು ಜಗಜೀವನ ರಾಂ‌ ಮತ್ತು ಅಂಬೇಡ್ಕರ್ ಈ ದೇಶದ ಧ್ರುವತಾರೆಗಳು’ ಎಂದು ಹೇಳಿದರು.

‘ಎಲ್ಲ ಧರ್ಮ, ಭಾಷೆ ಜಾತಿಯ ಜನರಿಗೆ ಸಮಾನ ಅವಕಾಶ ಇದೆ. ಯಾರ ಮನಸ್ಸನ್ನು ನೋಯಿಸುವ ಕೆಲಸ ಮಾಡಬಾರದು.ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ಇಲ್ಲಿಗೆ ನಿಲ್ಲಬೇಕು.ಪರಸ್ಪರ ಪ್ರೀತಿಯಿಂದ ಬದುಕಬೇಕು’ ಎಂದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಸನ್ಮಾನ ಮಾಡಲಾಯಿತು. ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಶಿವಶಂಕರ್, ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಕೇಶವರೆಡ್ಡಿ, ದಲಿತ ಮುಖಂಡರಾದ ಬಾಲಕುಂಟಹಳ್ಳಿ ಗಂಗಾಧರ್, ಸು.ಧಾ. ವೆಂಕಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT