ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲ: ಆತಂಕ ಹೆಚ್ಚಿಸುವ ಗುಂಡಿಗಳು

ಜಿಲ್ಲಾ, ತಾಲ್ಲೂಕು ಕೇಂದ್ರಗಳ ರಸ್ತೆಗಳಲ್ಲಿ ಅಧ್ವಾನ: ಮಳೆಗಾಲದಲ್ಲಿ ಬಿಗಡಾಯಿಸುವ ಸಮಸ್ಯೆ
Last Updated 11 ಅಕ್ಟೋಬರ್ 2021, 2:26 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮಳೆ ಸುರಿದಾಗ ಪ್ರಮುಖ ರಸ್ತೆಗಳಲ್ಲಿ ಸಾಗುವ ಜನರ ಪಡಿಪಾಟಲು ಅಷ್ಟಿಷ್ಟಲ್ಲ. ಹೀಗೆ ನಗರಗಳ ರಸ್ತೆಗಳಲ್ಲಿಯೇ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಜನಪ್ರತಿನಿಧಿಗಳು, ಅಧಿಕಾರಿಗಳ‌ ಅಭಿವೃದ್ಧಿಯ ಮಂತ್ರವನ್ನು ರಸ್ತೆ ಗುಂಡಿಗಳು ಅಣಕಿಸುತ್ತವೆ.

ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿಯೇ ಇಂತಹ ಸ್ಥಿತಿಯಾದರೆ ಇನ್ನು ಹೋಬಳಿ ಕೇಂದ್ರಗಳು, ಗ್ರಾಮೀಣ ಭಾಗಗಳ ರಸ್ತೆಗಳ ಅವ್ಯವಸ್ಥೆ ದೊಡ್ಡದೇ ಆಗಿದೆ.

ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ಎಂ.ಜಿ.ರಸ್ತೆಯಲ್ಲಿ ಸಾಗುವಾಗ ಹಳ್ಖ, ದಿಣ್ಣೆಗಳಲ್ಲಿ ಪ್ರಯಾಣಿಸಿದ ಅನುಭವವಾಗುತ್ತದೆ. ಇತ್ತೀಚೆಗೆ ಈ ರಸ್ತೆಯ ಮಸೀದಿಯ ಮುಂದೆ ಒಂದಿಷ್ಟು ಮಣ್ಣು ಸುರಿದಿದ್ದರೂ ಅದಲ್ಲಿಯೂ ಗುಂಡಿಗಳಿಗೆ. ಎಂ.ಜಿ.ರಸ್ತೆಗೆ ಸಾಗುವಾಗ ಬಹಳಷ್ಟು ಕಡೆಗಳಲ್ಲಿ ಗುಂಡಿಗಳನ್ನು ಕಾಣಬಹುದು.

ಇನ್ನೂ ವಾಲ್ಮೀಕಿ ವಸತಿ ನಿಲಯದ ಮುಂಭಾಗದಲ್ಲಿರುವ ಖಾಲಿ ನಿವೇಶನ ಕಂ ರಸ್ತೆಯಲ್ಲಿ ಬೃಹತ್ ಗುಂಡಿಗಳೇ ಇವೆ. ಈ ಜಾಗ ವಿವಾದಕ್ಕೆ ಒಳಪಟ್ಟಿದೆ ಎನ್ನಲಾಗುತ್ತಿದೆ. ವಿವಾದದ ಸಾಧಕ ಬಾಧಕ ಪಕ್ಕಕ್ಕೆ ಇರಲಿ, ಆದರೆ ಈ ಗುಂಡಿಗಳು ಇಲ್ಲಿ ಸಂಚರಿಸುವವರಿಗೆ ತೀವ್ರ ಸಮಸ್ಯೆಯನ್ನೇ ತಂದಿಡುತ್ತಿವೆ.

ಕೆಳಗಿನ ತೋಟದ ಪಾಪಣ್ಣ ಲೇಔಟ್‌ಗೆ ಸಾಗುವ ದಾರಿ ತೀವ್ರವಾಗಿಯೇ ಅಧ್ವಾನವಾಗಿವೆ. ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳೇ ನಿರ್ಮಾಣವಾಗಿವೆ. ಮಳೆಗಾಲದಲ್ಲಿ ನೀರು ತುಂಬಿದಾಗ ಹೊಂಡಗಳು ಎಲ್ಲಿವೆ ಎಂದು ಎಚ್ಚರಿಕೆಯಿಂದಲೇ ವಾಹನಗಳನ್ನು
ಚಲಾಯಿಸಬೇಕು.

ನಗರಸಭೆ ಆಸುಪಾಸು, ಕೃಷ್ಣ ಚಿತ್ರ ಮಂದಿರದ ಮುಂಭಾಗ, ಗಂಗಮ್ಮನ ಗುಡಿ ರಸ್ತೆ, ಮಷ್ಟೂರು ರಸ್ತೆ...ಹೀಗೆ ಗುಂಡಿಗಳಿರುವ ರಸ್ತೆಗಳ ಪಟ್ಟಿ ದೊಡ್ಡದೇ ಇದೆ.

ರಸ್ತೆಗಳಲ್ಲಿ ದೊಡ್ಡ ಗುಂಡಿಗಳಿರುವುದರಿಂದ ವಾಹನ ಚಾಲಕರು ಜೀವ ಕೈಯಲ್ಲಿಡಿದುಕೊಂಡು ವಾಹನ ಚಾಲನೆ ಮಾಡಬೇಕಿದೆ. ನಡೆದಾಡುವವರು ಮೈಯೆಲ್ಲಾ ಕಣ್ಣಾಗಿಸಿಕೊಂಡು ಸಾಗಬೇಕು. ಮಳೆಯ ನೀರಿನಿಂದ ಆವೃತ್ತವಾಗಿರುವ ಗುಂಡಿಗಳನ್ನು ದಾಟುವಾಗ ಸವಾರರು ಸ್ವಲ್ಪ ಯಾಮಾರಿದರೂ ಅನಾಹುತ ತಪ್ಪಿದ್ದಲ್ಲ. ವಾಹನಗಳು ಮುಗುಚಿ ಬೀಳಬೇಕಾಗುತ್ತದೆ. ಪಾದಚಾರಿಗಳ ಬಟ್ಟೆಗಳು ಕೆಸರಾಗುತ್ತವೆ.

ಸಾಮಾನ್ಯ ದಿನಗಳಲ್ಲಿ ವಾಹನ ಸವಾರರು ಈ ಗುಂಡಿಗಳನ್ನು ದಾಟಿಸುತ್ತ ಸಾಗುವರು. ಆದರೆ ಮಳೆಗಾಲದಲ್ಲಿ ಮಾತ್ರ ತಮ್ಮ ವಾಹನಗಳನ್ನು ಚಲಾಯಿಸುವಾಗ ಹರಸಾಹಸ ಮಾಡುವರು. ಗುಂಡಿಗೆ ವಾಹನವಿಳಿದು ಅ ಕೆಸರು ದಾರಿಹೋಕರಿಗೆ ಸಿಡಿದರೆ ಎನ್ನುವ ಭಯ ಇದ್ದೇ ಇರುತ್ತದೆ.

ಅಡಿಗಡಿಗೂ ಗುಂಡಿಗಳು

ಚಿಂತಾಮಣಿ: ನಗರದ ಬಹುತೇಕ ರಸ್ತೆಗಳು ಅಧ್ವಾನವಾಗಿವೆ. ರಸ್ತೆಗಳಲ್ಲಿ ಗುಂಡಿಗಳು ಬಿದ್ದು ವಾಹನ ಸವಾರರು ಮತ್ತು ಪಾದಚಾರಿಗಳು ಪ್ರಾಣವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ.

ಅಂಜನಿ ಬಡಾವಣೆ, ಫಿಲ್ಟರ್ ಬೆಡ್ ಕಡೆ ಹೋಗುವ ರಸ್ತೆಯು ಕೆಸರು ಗದ್ದೆಯಂತಾಗಿದೆ. ಗುಂಡಿಗಳಿಂದ ಕೂಡಿರುವ ರಸ್ತೆಯು ಇತರೆ ದಿನಗಳಲ್ಲಿ ದೂಳನ್ನು ಎಬ್ಬಿಸುತ್ತದೆ. ಮಳೆಗಾಲದಲ್ಲಿ ಕೊಚ್ಚೆಯ ರಾಡಿ ಆಗುತ್ತದೆ.

ನಗರ ಚೇಳೂರ ರಸ್ತೆಯ ಎಪಿಎಂಸಿ ಮುಂಭಾಗದಲ್ಲಿ, ಎಂ.ಜಿ.ರಸ್ತೆಯ ಕೆಲವು ಭಾಗಗಳಲ್ಲಿ ಗುಂಡಿಗಳಿಂದ ಸಂಚರಿಸಲು ಕಷ್ಟವಾಗಿದೆ. ನಗರದ ಒಳಭಾಗದ ವಿವಿಧ ವಾರ್ಡ್ ಗಳ ರಸ್ತೆಗಳನ್ನು ಕೇಳುವಂತೆಯೇ ಇಲ್ಲ. ಗಾಂಧಿನಗರ, ಟಿಪ್ಪುನಗರ, ಮಹಬೂಬ್ ನಗರ, ವಿನಾಯಕ ನಗರ, ರೈಲ್ವೆ ಬಿಡ್ಜ್ ಅಕ್ಕಪಕ್ಕದ ಬಡಾವಣೆಗಳ ಜನರು ಮಳೆಬಂದರೆ ಹೊರಗಡೆ ಬರುವುದೇ ದುಸ್ತರವಾಗುತ್ತದೆ.

ನಗರ ಪೊಲೀಸ್ ಠಾಣೆ. ಪತ್ರಕರ್ತರ ಭವನ, ಜಿಲ್ಲಾ ಪಂಚಾಯಿತಿ ತಾಂತ್ರಿಕ ವಿಭಾಗದ ಕಚೇರಿ ಸೇರಿದಂತೆ ಹಲವಾರು ಕಚೇರಿಗಳು ಇರುವ ಅಂಜನಿ ಬಡಾವಣೆಯ ಮುಖ್ಯ ರಸ್ತೆಯು ಪೊಲೀಸ್ ಠಾಣೆ ಮುಂಭಾಗದಲ್ಲಿ ಕೆಸರು ಗದ್ದೆಯಾಗಿದೆ. ದ್ವಿಚಕ್ರವಾಹನ, ಕಾರುಗಳು ಮತ್ತಿತರ ವಾಹಗಳ ಚಾಲಕರಿಗೆ ಈ ರಸ್ತೆಗಳನ್ನು ಕ್ರಮಿಸುವುದು ಕಠಿಣ ಸವಾಲಾಗಿದೆ.

ಅಧಿಕಾರಿಗಳು, ಜನಪ್ರತಿನಿಗಳು ಇತ್ತ ಕಡೆ ಗಮನಹರಿಸಬೇಕು. ನಗರದ ಒಳಭಾಗದ ಎಲ್ಲ ಬಡಾವಣೆಗಳ ರಸ್ತೆಗಳ ಪಾಡು ಇದೇ ಆಗಿದೆ. ಕೂಡಲೇ ರಸ್ತೆಗಳ ದುರಸ್ತಿಗೆ ಕ್ರಮಕೈಗೊಂಡು ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು ಎಂದು ನಾಗರಿಕ ಟಿ.ಎಸ್.ನಾಗರಾಜ್ ಒತ್ತಾಯಿಸುತ್ತಾರೆ.

ಹಾಳಾದ ರಸ್ತೆಗಳು

ಬಾಗೇಪಲ್ಲಿ: ಪಟ್ಟಣದ 23 ವಾರ್ಡ್‍ಗಳಲ್ಲಿ ‌ಒಳಚರಂಡಿ ಕಾಮಗಾರಿಗೆ ಬಹುತೇಕವಾಗಿ ರಸ್ತೆಗಳು ಹಾಳಾಗಿವೆ. ಜನರು ಈ ಹದಗೆಟ್ಟ ರಸ್ತೆಗಳಲ್ಲಿಯೇ ಸಂಚರಿಸುವರು.

ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಯನ್ನು ಅವೈಜ್ಞಾನಿಕವಾಗಿ, ಕಳಪೆಯಾಗಿದೆ. ಕೆಲ ವಾರ್ಡ್‍ಗಳ ಬೀದಿಗಳಲ್ಲಿ ಹಾಕಿದ್ದ ಸಿಮೆಂಟ್ ರಸ್ತೆಗಳು ಹಾಳಾಗಿವೆ. ಪೈಪ್‌ಲೈನ್ ಹಾಕಲು ಕಾಲುವೆಗಳನ್ನು ತೆಗೆಯಲಾಗಿದೆ. ಗುಂಡಿಗಳನ್ನು ಅಗೆದಿದ್ದಾರೆ. ಕಾಲುವೆಗಳನ್ನು, ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿಲ್ಲ.

ಜಲ್ಲಿ, ಕಲ್ಲುಗಳನ್ನು ಎಲ್ಲೆಂದರಲ್ಲಿ ಬೀಸಾಡಿದ್ದಾರೆ. ಪಟ್ಟಣದ ಸಂತೇಮೈದಾನದ ರಸ್ತೆಯಲ್ಲಿ ಎಲ್‍ಐಸಿ ಕಚೇರಿ ಮುಂದೆ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಗುಂಡಿಗೆ ಅಡ್ಡವಾಗಿ ಬ್ಯಾರಿಕೇಡ್‌ಗಳನ್ನು ಇಡಲಾಗಿದೆ.

ಪಟ್ಟಣದ ವಾಲ್ಮೀಕಿ, ಅಂಬೇಡ್ಕರ್, ಕಾರ್ಮಿಕರ ಕಾಲೊನಿ ಸೇರಿದಂತೆ ಕಿರಿದಾದ ರಸ್ತೆಗಳಲ್ಲಿ ಜನರು ಓಡಾಡಲು ಆಗುತ್ತಿಲ್ಲ. ದ್ವಿಚಕ್ರ ವಾಹನಗಳು, ಆಟೊ, ಕಾರುಗಳು ಹಾಗೂ ಬೀದಿಬದಿ ವ್ಯಾಪಾರಿಗಳು ಬಂಡಿಗಳನ್ನು ಸರ್ಕಸ್ ಮಾದರಿಯಲ್ಲಿ ನೂಕಲು ಹರಸಾಹಸ ಮಾಡುತ್ತಿದ್ದಾರೆ.

ಅಧಿಕಾರಿಗಳು ಗಮನವಹಿಸಿ

ಗುಂಡಿಗಳಿಂದ ಅನೇಕ ಬಾರಿ ದ್ವಿಚಕ್ರವಾಹನ ಸವಾರರು ಅಪಘಾತಕ್ಕೇ ಈಡಾಗಿರುವ ಪ್ರಕರಣಗಳು ವರದಿಯಾಗಿವೆ. ಜನಪ್ರತಿನಿಧಿಗಳು ಈ ಕಡೆ ಗಮನಹರಿಸಬೇಕು. ಅಧ್ವಾನವಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು

ವರಲಕ್ಷ್ಮಿ, ಚಿಂತಾಮಣಿ

ಗುಂಡಿಗಳನ್ನು ಮುಚ್ಚಿಲ್ಲ


ಒಳಚರಂಡಿ ಕಾಮಗಾರಿ ಅತ್ಯಂತ ಕಳಪೆಮಟ್ಟದಲ್ಲಿ ಮಾಡಿದ್ದಾರೆ. ಅವ್ಯವಹಾರ, ಸರ್ಕಾರದ ಹಣ ದುರುಪಯೋಗ ಆಗಿದೆ. ಇದುವರಿಗೂ ಆಗಿರುವ ಒಳಚರಂಡಿ ಕಾಮಗಾರಿಯ ಬಗ್ಗೆ ಹಿರಿಯ ಅಧಿಕಾರಿಗಳಿಂದ ತನಿಖೆ ಆಗಬೇಕು. ಗುಂಡಿಗಳನ್ನು, ಕಾಲುವೆಗಳನ್ನು ಮುಚ್ಚಿಲ್ಲ. ರಸ್ತೆಗಳನ್ನು, ಚರಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು.

ಎಚ್.ಎ.ರಾಮಲಿಂಗಪ್ಪ, ಬಾಗೇಪಲ್ಲಿ

ಇಚ್ಛಾಶಕ್ತಿ ಕೊರತೆ


ನಗರದ ಬಹಳಷ್ಟು ಕಡೆಯ ರಸ್ತೆಗಳಲ್ಲಿ ಬಹಳ ದಿನಗಳಿಂದ ಗುಂಡಿಗಳಿವೆ. ಆಗೊಮ್ಮೆ ಈಗೊಮ್ಮೆ ಮಣ್ಣು, ಜಲ್ಲಿ ಹಾಕುವರು ಅಷ್ಟೇ. ಶಾಶ್ವತ ಪರಿಹಾರಗಳಿಲ್ಲ. ಮಳೆಗಾಲದಲ್ಲಿ ಜನರನ್ನು ಈ ಗುಂಡಿಗಳು ಮತ್ತಷ್ಟು ಆತಂಕಕ್ಕೆ ದೂಡುತ್ತವೆ.

ಗಣೇಶ್, ಚಿಕ್ಕಬಳ್ಳಾಪುರ

ಡಿ.ಎಂ.ಕುರ್ಕೆ ಪ್ರಶಾಂತ್, ಎಂ.ರಾಮಕೃಷ್ಣಪ್ಪ, ಪಿ.ಎಸ್.ರಾಜೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT