ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ತರಕಾರಿ ವಹಿವಾಟಿಗೆ ಸಮಯದ ಹಗ್ಗಜಗ್ಗಾಟ

ಇಂದಿನಿಂದ ಎಪಿಎಂಸಿಯಲ್ಲಿ ತರಕಾರಿ ವಹಿವಾಟು ಬೆಳಿಗ್ಗೆ 11ಕ್ಕೆ ಆರಂಭ
Published 31 ಮೇ 2024, 6:23 IST
Last Updated 31 ಮೇ 2024, 6:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸದಾ ಒಂದಲ್ಲಾ ಒಂದು ಜಟಾಪಟಿ ಕಾರಣದಿಂದ ಸುದ್ದಿಯಾಗುವ ನಗರದ ಎಪಿಎಂಸಿ ಮಾರುಕಟ್ಟೆಯ ಅಂಗಳ ಈಗ ಮತ್ತೆ ‘ಸಮಯದ ಜಟಾಪಟಿ’ಯ ಕಾರಣದಿಂದ ಸುದ್ದಿ ಆಗುತ್ತಿದೆ. ಈಗಾಗಲೇ ಈ ವಿಚಾರವು ಎಪಿಎಂಸಿಯ ತರಕಾರಿ ಮಾರುಕಟ್ಟೆ ಅಂಗಳದಲ್ಲಿ ಚರ್ಚೆಗೂ ಕಾರಣವಾಗಿದೆ.

ಕೋವಿಡ್ ಪೂರ್ವದಲ್ಲಿ ಎಪಿಎಂಸಿಯಲ್ಲಿ ತರಕಾರಿ ವಹಿವಾಟು ಬೆಳಿಗ್ಗೆ 11ರಿಂದ ಆರಂಭವಾಗುತ್ತಿತ್ತು. ಆದರೆ ಕೋವಿಡ್ ವೇಳೆ ಸಮಯದ ಮಿತಿಯನ್ನು ಇಳಿಕೆ ಮಾಡಲಾಯಿತು. ಅಂದಿನಿಂದ ಬೆಳಿಗ್ಗೆ 7ಕ್ಕೆ ತರಕಾರಿ ವಹಿವಾಟು ನಡೆಯುತ್ತಿತ್ತು. 

ಆದರೆ ಈಗ ಈ ಹಿಂದಿನ ರೀತಿಯಲ್ಲಿಯೇ ಎಪಿಎಂಸಿಯಲ್ಲಿ 11 ಗಂಟೆಯಿಂದ ತರಕಾರಿ ವಹಿವಾಟು ಆರಂಭಿಸಬೇಕು ಎಂದು ತರಕಾರಿ ವರ್ತಕರ ಸಂಘವು ಎಪಿಎಂಸಿ ಕಾರ್ಯದರ್ಶಿ ಅವರಿಗೆ ಮನವಿ ಮಾಡಿದೆ. ಈ ಬಗ್ಗೆ ಸಂಘದ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. ಶುಕ್ರವಾರ (ಮೇ 31)ದಿಂದಲೇ 11 ಗಂಟೆಗೆ ವಹಿವಾಟು ಆರಂಭಿಸಲು ಮುಂದಾಗಿದೆ.

ಎಪಿಎಂಸಿಯಲ್ಲಿ ತರಕಾರಿ ವಹಿವಾಟು ನಡೆಸುವ 45 ಮಂದಿ ಕಮಿಷನ್ ಏಜೆಂಟರು ಇದ್ದಾರೆ. ಹೀಗೆ ತರಕಾರಿ ವರ್ತಕರು ಸಮಯ ಬದಲಾವಣೆಗೆ ನಿರ್ಧರಿಸಿರುವುದು ಕೆಲವು ರೈತರು ಮತ್ತು ರೈತ ಸಂಘದ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. 

ರೈತ ಸಂಘದ ಸದಸ್ಯರು ಹಾಗೂ ಕೆಲ ರೈತರು 11 ಗಂಟೆಗೆ ವಹಿವಾಟು ಬೇಡ. ಈಗ ನಡೆಯುತ್ತಿರುವಂತೆಯೇ ಬೆಳಿಗ್ಗೆ 7ರಿಂದಲೇ ತರಕಾರಿ ವಹಿವಾಟು ನಡೆಸಬೇಕು ಎಂದು ತಹಶೀಲ್ದಾರ್ ಅನಿಲ್ ಅವರಿಗೆ ಗುರುವಾರ ಮನವಿ ಮಾಡಿದ್ದಾರೆ.  

 ‘11 ಗಂಟೆಯಿಂದ ವಹಿವಾಟು ನಡೆದರೆ ರೈತರಿಗೆ ಅನ್ಯಾಯವಾಗುತ್ತದೆ. ತಹಶೀಲ್ದಾರರು ಈ ವಿಚಾರವಾಗಿ ಮಧ್ಯಪ್ರವೇಶಿಸಬೇಕು. ಬೆಳಿಗ್ಗೆ 7ರಿಂದಲೇ ವಹಿವಾಟ ಆರಂಭವಾಗುವಂತೆ ಕ್ರಮವಹಿಸಬೇಕು. ರೈತರಿಗೆ ಆಗುವ ಅನ್ಯಾಯ ಮತ್ತು ನಷ್ಟ ತಪ್ಪಿಸಬೇಕು ಎಂದು ರೈತ ಸಂಘದ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.

ಬೆಳಿಗ್ಗೆ ತರಕಾರಿ ಕಟಾವು ಮಾಡಿ ಎಲ್ಲರೂ ಏಕಕಾಲಕ್ಕೆ ಮಾರುಕಟ್ಟೆಗೆ ಬಂದರೆ ಬೆಲೆ ಕುಸಿಯುತ್ತದೆ. ರೈತರು ಕೂಲಿಕಾರ್ಮಿಕರನ್ನು ನಂಬಿ ಕೆಲಸಕ್ಕೆ ಮೊರೆ ಹೋದರೆ ನಷ್ಟ ಉಂಟಾಗುತ್ತದೆ. ಎಪಿಎಂಸಿಯು ಮಧ್ಯಪ್ರವೇಶಿಸಿ ಈ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

ಹಳೆಯ ನಿಯಮವಷ್ಟೇ: ‘ಬಾಗೇಪಲ್ಲಿಯಲ್ಲಿ ಈಗಾಗಲೇ ಮಧ್ಯಾಹ್ನ ತರಕಾರಿ ವಹಿವಾಟು ನಡೆಯುತ್ತಿದೆ. ಕೋವಿಡ್ ಪೂರ್ವದಲ್ಲಿ ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿಯೂ 11ರ ನಂತರ ತರಕಾರಿ ವಹಿವಾಟು ನಡೆಯುತ್ತಿತ್ತು. ಈ ಹಿಂದಿನ ರೀತಿಯಲ್ಲಿಯೇ ಬೆಳಿಗ್ಗೆ ವಹಿವಾಟು ನಡೆಸಲು ತೀರ್ಮಾನಿಸಲಾಗಿದೆ’ ಎಂದು ತರಕಾರಿ ವರ್ತಕರು ತಿಳಿಸುವರು. 

ಬೆಳಿಗ್ಗೆ ತರಕಾರಿ ಕಟಾವು ಮಾಡಿಕೊಂಡು ಮಾರುಕಟ್ಟೆಗೆ ತಂದರೆ ತಾಜಾ ಇರುತ್ತದೆ. ಆಗ ಉತ್ತಮ ಬೆಲೆಯೂ ದೊರೆಯುತ್ತದೆ. ಉತ್ತಮ ಬೆಲೆ ದೊರೆತರೆ ರೈತರಿಗೆ ಅನುಕೂಲ ಅಲ್ಲವೇ?

ಬೆಳಿಗ್ಗೆಯೇ ತರಕಾರಿ ವಹಿವಾಟು ನಡೆಯುವ ಕಾರಣ ಬಹಳಷ್ಟು ರೈತರು ಹಿಂದಿನ ದಿನ ಸಂಜೆಯೇ ತರಕಾರಿಗಳನ್ನು ಕಟಾವು ಮಾಡಿಟ್ಟುಕೊಳ್ಳುತ್ತಿದ್ದರು. ಬೆಳಿಗ್ಗೆ ಮಾರುಕಟ್ಟೆಗೆ ತರುತ್ತಿದ್ದರು. ಆದರೆ ಈಗ ಬೆಳಿಗ್ಗೆಯೇ ಹೊಲಗಳಿಂದ ತರಕಾರಿ ಕಟಾವು ಮಾಡಿಕೊಂಡು ಮಾರುಕಟ್ಟೆಗೆ ತರಬೇಕಾಗಿದೆ. ಗ್ರಾಹಕರಿಗೂ ತಾಜಾ ತರಕಾರಿ ದೊರೆಯುತ್ತದೆ ಎಂದು ವರ್ತಕರು ಪ್ರತಿಪಾದಿಸುವರು.

ಇದಕ್ಕೆ ವ್ಯತಿರಿಕ್ತವಾಗಿ ‘ಬೆಳಿಗ್ಗೆ ಕೂಲಿಯವರು ದೊರೆಯುವುದು ಕಷ್ಟಸಾಧ್ಯ. ಸಂಜೆ ತರಕಾರಿ ಕಟಾವು ಮಾಡಿಕೊಂಡು ಬೆಳಿಗ್ಗೆ ಮಾರುಕಟ್ಟೆಗೆ ತರುತ್ತಿದ್ದೇವೆ. ಇದರಿಂದ ಯಾವುದೇ ಸಮಸ್ಯೆ ಆಗುತ್ತಿಲ್ಲ ಎಂದು ಕೆಲವು ರೈತರು ನುಡಿಯುವರು.

ತಹಶೀಲ್ದಾರರಿಗೆ ಮನವಿ

ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಬೆಳಿಗ್ಗೆ  11ರ ನಂತರ ತರಕಾರಿ ವ್ಯಾಪಾರ ಮಾಡುವುದಾಗಿ ಎಪಿಎಂಸಿ ವರ್ತಕರು ಹಾಗೂ ಸಿಬ್ಬಂದಿ ಹೇಳಿದ್ದಾರೆ. ಇದರಿಂದ ರೈತರಿಗೆ ಅನನುಕೂಲ ಮತ್ತು ನಷ್ಟ ಉಂಟಾಗುತ್ತದೆ ಎಂದು ರೈತ ಸಂಘದ ಮುಖಂಡರು ನಗರದ ತಹಶೀಲ್ದಾರ್ ಕಚೇರಿ ಎದುರು ಗುರುವಾರ ಆಕ್ರೋಶ ವ್ಯಕ್ತಪಡಿಸಿದರು. ಘೋಷಣೆಗಳನ್ನು ಕೂಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.  ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮರಳಕುಂಟೆ ರಾಮಾಂಜಿನಪ್ಪ  ತಾಲ್ಲೂಕು ಕಾರ್ಯದರ್ಶಿ ನೆಲಮಾಕನಹಳ್ಳಿ ಗೋಪಾಲ್ ಜಿಲ್ಲಾ ಜಂಟಿ ಕಾರ್ಯದರ್ಶಿ ಕುಪ್ಪಳ್ಳಿ ಶ್ರೀನಿವಾಸ್ ತಾಲ್ಲೂಕು ಉಪಾಧ್ಯಕ್ಷ ಅಶ್ವತಪ್ಪ ಬೊಮ್ಮನಹಳ್ಳಿ ಮುನಿಕೃಷ್ಣಪ್ಪ ಜನಾರ್ದನ್ ನಾರಾಯಣಸ್ವಾಮಿ ನಾಗರಾಜು ಮತ್ತಿತರರು ಈ ನಿಯೋಗದಲ್ಲಿ ಇದ್ದರು.

ಕುಸಿಯುತ್ತಿದೆ ವಹಿವಾಟು
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಎಪಿಎಂಸಿಯಲ್ಲಿ ತರಕಾರಿ ವಹಿವಾಟು ಕುಸಿಯುತ್ತಿದೆ ಎನ್ನುತ್ತವೆ ಎಪಿಎಂಸಿ ಮೂಲಗಳು. ಬೆಳಿಗ್ಗೆ ರೈತರು ತರಕಾರಿ ಕಟಾವು ಮಾಡಿಕೊಂಡು ತಂದರೆ ಅವು ತಾಜಾ ಇರುತ್ತವೆ. ಇದರಿಂದ ಸಹಜವಾಗಿ ಬೆಲೆಯೂ ಹೆಚ್ಚುತ್ತದೆ.  ಈ ಹಿಂದೆ ತಾಜಾ ತರಕಾರಿ ಎನ್ನುವ ಕಾರಣದಿಂದಲೇ ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ಹೊರ ರಾಜ್ಯದವರು ಮತ್ತು ವ್ಯಾಪಾರಿಗಳು ಖರೀದಿಗೆ ಬರುತ್ತಿದ್ದರು. ಇಲ್ಲಿಂದ ಖರೀದಿಸಿ ಬೇರೆ ಕಡೆ ಕೊಂಡೊಯ್ಯುತ್ತಿದ್ದರು. ಆದರೆ ಈಗ ವಹಿವಾಟು ಬೇಗ ಆರಂಭವಾಗುವ ಕಾರಣ ತಾಜಾ ತರಕಾರಿ ದೊರೆಯುವುದಿಲ್ಲ ಎಂದು ಖರೀದಿಗೆ ಬರುವವರು ಕಡಿಮೆ ಆಗಿದ್ದಾರೆ. ತರಕಾರಿ ವಹಿವಾಟು ಎಪಿಎಂಸಿಯಲ್ಲಿ ಕುಸಿಯುತ್ತಿದೆ ಎನ್ನುತ್ತವೆ ಎಪಿಎಂಸಿ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT