ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಲ್ಕ ಕಡಿತ: ಎಪಿಎಂಸಿ ಆದಾಯ ನಷ್ಟ

ಪ್ರತಿ ತಿಂಗಳು ₹ 8 ಲಕ್ಷಕ್ಕೆ ಕುಸಿದ ಶುಲ್ಕ ಸಂಗ್ರಹ: ಮಾರುಕಟ್ಟೆ ನಿರ್ವಹಣೆಗೆ ಸಂಕಷ್ಟ
Last Updated 14 ಡಿಸೆಂಬರ್ 2020, 3:47 IST
ಅಕ್ಷರ ಗಾತ್ರ

ಚಿಂತಾಮಣಿ: ರಾಜ್ಯ ಸರ್ಕಾರ ಎಪಿಎಂಸಿ ಶುಲ್ಕ ಕಡಿತಗೊಳಿಸಿರುವುದರಿಂದ ಬಹುಪಾಲು ಆದಾಯ ಕಡಿತಗೊಂಡಿದೆ. ಪರ್ಯಾಯವಾಗಿ ಎಪಿಎಂಸಿ ವೆಚ್ಚ ಕಡಿಮೆ ಮಾಡಿ ಸರಿದೂಗಿಸಿಕೊಳ್ಳಲು ಸ್ವಚ್ಛತೆ, ಭದ್ರತೆ ಹಾಗೂ ಇತರೆ ವೆಚ್ಚಗಳನ್ನು ಕಡಿತಗೊಳಿಸಿದೆ. ಇನ್ನು ಮುಂದೆ ಪ್ರಾಂಗಣ ಸ್ವಚ್ಛಗೊಳಿಸುವವರೂ, ಕಾವಲುಗಾರರು ಇಲ್ಲದಂತಾಗುತ್ತದೆ. ಅಭಿವೃದ್ಧಿ ಕಾರ್ಯಗಳಂತೂ ಮರೀಚಿಕೆಯಾಗುತ್ತವೆ.

ಚಿಂತಾಮಣಿ ಎಪಿಎಂಸಿಗೆ ಕಳೆದ ವರ್ಷ ₹ 2.15 ಕೋಟಿ ಆದಾಯ ಬಂದಿತ್ತು. ಈ ವರ್ಷ ನವೆಂಬರ್‌ವರೆಗೆ ₹ 80 ಲಕ್ಷ ಆದಾಯ ಬಂದಿದೆ. ಅದರಲ್ಲೂ ಮೇ ತಿಂಗಳಿನಿಂದ ಆಗಸ್ಟ್‌ವರೆಗೂ ಹಳೆಯ ಶುಲ್ಕವೇ ಸಂಗ್ರಹಣೆಯಾಗಿತ್ತು. ಸೆಪ್ಟೆಂಬರ್‌ನಿಂದ ಹೊಸ ಶುಲ್ಕ ನೀತಿ ಜಾರಿಯಾಗಿದೆ. ಈಗಾಗಲೇ 8 ಜನ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.

ಹಿಂದೆ ಧಾನ್ಯಗಳಿಗೆ ಶೇಕಡ 1.5, ತರಕಾರಿಗಳಿಗೆ ಶೇಕಡ 1ರಷ್ಟು ಮಾರುಕಟ್ಟೆ ಶುಲ್ಕ ಸಂಗ್ರಹ ಮಾಡಲಾಗುತ್ತಿತ್ತು. ಅದನ್ನು ರಾಜ್ಯ ಸರ್ಕಾರ ಶೇಕಡ 0.35ಕ್ಕೆ ಇಳಿಕೆ ಮಾಡಿದೆ. ಹಳೆಯ ಶುಲ್ಕ ಸಂಗ್ರಹಣೆ ಸಂದರ್ಭದಲ್ಲಿ ಪ್ರತಿ ತಿಂಗಳು ಸರಾಸರಿ ₹ 20 ಲಕ್ಷ ಇತ್ತು. ನೂತನ ಶುಲ್ಕದ ನಂತರ ಪ್ರತಿ ತಿಂಗಳು ಸರಾಸರಿ ₹ 8 ಲಕ್ಷ ಮಾತ್ರ ಸಂಗ್ರಹವಾಗುತ್ತಿದೆ. ಅಗತ್ಯ ವೆಚ್ಚಗಳಿಗೆ ಕನಿಷ್ಠ ತಿಂಗಳಿಗೆ ₹ 12 ಲಕ್ಷ ಬೇಕಾಗುತ್ತದೆ. ಆದಾಯಕ್ಕಿಂತ ವೆಚ್ಚವೇ ಜಾಸ್ತಿಯಾಗುತ್ತದೆ.

ಆದಾಯ ಕಡಿಮೆ ಆಗಿದ್ದರಿಂದ ವೆಚ್ಚ ಕಡಿಮೆ ಮಾಡಿ ಸರಿದೂಗಿಸಿಕೊಳ್ಳಲು ವಿವಿಧ ಕ್ರಮ ಕೈಗೊಳ್ಳಲು ಆಡಳಿತ ಮಂಡಳಿ ಮುಂದಾಗಿದೆ. ಭದ್ರತಾ ಮತ್ತು ಸ್ವಚ್ಛತಾ ಸಿಬ್ಬಂದಿ ಕಡಿತ, ಇಂಧನ ಬಳಕೆ, ವಿದ್ಯುತ್ ಬಿಲ್‌, ಕಚೇರಿ ವೆಚ್ಚ ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ. ಅಭಿವೃದ್ಧಿ ಕಾರ್ಯಗಳಿಗಂತೂ ಯಾವುದೇ ಆದಾಯ ಇಲ್ಲವಾಗಿದೆ ಎಂಬುದು ಮಾರುಕಟ್ಟೆ ಅಧಿಕಾರಿಗಳ ಅಭಿಪ್ರಾಯ.

ಮಾರುಕಟ್ಟೆ ಶುಲ್ಕ 35 ಪೈಸೆಯಲ್ಲಿ ಎಲ್ಲವೂ ಮಾರುಕಟ್ಟೆಯ ಬಳಕೆಗೆ ಸಿಗುವುದಿಲ್ಲ. ಅದರಲ್ಲಿ ಆವರ್ತ ನಿಧಿಗೆ 15 ಪೈಸೆ, ಕೃಷಿ ಮಾರಾಟ ಮಂಡಳಿ ನಿಧಿಗೆ 4 ಪೈಸೆ, ರಾಷ್ಟ್ರೀಯ ಮಾರುಕಟ್ಟೆ ನಿಧಿಗೆ 2 ಪೈಸೆ ಪಾವತಿಯಾಗುತ್ತದೆ. ಅದರಲ್ಲಿ ಕಡಿತ ಮಾಡುವಂತಿಲ್ಲ. ಉಳಿದ 14 ಪೈಸೆ ಮಾತ್ರ ಮಾರುಕಟ್ಟೆ ಬಳಕೆಗೆ ದೊರೆಯುತ್ತದೆ.

ರಾಜ್ಯ ಸರ್ಕಾರ ಮಾರುಕಟ್ಟೆ ಶುಲ್ಕ ಇಳಿಕೆ ಹಾಗೂ ಕೇಂದ್ರ ಸರ್ಕಾರದ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ಕೆಲವೇ ವರ್ಷಗಳಲ್ಲಿ ಎಪಿಎಂಸಿ ಮಾರುಕಟ್ಟೆಗಳ ಗೇಟ್‌ಗಳು ಬಂದ್‌ ಆಗುತ್ತವೆ. ಇದರಿಂದ ಬೀದಿಪಾಲಾಗಬೇಕಾಗುತ್ತದೆ ಎನ್ನುವ ಆತಂಕ ಮಾರುಕಟ್ಟೆ ಸಿಬ್ಬಂದಿಯನ್ನು ಕಾಡುತ್ತಿದೆ.

‘ರೈತರ ಹೊರೆ ತಗ್ಗಿಸಲು ತೆರಿಗೆ ಕಡಿತ ಕ್ರಮ ಸ್ವಾಗತಾರ್ಹ. ಆದರೆ, ಮಾರುಕಟ್ಟೆ ನಿರ್ವಹಣೆಗೂ ಆದಾಯ ಬೇಕಾಗುತ್ತದೆ. ಸರ್ಕಾರ ಮಾರುಕಟ್ಟೆಗಳಿಗೆ ನಿರ್ವಹಣಾ ವೆಚ್ಚ ನೀಡಬೇಕು. ಸದ್ಯ ಸಂಗ್ರಹ ಮಾಡುತ್ತಿರುವ ಶುಲ್ಕದಲ್ಲಿ ಶಾಸನಬದ್ಧ ವಂತಿಗೆಯನ್ನು ತೆಗೆದುಹಾಕಬೇಕು. ಪೂರ್ಣ ಶುಲ್ಕವನ್ನು ನಿರ್ವಹಣೆಗೆ ಮೀಸಲಾಗುವಂತೆ ಮಾಡಬೇಕು. ಇದರಿಂದ ಮಾರುಕಟ್ಟೆಯನ್ನು ನಷ್ಟದಿಂದ ಪಾರು ಮಾಡಬಹುದು’ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT