ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ: ನಿಧಿಗಾಗಿ ದೇವಾಲಯದ ಗೋಪುರ ಒಡೆಯುತ್ತಿದ್ದವರ ಬಂಧನ

Published 9 ಜೂನ್ 2024, 14:23 IST
Last Updated 9 ಜೂನ್ 2024, 14:23 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡಿಪಲ್ಲಿ ಗ್ರಾಮದ ನೀಲಕುಂಟ ಕೆರೆಯ ಬಳಿ ಇರುವ ಪುರಾತನ ಆವುಲಕುಂಟರಾಯ ದೇವಸ್ಥಾನದಲ್ಲಿ ನಿಧಿ ದೊರೆಯಬಹುದು ಎಂದು ದೇವಾಲಯದ ಗೋಪುರವನ್ನು ಒಡೆಯುತ್ತಿದ್ದ ನಾಲ್ವರು ವ್ಯಕ್ತಿಗಳನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಧರ್ಮವಾರಂ ಮಂಡಲದ ಮೆಹಬೂಬ್ ಪಾಷಾ, ಕಂಸದ ಮಲ್ಲಿಕಾರ್ಜುನಾಚಾರಿ, ಲಕ್ಷ್ಮಮ್ಮ, ಚಿಂತಾಮಣಿ ತಾಲ್ಲೂಕಿನ ವೆಂಕಟರಾಯನಕೋಟೆ ಗ್ರಾಮದ ಶಾಮಲಮ್ಮ ಬಂಧಿತ ಆರೋಪಿಗಳು.

ಗ್ರಾಮದ ಜಿ.ವಿ.ನಾಗರಾಜು ಬಟ್ಲಹಳ್ಳಿ ಠಾಣೆಗೆ ದೂರು ನೀಡಿ, ಆವುಲಕುಂಟರಾಯ ದೇವಾಲಯ ಪುರಾತನ ದೇವಾಲಯವಾಗಿದ್ದು ಸುತ್ತಮುತ್ತಲ ಗ್ರಾಮದ ಭಕ್ತರು ಪೂಜೆ ಮಾಡಿಸುತ್ತಾರೆ. ಶನಿವಾರ ಸಂಜೆ ನಾಲ್ವರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾರೆ ಎಂಬ ಮಾಹಿತಿ ದೊರೆಯಿತು. ದೇವಾಲಯದ ಬಳಿ ಹೋದಾಗ ಇಬ್ಬರು ಪುರುಷರು ದೇವಾಲಯದ ಗೋಪುರವನ್ನು ಹಾರೆಯಿಂದ ಒಡೆಯುತ್ತಿದ್ದರು. ಇಬ್ಬರು ಮಹಿಳೆಯರು ಸಹಾಯ ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಗ್ರಾಮಸ್ಥರನ್ನು ಕಂಡ ಕೂಡಲೇ ಅವರು ಪರಾರಿಯಾಗಲು ಯತ್ನಿಸಿದರು. ಬೆನ್ನಟ್ಟಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾದರು. ದೇವಾಲಯದ ಗೋಪುರದ ಉತ್ತರ ಕಡೆಯ ಗೋಡೆಯನ್ನು ಒಡೆದಿದ್ದಾರೆ. ದೇವಾಲಯದ ಹಿಂಭಾಗದಲ್ಲಿ ಗೋಡೆಯ ಪಕ್ಕದಲ್ಲಿ ಒಂದು ಗುಣಿಯನ್ನು ಅಗೆದು ಮುಚ್ಚಿಹಾಕಿದ್ದಾರೆ. ಆರೋಪಿಗಳನ್ನು ವಿಚಾರಣೆ ಮಾಡಿದಾಗ ದೇವಾಲಯದಲ್ಲಿ ನಿಧಿಯನ್ನು ಕಳ್ಳತನ ಮಾಡಲು ಬಂದಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT