ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬಗರ್‌ಹುಕುಂ ಹಕ್ಕುಪತ್ರಕ್ಕೆ ಕಾಯುತ್ತಿದ್ದಾರೆ ರೈತರು

ವರ್ಷವಾದರೂ ವಿಲೇವಾರಿಯಾಗದ ನಮೂನೆ 57ರ ಅಡಿ ಅರ್ಜಿ; ಚಿಕ್ಕಬಳ್ಳಾಪುರ, ಗೌರಿಬಿದನೂರಿನಲ್ಲಿ ಮಾತ್ರ ಸಮಿತಿ ರಚನೆ
Last Updated 6 ಜುಲೈ 2021, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದು ಮೂರು ವರ್ಷ ಕಳೆದರೂ ಶಾಸಕರ ನೇತೃತ್ವದ ಬಗರ್‌ಹುಕುಂ ಅಕ್ರಮ ಸಕ್ರಮ ಸಮಿತಿಗಳು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ರಚನೆಯೇ ಆಗಿಲ್ಲ. ಇದು ಜಿಲ್ಲೆಯ ಸಾವಿರಾರು ಸಾಗುವಳಿದಾರರಲ್ಲಿ ನಿರಾಸೆ ಮೂಡಿಸಿದೆ.

ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಮಾತ್ರ ಶಾಸಕರ ನೇತೃತ್ವದಲ್ಲಿ ಬಗರ್‌ಹುಕುಂ ಅಕ್ರಮ ಸಕ್ರಮ ಸಮಿತಿಗಳು ರಚನೆಯಾಗಿವೆ. ಉಳಿದಂತೆ ಬಾಗೇಪಲ್ಲಿ, ಗುಡಿಬಂಡೆ, ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕು ವ್ಯಾಪ್ತಿಯಲ್ಲಿ ಇನ್ನೂ ಸಮಿತಿಗಳು ರಚನೆಯಾಗಿಲ್ಲ. ನಮೂನೆ 57ರ ಅಡಿಯಲ್ಲಿ ಬಗರ್‌ಹುಕುಂ ಜಮೀನು ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ವಿಲೇವಾರಿಗೆ ಕಾಲವೇ ಕೂಡಿ ಬಂದಿಲ್ಲ.

ರಾಜ್ಯದಲ್ಲಿ ‌ಹೆಚ್ಚು ಬಗರ್‌ಹುಕುಂ ಸಾಗುವಳಿ ಹಕ್ಕುಪತ್ರ ಕೋರಿ ಸಾಗುವಳಿದಾರರು ಅರ್ಜಿ ಸಲ್ಲಿಸಿರುವ ಜಿಲ್ಲೆಗಳಲ್ಲಿಯ ಚಿಕ್ಕಬಳ್ಳಾಪುರ ಸಹ ಪ್ರಮುಖವಾದುದು. ಅಕ್ರಮ ಸಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಹಲವು ಹೋರಾಟಗಳು ನಡೆದಿವೆ. ಸಾಗುವಳಿ ಸಂಬಂಧ ಅರಣ್ಯ ಇಲಾಖೆ ಮತ್ತು ರೈತರ ನಡುವೆ ಜಿಲ್ಲೆಯಲ್ಲಿ ಜಟಾಪಟಿ ನಡೆದ ಪ್ರಸಂಗಗಳೂ ಇವೆ.

ಸಾಗುವಳಿದಾರರು ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಲು ಸರ್ಕಾರ ನಮೂನೆ 50, 53 ಮತ್ತು 57ರ ಅಡಿಯಲ್ಲಿ ಅವಕಾಶ ಕಲ್ಪಿಸಿತ್ತು. ನಮೂನೆ 50ರ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 50,649 ಅರ್ಜಿಗಳನ್ನು ರೈತರು ಸಲ್ಲಿಸಿದ್ದರು. ಇದರಲ್ಲಿ 24,197 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. 26,452 ಅರ್ಜಿಗಳು ತಿರಸ್ಕೃತವಾಗಿವೆ. ಜಮೀನು ಮಂಜೂರಾದ ಎಲ್ಲ ರೈತರಿಗೂ ಸಾಗುವಳಿ ಚೀಟಿ ನೀಡಲಾಗಿದೆ. ಹೀಗೆ ನಮೂನೆ 50ರ ಅಡಿಯಲ್ಲಿ ಅತ್ಯಂತ ಹೆಚ್ಚು ರೈತರು ಅರ್ಜಿ ಸಲ್ಲಿಸಿ ಹೆಚ್ಚು ಫಲಾನುಭವಿಗಳೂ ಆಗಿದ್ದಾರೆ.

ನಮೂನೆ 53ರ ಅಡಿಯಲ್ಲಿ 40,390 ಅರ್ಜಿಗಳನ್ನು ರೈತರು ಸಲ್ಲಿಸಿದ್ದರು. ಅವುಗಳಲ್ಲಿ 8,879 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. 22,148 ಅರ್ಜಿಗಳು ತಿರಸ್ಕೃತವಾಗಿವೆ. ವಿಲೇವಾರಿಯಾಗದೆ 9,327 ಅರ್ಜಿಗಳು ಬಾಕಿ ಇವೆ. ದೊಡ್ಡ ಪ್ರಮಾಣದಲ್ಲಿಯೇ ಅರ್ಜಿಗಳು ಬಾಕಿ ಇವೆ.

ನಮೂನೆ 57ರ ಅಡಿಯಲ್ಲಿ ಜಿಲ್ಲೆಯಲ್ಲಿ 38,187 ರೈತರು ಅರ್ಜಿ ಸಲ್ಲಿಸಿ ಒಂದು ವರ್ಷವೇ ಆಗಿದೆ. ಇದರಲ್ಲಿ ಒಂದೇ ಒಂದು ಅರ್ಜಿಯೂ ವಿಲೇವಾರಿಯಾಗಿಲ್ಲ. ಎಲ್ಲ ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ ಎನ್ನುತ್ತವೆ ಕಂದಾಯ ಇಲಾಖೆ ಮೂಲಗಳು.

ಜಿಲ್ಲೆಯಾದ್ಯಂತ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಬಗರ್‌ಹುಕುಂ ಸಕ್ರಮಕ್ಕೆ ಆಗ್ರಹಿಸಿ ಹಲವು ಹೋರಾಟಗಳು ನಡೆದಿವೆ. ಆದರೆ ಇನ್ನೂ ಸಮಿತಿ ರಚನೆ ಆಗಿದಿರುವುದು ರೈತರಲ್ಲಿ ಅಸಮಾಧಾನ ಮತ್ತು ಬೇಸರಕ್ಕೆ ಕಾರಣವಾಗಿದೆ.

ಚಿಂತಾಮಣಿ, ಗೌರಿಬಿದನೂರು ಹೆಚ್ಚು ಮಂಜೂರು: ನಮೂನೆ 50, 53ರ ಅಡಿ ಹೆಚ್ಚು ಅರ್ಜಿಗಳನ್ನು ಸಲ್ಲಿಸಿ ಹೆಚ್ಚು ಮಂಜೂರಾತಿ ಪಡೆದ ತಾಲ್ಲೂಕುಗಳಲ್ಲಿ ಚಿಂತಾಮಣಿ ಮತ್ತು ಗೌರಿಬಿದನೂರು ಮುಂಚೂಣಿಯಲ್ಲಿವೆ. ನಮೂನೆ 50 ಅಡಿ ಚಿಂತಾಮಣಿ ತಾಲ್ಲೂಕಿನಲ್ಲಿ 12,514 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 7,082 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ನಮೂನೆ 53 ಅಡಿಯಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ 9,576 ಅರ್ಜಿಗಳು ಸಲ್ಲಿಕೆಯಾಗಿದ್ದು 1,944 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ.

ಗುಡಿಬಂಡೆ ತಾಲ್ಲೂಕಿನಲ್ಲಿ ಅತಿ ಕಡಿಮೆ ಸಂಖ್ಯೆ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಇಲ್ಲಿ ಮಂಜೂರಾತಿಯೂ ಕಡಿಮೆ ಇದೆ. ನಮೂನೆ 50 ಅಡಿ ಈ ತಾಲ್ಲೂಕಿನಲ್ಲಿ 2,344 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 1,851 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ನಮೂನೆ 53ರ ಅಡಿ ಗುಡಿಬಂಡೆ ತಾಲ್ಲೂಕಿನಲ್ಲಿ 1,386 ಅರ್ಜಿಗಳು ಸಲ್ಲಿಕೆಯಾಗಿದ್ದು 246 ಅರ್ಜಿಗಳಿಗೆ ಮಾತ್ರ ಮಂಜೂರಾತಿ ದೊರೆತಿದೆ.

ಒಂದು ಕಡೆ ಸಾಗುವಳಿ ಚೀಟಿಗೆ ಆಗ್ರಹಿಸುತ್ತಿದ್ದರೆ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅರ್ಜಿಗಳು ತಿರಸ್ಕೃತವಾಗಿವೆ. ವಿಧಾನಸಭೆ ಚುನಾವಣೆ ಬಂದ ಕಾರಣ ಈ ಹಕ್ಕುಪತ್ರ ನೀಡುವ ಪ್ರಕ್ರಿಯೆ ತಾತ್ಕಾಲಿಕವಾಗಿ ನಿಂತಿತು. ಶಾಸಕರ ಮೇಲೆ ಬಗರ್ ಹುಕುಂ ಸಾಗುವಳಿ ಚೀಟಿ ನೀಡುವ ದೊಡ್ಡ ಜವಾಬ್ದಾರಿಯೇ ಇದೆ.

ನಮೂನೆ 57ರ ಅಡಿ ಸಲ್ಲಿಕೆಯಾಗಿರುವ ಅರ್ಜಿ
ತಾಲ್ಲೂಕು;
ಸ್ವೀಕೃತ ಅರ್ಜಿಗಳ ಸಂಖ್ಯೆ
ಚಿಕ್ಕಬಳ್ಳಾಪುರ; 6,824
ಶಿಡ್ಲಘಟ್ಟ; 3,492
ಚಿಂತಾಮಣಿ; 7,183
ಗೌರಿಬಿದನೂರು; 8,857
ಗುಡಿಬಂಡೆ; 2,071
ಒಟ್ಟು; 38,187

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT