ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ನೆರಳು ಪಡೆಯಲು ಗಿಡ–ಮರಕ್ಕಾಗಿ ಹುಡಕಾಟ...

ಬಾಗೇಪಲ್ಲಿ: ಬಿಸಿಲಿನ ಬೇಗೆಗೆ ಬಸವಳಿದ ಜನ
Published 3 ಏಪ್ರಿಲ್ 2024, 6:02 IST
Last Updated 3 ಏಪ್ರಿಲ್ 2024, 6:02 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದಲ್ಲಿ ಬಿಸಿಲಿನ ತಾಪ 38 ಡಿಗ್ರಿ ಸೆಲಿಯಷ್‍ನಷ್ಟು ಏರಿಕೆ ಆಗಿದೆ. ಪುರಸಭೆ ಹಾಗೂ ಸಂಬಂಧಪಟ್ಟ ಇಲಾಖೆಯಿಂದ ಬಿಸಿಲಿನ ಬೇಗೆ ತಗ್ಗಿಸಲು ಯಾವುದೇ ಕ್ರಮ ಕೈಗೊಳ್ಳದೆ ಹಿನ್ನೆಲೆ ಜನರು ಬೇಸಿಗೆ ಬೇಗೆಯಿಂದ ಬಸವಳಿದಿದ್ದಾರೆ.

ಪಟ್ಟಣದ ಉರ್ದು ಶಾಲೆಯ ಮುಂದೆ ಆಲದ ಮರ ಬಿಟ್ಟರೆ ಮುಖ್ಯರಸ್ತೆ ಉದ್ದಕ್ಕೂ ಗಿಡ ಮರಗಳನ್ನು ಬೆಳೆಸಿಲ್ಲ. ಸಾಮಾಜಿಕ ಅರಣೀಕರಣದಡಿ ಪಟ್ಟಣದಲ್ಲಿ ಗಿಡಗಳನ್ನು ಬೆಳೆಸಿಲ್ಲ. ಇದರಿಂದ ಬಯಲಿನಂತಿರುವ ಪಟ್ಟಣದಲ್ಲಿ ಬೇಸಿಗೆ ಬಿಸಿಲಿನಿಂದ ರಕ್ಷಿಸಲು ಸಾರ್ವಜನಿಕರು ಪರದಾಡುತ್ತಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ಘಟಕ ನಿರ್ಮಿಸಿಲ್ಲ. ಇರುವ ಘಟಕಗಳು ನಿರ್ವಹಣೆ ಮಾಡದ ಕಾರಣ ಅವು ಕೆಟ್ಟು ಬಹಳ ವರ್ಷವೇ ಕಳೆದಿದೆ. ಇದರಿಂದ ಸಾರ್ವಜನಿಕ ಸ್ಥಳದಲ್ಲಿ‌ ಕುಡಿವ ನೀರು ಸಿಗುತ್ತಿಲ್ಲ. ಜನ ಹಣ ಪಾವತಿಸಿಯೇ ನೀರು ಕುಡಿಯಬೇಕಿದೆ.

ಬಿಸಿಲಿಗೆ ದಾಹ ಹೆಚ್ಚಾಗುತ್ತಿರುವ ಸಂದರ್ಭದಲ್ಲೂ  ಅರವಂಟಿಗೆ ನಿರ್ಮಿಸಿಲ್ಲ. ಕನಿಷ್ಠ ನಿರ್ದಿಷ್ಟ ಸ್ಥಳಗಳಲ್ಲಿ ಮಡಿಕೆಗಳಲ್ಲಿ ನೀರು ತುಂಬಿಸಿಲ್ಲ. ಇದರಿಂದ ಜನರು ತಂಪು ಪಾನೀಯ, ಹಣ್ಣಿನ ರಸ, ನಿಂಬೆರಸ, ಹಣ್ಣಿನ ಸಲಾಡ್, ತಾಳೆ ಹಣ್ಣು, ಎಳನೀರು ಮೊರೆ ಹೋಗಿದ್ದಾರೆ.

ಮುಖ್ಯರಸ್ತೆಯಲ್ಲಿ ಸಗಟು ವ್ಯಾಪಾರ ವಹಿವಾಟು ಹೆಚ್ಚಾಗಿದೆ. ಜನರು ಹೆಚ್ಚಾಗಿ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರಸ್ಥರು ತಳ್ಳುವ ಬಂಡಿಗಳಲ್ಲಿ ಹೂವು, ಹಣ್ಣು, ತರಕಾರಿಗಳು, ತಿಂಡಿ –ತಿನಿಸುಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಆದರೆ ಸುಡು ಬಿಸಿಲಿಗೆ ಕಂಗೆಟ್ಟು ಹೋಗಿದ್ದಾರೆ.

ಮುಖ್ಯರಸ್ತೆ ವಿಸ್ತರಣೆ ಸಂದರ್ಭ ದೊಡ್ಡ ಮರಗಳನ್ನು ಕಡಿಯಲಾಯಿತು. ಆದರೆ ಇದಕ್ಕೆ ಪರ್ಯಾಯವಾಗಿ ಸಸಿ ನೆಟ್ಟು ಪೋಷಣೆ ಮಾಡಲಿಲ್ಲ. ಮರ ಕಡಿದ ಪುರಸಭೆ, ಅರಣ್ಯ ಇಲಾಖೆ ಹಾಗೂ ಲೋಕೊಪಯೋಗಿ ಇಲಾಖೆಗಳು ನಿರ್ಲಕ್ಷ್ಯದಿಂದ‌ ಪಟ್ಟಣದಲ್ಲಿ ಮರಗಿಡ ಕಾಣ ಸಿಗುತ್ತಿಲ್ಲ. ಗಿಡ ಮರಗಳ ನೆರಳು ಸಿಗದೇ, ಬೀದಿಬದಿ ವ್ಯಾಪಾರಿಗಳು, ದೂರದ ಪ್ರಯಾಣಿಕರು ಹಾಗೂ ದಾರಿಹೋಕರು ಬಿಸಿಲಿನಿಂದ ರಕ್ಷಣೆ ಪಡೆಯಲು ಸಾಹಸ ಪಡೆಯುತ್ತಿದ್ದಾರೆ. ಕೆಲವರು ಹೊರ ಬರಲು ಹೆದರುತ್ತಿದ್ದಾರೆ.

ರಸ್ತೆಗಳಲ್ಲಿ ನಡೆದುಕೊಂಡು ಹೋಗುವವರು, ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಗಿಡ ಮರ ಹುಡುಕಿಕೊಂಡು ಹೋಗುವಂತಹ ಪರಿಸ್ಥಿತಿ ಪಟ್ಟಣದಲ್ಲಿ ನಿರ್ಮಾಣ ಆಗಿದೆ.

ಬಸ್‌ ನಿಲ್ದಾಣ ಇಲ್ಲ: ಸಾರಿಗೆ ಬಸ್ ನಿಲ್ದಾಣ, ಕುಂಬಾರಪೇಟೆ ವೃತ್ತ, ಚಿತ್ರಾವತಿ ಹೋರಾಟ ವೃತ್ತ, ಡಾ.ಎಚ್.ಎನ್.ವೃತ್ತದ ಬಳಿಯಲ್ಲಿ ತಂಗುದಾಣ ನಿರ್ಮಿಸಿಲ್ಲ. ತಾಲ್ಲೂಕು ಕೇಂದ್ರದಲ್ಲಿ ಖಾಸಗಿ ಬಸ್ ನಿಲ್ದಾಣ ಇಲ್ಲ. ಮುಖ್ಯರಸ್ತೆಯ ಪಕ್ಕದಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತದೆ. ಇಳಿಸಲಾಗುತ್ತದೆ. ಕೂರಲು ಆಸನಗಳು ಇಲ್ಲ. ವಿಶ್ರಾಂತಿ ಪಡೆಯಲು ಸೂಕ್ತ ಜಾಗ ಇಲ್ಲ. ತಂಗುದಾಣ ಮೊದಲೇ ಇಲ್ಲ. ನೆರಳಂತೆ ಮರಿಚೀಕೆ. ಇದರಿಂದ ಪ್ರಯಾಣಿಕರು ಬಿರು ಬಿಸಿಲಿನಲ್ಲಿ ಬಸ್‌ಗಾಗಿ ಗಂಟೆಗಟ್ಟಲೇ ನಿಂತುಕೊಂಡು, ಬಿಸಲಿನ ತಾಪಕ್ಕೆ ಜನರು ಹೈರಾಣಾಗುತ್ತಿದ್ದಾರೆ.

ನೆರಳು ಪಡೆಯಲು ಗಿಡ–ಮರ ಹುಡುಕಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಬಿಸಿಲಿನ ಉಷ್ಣಾಂಶಕ್ಕೆ ಜನ ಪರಿತಪಿಸುತ್ತಿದ್ದಾರೆ.

- ಜಯಪ್ಪ ವಕೀಲ

ಬೇಸಿಗೆಯಲ್ಲಿ ಸೂಕ್ತ ನೆರಳು ಹಾಗೂ ನೀರಿನ ವ್ಯವಸ್ಥೆ ಕಲ್ಪಿಸದೇ ಇರುವುದು ಅಧಿಕಾರಿಗಳ ಬೇಜಾವ್ದಾರಿ ಆಗಿದೆ

-ಪಿ.ಎನ್.ಗಂಗರತ್ನಮ್ಮಕೃಷಪ್ಪ ಪಟ್ಟಣದ ನಿವಾಸಿ

ಪಟ್ಟಣದ ಕೆಲ ವೃತ್ತಗಳಿಗೆ ಭೇಟಿ ಮಾಡಿ ಪರಿಶೀಲಿಸಿ ಸೂಕ್ತ ನೆರಳು ನೀರು ವ್ಯವಸ್ಥೆ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು

-ಎಂ.ಶ್ರೀನಿವಾಸ್ ಪುರಸಭೆ ಮುಖ್ಯಾಧಿಕಾರಿ

ಕಾಟಾಚಾರದ ಅಭಿಯಾನ: ಜನಾಕ್ರೋಶ

ಪ್ರಾದೇಶಿಕ ಅರಣ್ಯ ವಲಯದ ಅಧಿಕಾರಿಗಳು ಗಿಡಿ–ಮರ ಬೆಳಿಸಿ ಎಂದು ಅಭಿಯಾನಗಳನ್ನು ನಡೆಸುತ್ತಾರೆ. ಇದಕ್ಕೆ ತಕ್ಕಂತೆ ಪಟ್ಟಣದಲ್ಲಿ  ಗಿಡ– ಮರ ಬೆಳೆಸದೆ ಇರುವುದು ವಿಪರ್ಯಾಸ ಎನ್ನುತ್ತಾರೆ ಸ್ಥಳೀಯರು. ಪಟ್ಟಣದ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಅರಣ್ಯ ಇಲಾಖೆಯವರು ಗಿಡ–ಮರ ಬೆಳಿಸಿಲ್ಲ. ಗಿಡ–ಮರಗಳನ್ನು ಬೆಳಿಸಿ ಉಳಿಸಿ ಎಂದು ಅಭಿಯಾನಗಳು ಕೇವಲ ಕಾಟಾಚಾರಕ್ಕೆ ಸೀಮಿತ ಆಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನುದಾನ ಕೊರತೆ ಚಿತ್ರಾವತಿ ಏಕೋ ಉದ್ಯಾನದಲ್ಲಿ 300 ಗಿಡ ನೆಡಲಾಗಿದೆ. ಸರ್ಕಾರದಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಗಿಡ–ಮರ ನೆಡಲು ಅನುದಾನ ಬಂದಿಲ್ಲ. ಮುಖ್ಯರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್‌ ಬಿಎಸ್‍ಎನ್‌ಎಲ್ ವಿದ್ಯುತ್ ತಂತಿ ಇರುವುದರಿಂದ ಗಿಡ ನೆಡಲು ಸಾಧ್ಯ ಇಲ್ಲ. ಕೂಡಲೇ ಪುರಸಭೆ ಲೋಕೊಪಯೋಗಿ ಮತ್ತು ಅರಣ್ಯ ಇಲಾಖೆಯಿಂದ ಮುಖ್ಯರಸ್ತೆಯಲ್ಲಿ ಗಿಡ ನೆಡಲು ಕ್ರಮವಹಿಸಲಾಗುವುದು ಎಂದು ಪ್ರಾದೇಶಿಕ ಅರಣ್ಯ ವಲಯ ತಾಲ್ಲೂಕು ಅಧಿಕಾರಿ ಚಂದ್ರಶೇಖರರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತುರ್ತು ಕ್ರಮ ಕೈಗೊಳ್ಳಲಿ

‘ಪಟ್ಟಣದ ಬಸ್ ನಿಲ್ದಾಣ ಕುಂಬಾರಪೇಟೆ ಚಿತ್ರಾವತಿ ಹೋರಾಟ ವೃತ್ತ ಹಾಗೂ ಡಾ.ಎಚ್.ಎನ್.ವೃತ್ತಗಳಲ್ಲಿ ಪುರಸಭೆ ಅಧಿಕಾರಿಗಳು ಸೂಕ್ತವಾಗಿ ನೆರಳು ನೀರಿನ ವ್ಯವಸ್ಥೆಯನ್ನು ತುರ್ತಾಗಿ ಮಾಡಬೇಕು. ಅಧಿಕಾರಿಗಳು ಚುನಾವಣಾ ನೀತಿಯ ಸಂಹಿತೆ ಜಾರಿ ಹಾಗೂ ಚುನಾವಣಾ ಕೆಲಸದ ನೆಪದಲ್ಲಿ ಜನರಿಗೆ ಅಗತ್ಯ ಸೌಲಭ್ಯ ಕಲ್ಪಸಲು ನಿರ್ಲಕ್ಷ್ಯವಹಿಸಿದ್ದಾರೆ’ ಎಂದು ಔಷಧ ಅಂಗಡಿಗಳ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಸತೀಶ್ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT