ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಬಜೆಟ್ 2021-22 ಒಂದು ಅವಲೋಕನ: ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಉಪನ್ಯಾಸ

Last Updated 5 ಫೆಬ್ರುವರಿ 2021, 2:41 IST
ಅಕ್ಷರ ಗಾತ್ರ

ಬಾಗೇಪಲ್ಲಿ: ‘ಉದ್ಯೋಗ ರಹಿತ ಆರ್ಥಿಕ ವ್ಯವಸ್ಥೆ ಹಾಗೂ ಸರಕು ರಹಿತ ಕೈಗಾರಿಕಾ ವ್ಯವಸ್ಥೆಗಳೂ ಬಾಳೆಗಿಡ ಇದ್ದಂತೆ. ಅದು ಒಂದು ದೇಶವನ್ನು ಹೆಚ್ಚು ಕಾಲ ಭದ್ರವಾಗಿ ಉಳಿಸುವುದಿಲ್ಲ. ಈ ಬಾರಿಯ ಬಜೆಟ್‍ಪೂರ್ವದಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಮೂಡಿದ್ದ ಸಾಮಾನ್ಯ ಜನರ ಭರವಸೆಗಳು ನೀರಿನ ಮೇಲಿನ ಗುಳ್ಳೆಯಂತೆ ಒಡೆದು ಹೋಗಿದೆ’ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ವಿಶ್ಲೇಷಿಸಿದರು.

ಗುರುವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಹಾಗೂ ಐಕ್ಯುಎಸಿ ಜಂಟಿಯಾಗಿ ಹಮ್ಮಿಕೊಂಡಿದ್ದ 'ಭಾರತದ ಬಜೆಟ್ 2021-22 ಒಂದು ಅವಲೋಕನ' ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

‘ಕೊರೊನಾದಂತಹ ಅತ್ಯಂತ ಸಂಕಷ್ಟದ ಕಾಲಘಟ್ಟದಲ್ಲಿ ದೇಶದಲ್ಲಿ ಲಕ್ಷಾಂತರ ಜನರು, ಕಾರ್ಮಿಕರು, ದುಡಿಯುವ ಕೈಗಳು ಉದ್ಯೋಗವನ್ನು ಕಳೆದುಕೊಂಡರು. ಅವರಿಗೆ ಪರ್ಯಾಯವಾಗಿ ಉದ್ಯೋಗಗಳನ್ನು ಸೃಷ್ಟಿ ಮಾಡಿ ಬದುಕನ್ನು ರೂಪಿಸಿಕೊಳ್ಳುವ ಅವಕಾಶವನ್ನು ಕೇಂದ್ರ ಸರ್ಕಾರ ಮಾಡಬೇಕಿತ್ತು. ಈ ಕಾರ್ಯ ಪ್ರಾಮಾಣಿಕವಾಗಿಯೇ ಆಗಬೇಕಿತ್ತು. ಆದರೆ ಅದು ಆಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಾಗತಿಕ ಮಟ್ಟದಲ್ಲಿ ಹೋಲಿಸಿಕೊಂಡರೆ ಈ ದೇಶದಲ್ಲಿ ಶೇ 32ರಷ್ಟು ನಿರುದ್ಯೋಗ ಸಮಸ್ಯೆಯಿದೆ. ವಿದೇಶಿ ಕಂಪನಿಗಳೂ ಭಾರತಕ್ಕೆ ಬಂದು ಕಾರ್ಖಾನೆಗಳನ್ನು ಸ್ಥಾಪನೆ ಮಾಡುತ್ತಿದ್ದಾರೆ. ಆದರೂ ಇಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಅಂದರೆ ಈ ಕಂಪನಿಗಳು ಸರಕು ರಹಿತ ವ್ಯವಸ್ಥೆಯನ್ನು ಹೊಂದಿವೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ಅಭಿವೃದ್ಧಿಯಾದರೂ ಉದ್ಯೋಗ ರಹಿತದ ಕಾರಣದಿಂದ ಈ
ಚೇತರಿಕೆಗೆ ಬೆಲೆಯಿಲ್ಲ’ ಎಂದು ಪ್ರತಿಪಾದಿಸಿದರು.

‘ದೇಶದ ಸಂಪತ್ತು ಕೆಲವೇ ಜನರ ಬಳಿ ಸೇರುವುದು ಯಾವುದೇ ದೇಶಕ್ಕೆ ಅಪಾಯಕಾರಿ ಬೆಳವಣಿಗೆ. ಇದರಿಂಧ ಜನಸಾಮಾನ್ಯರ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಬಹುಸಂಖ್ಯಾತ ಜನರ ಬಳಿ ಹಣಕಾಸಿನ ವ್ಯವಹಾರ ಕ್ಷೀಣವಾಗುತ್ತದೆ. ಇದರಿಂದಾಗಿಯೇ ಒಂದು ದೇಶದ ಕರೆನ್ಸಿ ಮೌಲ್ಯ ಕುಸಿಯತೊಡಗುತ್ತದೆ. ಈ ದೇಶದ ಆರ್ಥಿಕ ವ್ಯವಸ್ಥೆಯೂ ಅದೇ ರೀತಿ ಆಗುತ್ತಿದೆ’ ಎಂದು ಹೇಳೀದರು.

ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹಮದ್ ಮಾತನಾಡಿ, ‘ಕ್ಷೇತ್ರದ ಪ್ರಗತಿಗೆ ಶಿಕ್ಷಣದಿಂದ ಮಾತ್ರ ಸಾಧ್ಯವಾಗಿದೆ. ಇದನ್ನು ಅರಿತ ಜಿ.ವಿ.ಶ್ರೀರಾಮರೆಡ್ಡಿರವರು ಗಡಿ ತಾಲ್ಲೂಕಿನ ಪದವಿ, ತಾಂತ್ರಿಕ ವಿದ್ಯಾರ್ಥಿಗಳಿಗೆ ಸರ್ಕಾರಿ ಪದವಿ, ಪಾಲಿಟೆಕ್ನಿಕ್, ಐಟಿಐ ಕಾಲೇಜನ್ನು ಆರಂಭಿಸಿದ್ದಾರೆ. ಸರ್ಕಾರಿ ಪದವಿ ಕಾಲೇಜಿನ ಕಾರ್ಯಪ್ರಗತಿಯ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರೇ, ಸಚಿವರೇ ಪ್ರಶಂಸೆ ಮಾಡಿರುವುದು ಸಂತೋಷ ತಂದಿದೆ’ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ವೈ.ನಾರಾಯಣ ಮಾತನಾಡಿದರು. ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹ್ಮದ್ ಪ್ರಾಸ್ತಾವಿಕ ಭಾಷಣ ಮಾಡಿದರು. ಗ್ರಂಥಪಾಲಕ ಡಾ.ಸಿ.ಎಸ್.ವೆಂಕಟರಾಮರೆಡ್ಡಿ, ಪ್ರಾಧ್ಯಾಪಕರಾದ ಡಾ.ಬಿ.ಎನ್.ಪ್ರಭಾಕರ್, ಡಾ.ಸಿ.ಈರಣ್ಣ, ಎಲ್.ಶ್ರೀನಿವಾಸ್, ನಂದನಾ, ಪೂರ್ಣಂ ಕುವರ್, ಮನೋರಂಜನ್, ಅನಿಲ್, ಮೋಹನ್, ಅನಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT