ಮಂಗಳವಾರ, ಡಿಸೆಂಬರ್ 1, 2020
26 °C

ಕಷ್ಟದ ದಿನಗಳಲ್ಲಿ ಕೈ ಹಿಡಿದ ಎಮ್ಮೆಗಳು:ಎಮ್ಮೆ ಸಾಕಿದವರ ಹೆಮ್ಮೆಯ ಮಾತು

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಹೈನುಗಾರಿಕೆಗೆ ಹೆಸರುವಾಸಿ ಶಿಡ್ಲಘಟ್ಟ. ಹಸುಗಳನ್ನು ನಂಬಿರುವ ತಾಲ್ಲೂಕಿನ ರೈತರ ನಡುವೆ ಅಪವಾದ
ವೆಂಬಂತೆ ಎಮ್ಮೆಗಳನ್ನು ಸಾಕುವ ರೈತರೊಬ್ಬರಿದ್ದಾರೆ. ಅವರೇ ಜಂಗಮಕೋಟೆಯ ಕಾಂತಣ್ಣನವರ ಮಂಜಣ್ಣ.

ಜಂಗಮಕೋಟೆಯ ಮಂಜಣ್ಣನವರಿಗೆ ಹಸುಗಳಿಗಿಂತ ಎಮ್ಮೆಯೇ ಹೆಚ್ಚು ಇಷ್ಟ. ಏಕೆಂದು ಕೇಳಿದರೆ, ‘ನನ್ನ ಕಷ್ಟದ ದಿನಗಳಲ್ಲಿ ಕೈಹಿಡಿದಿದ್ದು ಈ ಎಮ್ಮೆಗಳೇ’ ಎನ್ನುತ್ತಾರೆ.

‘1985ರಲ್ಲಿ ₹180 ಕೊಟ್ಟು ಒಂದು ಎಮ್ಮೆಯ ಕರುವನ್ನು ತಂದೆ. ಅದರ ಸಂತತಿಗಳೂ ಸೇರಿಂದತೆ ಈಗ ನನ್ನ ಬಳಿ 14 ಎಮ್ಮೆಗಳಿವೆ. 10 ಎಮ್ಮೆಗಳನ್ನು ಮಾರಿದ್ದೇನೆ ಮತ್ತು ನಾಲ್ಕು ಸತ್ತುಹೋದವು. ಈಗ ಪ್ರತಿದಿನ 20 ಲೀಟರ್ ಹಾಲು ಕರೆಯುತ್ತೇನೆ. ಒಂದು ಲೀಟರ್ ಹಾಲಿಗೆ ₹35ಗಳಂತೆ ಮನೆಗೇ ಬಂದು ಖರೀದಿಸುತ್ತಾರೆ. ಎಮ್ಮೆಗಳಿಂದ ತಿಂಗಳಿಗೆ 15 ಸಾವಿರ ಸಂಪಾದನೆಯಿದೆ’ ಎಂದು ಜಂಗಮಕೋಟೆಯ ಮಂಜಣ್ಣ ವಿವರಿಸುತ್ತಾರೆ.

‘ನನಗೆ ಮೂವರು ಗಂಡು ಮಕ್ಕಳು. ಒಬ್ಬ ಓದಿದ್ದು ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಕ್ಕಿದೆ. ಉಳಿದಿಬ್ಬರು ರೇಷ್ಮೆ, ವ್ಯವಸಾಯ ಮಾಡುತ್ತಾರೆ. ಮೂರು ಎಕರೆ ಜಮೀನಿನಲ್ಲಿ ಒಂದು ಎಕರೆಯಲ್ಲಿ ಹಿಪ್ಪುನೇರಳೆಸೊಪ್ಪು, ಉಳಿದದ್ದು ರಾಗಿ ಹೊಲ. ಒಂದು ಕೊಳವೆ ಬಾವಿಯಿದೆ. ನೀರು ಹಿಪ್ಪುನೇರಳೆಸೊಪ್ಪಿಗೆ ಸಾಕಾಗುತ್ತದೆ. ಮಕ್ಕಳನ್ನು ಸಾಕಿ ಬೆಳೆಸಲು ನೆರವಾಗಿದ್ದು, ಕಷ್ಟ ಕಾಲದಲ್ಲಿ ಅನ್ನ ನೀಡಿದ್ದು ಎಮ್ಮೆಗಳು. ಮಕ್ಕಳು ವ್ಯವಸಾಯ ನೋಡಿಕೊಳ್ಳುವುದರಿಂದ ನಾನು ಎಮ್ಮೆಗಳನ್ನು ಮೇಯಿಸುತ್ತೇನೆ’ ಎಂದು ಪ್ರೀತಿಯಿಂದ ತಮ್ಮ ಎಮ್ಮೆಗಳ ಮೈದಡವುತ್ತಾ ಅವರು ಹೇಳಿದರು.

‘ಎಮ್ಮೆಯ ಹಾಲು ತುಂಬಾ ಗಟ್ಟಿಯಾಗಿರುತ್ತದೆ ಮತ್ತು ಕೆನೆಯು ಅಧಿಕ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಇದು ಮೊಸರು, ತುಪ್ಪ, ಮನೆಯಲ್ಲಿಯೇ ತಯಾರಿಸಲಾಗುವ ಚೀಸ್ ಅಥವಾ ಪನ್ನೀರ್ ಇತ್ಯಾದಿಗಳಿಗೆ ಬಳಸಲ್ಪಡುತ್ತದೆ. ಈ ಹಾಲಿನ ಮತ್ತೊಂದು ವೈಶಿಷ್ಟ್ಯ ಎಂದರೆ, ಇದನ್ನು ತುಂಬಾ ಸಮಯ ಸಂಗ್ರಹಿಸಿಡಬಹುದು. ಇದರಲ್ಲಿರುವ ಪೆರಾಕ್ಸೈಡೈಸಿಂಗ್ ಚಟುವಟಿಕೆಯ ಕಾರಣದಿಂದಾಗಿ ಇದನ್ನು ಸಂಗ್ರಹಿಸಿಟ್ಟರೆ ಏನೂ ಆಗುವುದಿಲ್ಲ. ಇದು ರುಚಿಯಷ್ಟೇ ಅಲ್ಲದೆ ಆರೋಗ್ಯಕರವು ಸಹ ಹೌದು. ಹಾಗಾಗಿ ಇದನ್ನು ಎಲ್ಲಾ ವಯಸ್ಸಿನವರು ಸಹ ಸೇವಿಸಬಹುದು. ಎಮ್ಮೆ ಹಾಲಿನಲ್ಲಿ ಅಧಿಕ ಪ್ರಮಾಣದ ಪ್ರೋಟಿನ್‌ಗಳು ಇರುತ್ತವೆ. ಇದರಲ್ಲಿ ಎಲ್ಲ 9 ಬಗೆಯ ಅಮೈನೊ ಆಮ್ಲಗಳು ಇರುತ್ತವೆ. ಅಧಿಕ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ. ಇದರಲ್ಲಿ ಮೆಗ್ನಿಷಿಯಂ, ಪೊಟಾಶಿಯಂ ಮತ್ತು ರಂಜಕಗಳಂತಹ ಉತ್ತಮ ರೀತಿಯ ಖನಿಜಾಂಶಗಳು ಇರುತ್ತವೆ. ಜೊತೆಗೆ ಇದರಲ್ಲಿ ಸಮೃದ್ಧ ಕಬ್ಬಿಣಾಂಶ ಸಹ ಇರುತ್ತದೆ’ ಎನ್ನುತ್ತಾರೆ ಡಾ.ವೆಂಕಟೇಶಮೂರ್ತಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.