ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ, ಎನ್‌ಆರ್‌ಸಿ ರದ್ದಿಗೆ ಆಗ್ರಹ

ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಮನವಿ
Last Updated 22 ಡಿಸೆಂಬರ್ 2019, 10:43 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅಸಂವಿಧಾನಿಕವಾದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮರು ಪರಿಶೀಲಿಸಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಉಪಾಧ್ಯಕ್ಷ ಪಿ.ಎಂ.ಕೃಷ್ಣಪ್ಪ, ‘ದೇಶದ ನಾಗರಿಕರನ್ನು ಧರ್ಮದ ಆಧಾರದಲ್ಲಿ ವಿಭಜಿಸುವುದು ಖಂಡನೀಯ. ಇದುದೇಶದ ಜನರ ಮೇಲೆ ಕೇಂದ್ರ ಸರ್ಕಾರ ನಡೆಸಿರುವ ಕ್ರೌರ್ಯ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಎಎ ಮತ್ತು ಎನ್‌ಆರ್‌ಸಿ ಮೂಲಕ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಿ ಹಿಂದೂರಾಷ್ಟ್ರ ಮಾಡಲು ಯತ್ನಿಸುತ್ತಿದೆ’ ಎಂದು ಆರೋಪಿಸಿದರು.

‘ನಾವು ಭಾರತೀಯರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ಪೌರತ್ವ ಸಾಬೀತುಪಡಿಸಬೇಕು ಎನ್ನುವುದರಲ್ಲಿ ಅರ್ಥವಿಲ್ಲ. ಇದಕ್ಕೆ ನನ್ನ ವಿರೋಧವಿದೆ. ಇಂತಹ ಕಾಯ್ದೆ ಹೇರಿರುವುದು ದುರದೃಷ್ಟಕರ. ಜಾತ್ಯತೀತ ನಿಲುವಿನ ಈ ರಾಷ್ಟ್ರದಲ್ಲಿ ಮೋದಿ ಸರ್ಕಾರ ಸಿಎಎ ಎಂಬ ಕರಾಳ ಕಾನೂನನ್ನು ಜಾರಿಗೆ ತಂದಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದ ಮುಸ್ಲಿಮರನ್ನು ಬಿಟ್ಟು ಉಳಿದ ಎಲ್ಲ ಧರ್ಮಗಳ ಜನರಿಗೆ ಭಾರತದ ಪೌರತ್ವ ನೀಡಲು ಮುಂದಾಗಿರುವುದು ಖಂಡನೀಯ’ ಎಂದು ತಿಳಿಸಿದರು.

‘ಎನ್‌ಆರ್‌ಸಿಯಿಂದ ಅಸ್ಸಾಂನಲ್ಲಿ ಲಕ್ಷಾಂತರ ಮಂದಿ ತಮ್ಮ ಪೌರತ್ವ ಸಾಬೀತುಪಡಿಸಲು ಅಪಾರ ಹಣ ಹಾಗೂ ಸಮಯ ವ್ಯಯಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಆ ಕಷ್ಟವನ್ನು ದೇಶದ ಎಲ್ಲರ ಜನರ ಮೇಲೆ ಹೇರಲು ಸರ್ಕಾರ ಮುಂದಾಗಿರುವುದು ಖೇದಕರ. ಮೋದಿ ಮತ್ತು ಅಮಿತ್‌ ಶಾ ಅವರು ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಬಗ್ಗೆ ಒತ್ತು ಕೊಡದೆ ಧರ್ಮ ಆಧರಿತ ಕಾರ್ಯಕ್ರಮಗಳಿಗೆ ಗಮನಕೊಟ್ಟು ದೇಶನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ. ಜಾತ್ಯತೀತ ಮೌಲ್ಯಗಳಿಗೆ ಪೆಟ್ಟು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ಕೆಪಿಸಿಸಿ ರಾಜ್ಯ ಘಟಕದ ಸಂಚಾಲಕ ಟಿ.ನಾರಾಯಣಸ್ವಾಮಿ, ಎನ್‌ಎಸ್‌ಯುಐ ರಾಜ್ಯ ಘಟಕದ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ಯುವ ಕಾಂಗ್ರೆಸ್‌ ಶಿಡ್ಲಘಟ್ಟ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಟಿ.ಹರೀಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT