ಶನಿವಾರ, ಅಕ್ಟೋಬರ್ 23, 2021
24 °C
ಸಾಮಾಜಿಕ ನ್ಯಾಯ, ಸಬಲೀಕರಣ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಕೃಷಿ ಕಾಯ್ದೆ: ಮುಕ್ತ ಚರ್ಚೆಗೆ ಕೇಂದ್ರ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಕೃಷಿ ಸಂಬಂಧಿತ ಕಾಯ್ದೆಗಳ ಸಾಧಕ-ಭಾದಕಗಳ ಬಗ್ಗೆ ಚರ್ಚೆ ಮಾಡಲು ಕೇಂದ್ರ ಸರ್ಕಾರ ಸಿದ್ಧ ಇದೆ. ಕೆಲವರು ರಾಜಕೀಯ ಮಾಡುವುದು ಬಿಟ್ಟು ಮುಕ್ತ ಚರ್ಚೆಗೆ ಬರಬೇಕು ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ಭಾನುವಾರ ವಿವಿಧ ದಲಿತ ಪರ ಸಂಘಟನೆ, ಬಿಜೆಪಿ ಮುಖಂಡರು ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

ದೆಹಲಿಯ ಗಡಿಗಳಲ್ಲಿ ಕಳೆದ 9 ತಿಂಗಳಿನಿಂದ ರೈತರು ಕೃಷಿ ಸಂಬಂಧಿತ ಕಾಯ್ದೆಗಳ ತಿದ್ದುಪಡಿಯ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಕಾಯ್ದೆಯ ಸಾಧಕ-ಭಾದಕಗಳ ಬಗ್ಗೆ ಅನೇಕ ಭಾರಿ ಕೇಂದ್ರ ಸಚಿವರು, ಅಧಿಕಾರಿಗಳು, ರೈತ ಮುಖಂಡರ ಜತೆ ಚರ್ಚೆ ಮಾಡಿದ್ದಾರೆ. ಆದರೆ ರೈತರು ಪ್ರತಿಭಟನೆಯ ಪಟ್ಟು ಬಿಡುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಎಲ್ಲ ಸಮುದಾಯದವರಿಗೂ ವಿಶೇಷ ಸ್ಥಾನಮಾನ ನೀಡಿದೆ ಎಂದರು.

ಕೇಂದ್ರ ಸರ್ಕಾರ ಕೃಷಿ, ಕೂಲಿಕಾರ್ಮಿಕರ ಪರವಾಗಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕೃಷಿ, ಕೂಲಿಕಾರ್ಮಿಕರ ಪರ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಆರೋಗ್ಯ, ಶಿಕ್ಷಣಕ್ಕೆ ಸಂಬಂಧಿತವಾದ ಯೋಜನೆಗಳನ್ನು ಜಾರಿ ಮಾಡಿರುವುದರಿಂದ, ಕೋಟ್ಯಾಂತರ ಮಂದಿಗೆ ವರದಾನ ಆಗಿದೆ. ಕಳೆದ 50 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳನ್ನು ಮಾಡಿರಲಿಲ್ಲ. ಆದರೆ 7 ವರ್ಷಗಳಲ್ಲಿನ ಮೋದಿ ಆಡಳಿತದಲ್ಲಿ ಜನಪರ ಯೋಜನೆಗಳು ಜಾರಿ ಆಗಿದೆ ಎಂದರು.

ವಿಶ್ವಸಂಸ್ಥೆಯ ಭಾಷಣದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿವರು ಭಾಷಣದಲ್ಲಿ ಭಯೋತ್ಪಾದನೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಎಲ್ಲ ರಾಷ್ಟ್ರಗಳು ಒಂದಾಗಿ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಬೇಕು. ಆಫ್ಘಾನಿಸ್ತಾನದ ನೆಲದಲ್ಲಿ ಶಾಂತಿಯ ನೆಲೆ ಕಾಪಾಡಬೇಕು. ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರಗಳ ವಿರುದ್ಧ ಕುಟುಕಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ಇರಬೇಕು. ಜನಪರ ಸರ್ಕಾರಗಳು ಇರಬೇಕೇ ಹೊರತು, ಜನರ ಮಾನ, ಪ್ರಾಣಗಳು ಹೋಗುವ ಸರ್ಕಾರಗಳು ಆಡಳಿತ ಮಾಡಬಾರದು. ವಿರೋಧ ಪಕ್ಷಗಳು ರಾಜಕೀಯ ಬಿಟ್ಟು ಸಮಸ್ಯೆಗಳ ಬಗ್ಗೆ ಸದನದ ಒಳಗೆ ಮುಕ್ತವಾದ ಚರ್ಚೆಗೆ ಅವಕಾಶ ಇದೆ. ಜನರಿಗೆ ತಪ್ಪು ಮಾಹಿತಿಗಳನ್ನು ನೀಡುವುದನ್ನು ಬಿಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ.ವಿ.ಪೂಜಪ್ಪ, ಜಿಲ್ಲಾ ಸಂಚಾಲಕರಾದ ಎಂ.ಜಿ.ಕಿರಣ್‍ಕುಮಾರ್, ಜಯಂತ್, ಸೇರಿದಂತೆ ದಲಿತ ಪರ ಸಂಘಟನೆಗಳ ಮುಖಂಡರು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಲಿಂಗಪ್ಪ, ಮಂಡಲ ಅಧ್ಯಕ್ಷ ಪ್ರತಾಪ್, ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಹಾಗೂ ಕೆಡಿಪಿ ಸದಸ್ಯ ವೆಂಕಟೇಶ್, ಎಪಿಎಂಸಿ ಉಪಾಧ್ಯಕ್ಷ ಕೆ.ಆರ್.ಆಂಜಿನಪ್ಪ, ಮಾಜಿ ಮಂಡಲ ಅಧ್ಯಕ್ಷ ಚಂದ್ರಮೋಹನ್, ರಾಜ್ಯ ಮಹಿಳಾ ಕಾರ್ಯಕಾರಿಣಿ ಸದಸ್ಯೆ ನಿರ್ಮಲಮ್ಮ, ಮುಖಂಡರಾದ ಟಿ.ರಾಮಪ್ಪ, ಜಿ.ವಿ.ಕೃಷ್ಣಯ್ಯ, ಗೂಳೂರು ಲಕ್ಷ್ಮಿನಾರಾಯಣ, ಮಲ್ಲಿಕಾರ್ಜುನ ರೆಡ್ಡಿ, ಮಂಜುನಾಥ್, ಸಿ.ಎನ್.ಧೀರಜ್, ಮಹಿಳಾ ಮುಖಂಡರಾದ ವೆಂಕಟಲಕ್ಷ್ಮಮ್ಮ, ಮಂಜುಳಬಾಯಿ, ಮಂಜುಳ, ಜಿ.ಗಂಗುಲಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು