ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: 'ನಿವೇಶನದ ಹೆಸರಿನಲ್ಲಿ ಜನರಿಗೆ ವಂಚನೆ'

ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ವಾಗ್ದಾಳಿ
Last Updated 25 ಫೆಬ್ರುವರಿ 2023, 5:29 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಿವೇಶನದ ಹೆಸರಿನಲ್ಲಿ ಸಚಿವ ಡಾ.ಕೆ.ಸುಧಾಕರ್ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. 21 ಸಾವಿರ ನಿವೇಶನ ನೀಡಲಾಗುವುದು ಎನ್ನುವುದು ಸುಳ್ಳು ಎಂದು ಮಾಜಿ ಶಾಸಕ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ದೂರಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಲರಿಂದಲೂ ಅರ್ಜಿ ಸ್ವೀಕರಿಸುತ್ತಿದ್ದಾರೆ. ಸರ್ಕಾರದಿಂದ ವಿವಿಧ ಗ್ರಾಮಗಳಲ್ಲಿ ನಿವೇಶನಕ್ಕೆ 179 ಎಕರೆ ಜಮೀನು ಗುರುತಿಸಿದ್ದೇವೆ ಎನ್ನುತ್ತಿದ್ದಾರೆ. ಆ ಜಮೀನು ಪರಿವರ್ತನೆ ಆಗಬೇಕು. ರಸ್ತೆ ನಿರ್ಮಾಣವಾಗಬೇಕು. ನಿವೇಶನ ಸಂಖ್ಯೆ ಸೃಷ್ಟಿಸಿ ನಂತರ ಕೊಡಬೇಕು. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಪೌರ ಕಾರ್ಮಿಕರಿಗೆ ನಿವೇಶನ ನೀಡುತ್ತೇವೆ ಎಂದು ನಾಲ್ಕೈದು ಮಂದಿಗೆ ಪತ್ರ ನೀಡಿದರು. ನಂತರ ಅದನ್ನು ವಾಪಸ್ ಪಡೆದರು ಎಂದರು.

ನಿವೇಶನಕ್ಕಾಗಿ ಜನರು ಬಾಡಿಗೆ ಕರಾರು ಪತ್ರ, ಆದಾಯ ಪ್ರಮಾಣ ಪತ್ರ ಸೇರಿದಂತೆ ದಾಖಲೆಗಳಿಗಾಗಿ ಸಾವಿರಾರು ರೂಪಾಯಿ ವ್ಯಯ ಮಾಡುತಿದ್ದಾರೆ. ಸುಧಾಕರ್ ಶಾಸಕರಾಗಿ 10 ವರ್ಷಗಳಾಗಿವೆ. ಆದರೆ ನಿವೇಶನ ನೀಡಿಲ್ಲ. ಈಗ 21 ಸಾವಿರ ನಿವೇಶನ ನೀಡುತ್ತೇನೆ ಎನ್ನುತ್ತಿದ್ದು ‌ಇದು ಪೊಳ್ಳು ಭರವಸೆ ಎಂದು ದೂರಿದರು.

ಸ್ಟೌ, ಮಿಕ್ಸಿ ಕೊಟ್ಟು ಮತ ಪಡೆಯುವ ಕಾಲ ಹೋಗಿದೆ. ಜನರು ಪ್ರಜ್ಞಾವಂತರಾಗಿದ್ದಾರೆ. ಡಿಸಿಸಿ ಬ್ಯಾಂಕ್ ಮೂಲಕ ಮಹಿಳಾ ಸಂಘಗಳಿಗೆ ಸಾಲ ನೀಡಲಾಗುತ್ತಿದೆ. ಆದರೆ ಸುಧಾಕರ್ ನಿಮ್ಮ ಖಾತೆಗೆ ಹಣ ಹಾಕಿದ್ದಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೆ ಕುಕ್ಕರ್, ಮಿಕ್ಸಿ, ಸ್ಟೌ ಹಂಚುವ ಪ್ರಮೆಯ ಇರಲಿಲ್ಲ ಎಂದರು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುತ್ತದೆ. ರೈತರಿಗೆ ಪ್ರತಿ ಎಕರೆ ₹ 10 ಸಾವಿರ ಸಹಾಯಧನ ನೀಡಲಾಗುತ್ತದೆ. ಆದ್ದರಿಂದ ಜೆಡಿಎಸ್ ಬೆಂಬಲಿಸಿ ಎಂದು ಜನರನ್ನು ಕೋರುತ್ತಿದ್ದೇವೆ ಎಂದರು.

ಬಿಜೆಪಿ ಸರ್ಕಾರ ರಾಜ್ಯವನ್ನು ಲೂಟಿ ಹೊಡೆಯುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಗಾಜಿನ ಮನೆ ನಿರ್ಮಿಸಿದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಇವರ ಗುಲಾಮರಾಗಿ
ದ್ದಾರೆ. ಶಾಲಾ, ಕಾಲೇಜು ಆವರಣವನ್ನು ಬೇರೆ ಕಾರ್ಯಕ್ರಮಗಳಿಗೆ ಬಳಸಿಕೊಳ್ಳ
ಬಾರದು. ಜೆಡಿಎಸ್ ಕುಟುಂಬ ಸಮಾವೇಶ ಮಾಡುವ ದಿನವೇ ಇವರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ಇವರಿಗೆ ಮಾತ್ರ ಅಧಿಕಾರಿಗಳು ಇಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡುತ್ತಾರೆ ಎಂದು
ಹೇಳಿದರು.

ಕ್ಷೇತ್ರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ನಾನು ನನ್ನ ಆಡಳಿತ ಅವಧಿಯಲ್ಲಿ ಪ್ರಾಮಾಣಿಕವಾಗಿ ಇದ್ದೇವೆ. ಒಂದು ರೂಪಾಯಿ ಹಣವನ್ನು ಯಾರಿಂದಲೂ ಪಡೆದಿಲ್ಲ. ಭ್ರಷ್ಟಾಚಾರ ಮಾಡಿಲ್ಲ. ಜಾತಿ ನೋಡಿಲ್ಲ
ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್ ಮಾತನಾಡಿ, ‘ಅಧಿಕಾರ ಮದ ಮತ್ತು ದುಡ್ಡಿನ ದುರಹಂಕಾರದಿಂದ ಸಾರ್ವಜನಿಕರು, ಮತದಾರರನ್ನು ಖರೀದಿಸುತ್ತೇವೆ ಎಂದು ಕ್ಷೇತ್ರದ ಜನಪ್ರತಿನಿಧಿ ಮುಂದಾಗಿದ್ದಾರೆ ಎಂದರು.

ಅಲ್ಪಸಂಖ್ಯಾತರು, ದಲಿತರು, ರೈತರ ಪರವಾಗಿ ಇವರು ಧ್ವನಿ ಎತ್ತಿದ್ದೀರಾ? ಯಾವ ಮುಖದಿಂದ ಮತ ಕೇಳುತಿದ್ದೀರಿ. ಸುಧಾಕರ್ ಅವರನ್ನು ಈ ಕ್ಷೇತ್ರದ ಜನರು ಮೂರು ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ಇವರು ಕ್ಷೇತ್ರದ ಜನರ ಭಾವನೆ ಅರ್ಥ ಮಾಡಿಕೊಂಡಿದ್ದಾರಾ?. ಗಂಗಾಕಲ್ಯಾಣ ಯೋಜನೆ ಅನುಷ್ಠಾನವಾಗುತ್ತಿಲ್ಲ, ಬಗರ್ ಹುಕುಂ ಸಾಗುವಳಿ ಚೀಟಿ ನೀಡಿಲ್ಲ, ಅಲೆಮಾರಿ ಸಮುದಾಯಗಳ ನಿವೇಶನಕ್ಕೆ ಮೀಸಲಿಟ್ಟ ಹಣವನ್ನು ಸರ್ಕಾರ ವಾಪಸ್ ಪಡೆದಿದೆ. ಇಷ್ಟೆಲ್ಲ ಆದರೂ ನಿಮಗೆ ಮತ ಕೊಟ್ಟ ದಲಿತರ ಬಗ್ಗೆ ಮಾತನಾಡಿಲ್ಲ. ಮತಕ್ಕೆ ಮಾತ್ರ ಬಳಸಿಕೊಳ್ಳುತಿದ್ದೀರಿ ಎಂದು ಕಿಡಿಕಾರಿದರು.

ಸೀರೆ, ಕುಕ್ಕರ್, ಸ್ಟೌ ಕೊಡುವುದು ಅಭಿವೃದ್ಧಿಯಾ. ಬೆಟ್ಟ ಗುಡ್ಡದ ಪ್ರದೇಶದಲ್ಲಿ ನಿವೇಶನಕ್ಕೆ ಎಂದು ಜಾಗ ಗುರುತಿಸಿದ್ದಾರೆ ಎಂದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ, ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ನಗರಸಭೆ ಉಪಾಧ್ಯಕ್ಷೆ ವೀಣಾರಾಮು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ಮುಖಂಡರಾದ ಬಾಲಕುಂಟಹಳ್ಳಿ ಮುನಿಯಪ್ಪ, ಶ್ರೀಧರ್ ಗೌಡ ಇತರರು ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT