ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ| ಹಳೇ ಚಿತ್ರಗೀತೆಗಳಲ್ಲಿ ಬದುಕಿನ ಸಾರ: ಯಲುವಹಳ್ಳಿ ಸೊಣ್ಣೇಗೌಡ 

ಕಸಾಪದಿಂದ ಹಳೆಯ ಚಿತ್ರ ಗೀತೆಗಳ ಗಾಯನ ಸ್ಪರ್ಧೆ
Published 4 ಜೂನ್ 2023, 14:52 IST
Last Updated 4 ಜೂನ್ 2023, 14:52 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ವಿಶ್ವ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಹಳೆಯ ಚಲನಚಿತ್ರಗೀತೆಗಳ ಗಾಯನ ಸ್ಪರ್ಧೆ ನಡೆಯಿತು. 

ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ಹಳೆಯ ಚಲನ ಚಿತ್ರಗೀತೆಗಳಲ್ಲಿ ಬದುಕಿನ ಸಾರವಿದೆ. ಜನರಿಗೆ ಮನರಂಜನೆಯನ್ನುನೀಡುವುದರ ಜೊತೆಗೆ ಮೌಲ್ಯಗಳನ್ನು ಬಿತ್ತುತ್ತಿದ್ದವು. ಆಗಿನ ಕಾಲದ ಚಿತ್ರಗಳು ಕುಟುಂಬ ಸಮೇತವಾಗಿ ನೋಡುವಂತ ಸದಭಿರುಚಿಯ ಚಿತ್ರಗಳಾಗಿರುತ್ತಿದ್ದವು ಎಂದು ಹೇಳಿದರು. 

ಹಾಡುಗಳ ಮೂಲಕವೇ ಅನಕ್ಷರಸ್ಥರಿಗೆ ಭಾಷೆಯನ್ನು ಸಾಹಿತಿಗಳು ಕಲಿಸಿದರು. ಕು.ರಾ. ಸೀತಾರಾಮಶಾಸ್ತ್ರಿ, ಕಣಗಾಲ್ ಪ್ರಭಾಕರ ಶಾಸ್ತ್ರಿ, ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್, ಹುಣಸೂರು ಕೃಷ್ಣಮೂರ್ತಿ, ದೊಡ್ಡರಂಗೇಗೌಡ ಅಂತಹ ಸಾಹಿತ್ಯ ರಚನೆಕಾರರ ಹಾಡುಗಳು ನಾಡಿನಲ್ಲಿ ಮನೆ ಮಾತಾಗಿವೆ ಎಂದು ಹೇಳಿದರು. 

ಶಾಲೆ ಕಾಲೇಜುಗಳಲ್ಲಿ ಕನ್ನಡದ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಕಸಾಪ ಹಮ್ಮಿಕೊಳ್ಳುತ್ತಿದೆ. ಮಕ್ಕಳಿಗೆ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಇಂದಿನ ಪೀಳಿಗೆಗೆ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಕಸಾಪ ಹಮ್ಮಿಕೊಳ್ಳುತ್ತಿದೆ ಎಂದರು.

ಶಿಶು ಅಭಿವೃದ್ಧಿ ಅಧಿಕಾರಿ ಎನ್.ಗಂಗಾಧರಯ್ಯ ಮಾತನಾಡಿ, ಮಕ್ಕಳಲ್ಲಿ ಏಕಾಗ್ರತೆ ಮತ್ತು ಆಸಕ್ತಿ ಬೆಳೆಸಲು ಮತ್ತು ನಾಡಿನ ಸಾಹಿತ್ಯ ಸಂಸ್ಕೃತಿಯ ಪರಿಚಯಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ. ಕನ್ನಡ ಭಾಷೆಯ ಮಹತ್ವ ಅರಿಯಲು ಮಕ್ಕಳು ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಕಾಲೇಜಿನ ಅಧ್ಯಕ್ಷ ಶ್ರೀನಿವಾಸ್, ಇನಮಿಂಚೇನಹಳ್ಳಿ ಶಾಂತಮೂರ್ತಿ, ಸಾಹಿತಿ ಬಿ.ಎಂ.ಪ್ರಮೀಳಾ, ಕಸಾಪ ಪದಾಧಿಕಾರಿಗಳಾದ ಕೆ.ಎಂ.ರೆಡ್ಡಪ್ಪ, ಸುಶೀಲಾ ಮಂಜುನಾಥ್, ಜಯಭಾರತಿ, ಕೆ.ಎಂ.ಕಾವ್ಯ, ಅಣ್ಣಮ್ಮ, ಮಹಂತೇಶ್, ವಿ.ಮಂಜುನಾಥ, ಜಿ.ಎಂ.ವೆಂಕಟೇಶ್ ಇದ್ದರು. 

ಪಂಚಗಿರಿ ಬೋಧನ ಪ್ರೌಢಶಾಲೆ ಮುಖ್ಯ ಶಿಕ್ಷಕ  ಎಂ.ನಾರಾಯಣಸ್ವಾಮಿ, ನೆಲಮಾಕನಹಳ್ಳಿ ಸರ್ಕಾರಿ ಶಾಲೆ ಶಿಕ್ಷಕಿ ಟಿ.ರಾಧಾಮಣಿ ತೀರ್ಪುಗಾರರಾಗಿದ್ದರು. ಮೊದಲನೇ ಬಹುಮಾನ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅನುಷಾ, ಎರಡನೇ ಬಹುಮಾನ ಲಕ್ಷ್ಮಿ ಹಾಗೂ ಮಾನಸ ತೃತೀಯ ಬಹುಮಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT