ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ವೀಕ್ಷಕರ ಸಭೆ ನಂತರ ಹೆಚ್ಚಿದ ‘ಕೈ’ ಬೇಗುದಿ

ಐದು ಮಂದಿ ಸಂಭವನೀಯರ ಹೆಸರು ಹೈಕಮಾಂಡ್‌ಗೆ
Published 6 ಡಿಸೆಂಬರ್ 2023, 5:47 IST
Last Updated 6 ಡಿಸೆಂಬರ್ 2023, 5:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಮುಖಂಡರ ಅಭಿಪ್ರಾಯ ಆಲಿಸಲು ಲೋಕಸಭಾ ಕ್ಷೇತ್ರದ ವೀಕ್ಷಕ ಬಿ.ಝೆಡ್. ಜಮೀರ್‌ ಅಹಮದ್ ಖಾನ್ ಇತ್ತೀಚೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ್ದರು. 

ಆ ಸಭೆಯ ನಂತರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಚಟುವಟಿಕೆಗಳು ಗರಿಗೆದರಿವೆ. ಅಲ್ಲದೆ ಮುಖಂಡರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು ಬಣಗಳಾಗಿ ವಿಭಜನೆ ಆಗಿದ್ದಾರೆ. ತಮ್ಮ ನಾಯಕನಿಗೆ ಟಿಕೆಟ್ ಎಂದು ವಿಶ್ವಾಸದಲ್ಲಿ ನುಡಿಯುತ್ತಿದ್ದಾರೆ. ಅದಕ್ಕೆ ತಮ್ಮದೇ ಆದ ಕಾರಣಗಳನ್ನು ಮುಂದಿಡುತ್ತಿದ್ದಾರೆ.

ಜಮೀರ್‌ ಅಹಮದ್ ಅವರು ಸಭೆ ನಡೆಸಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ವೀರಪ್ಪ ಮೊಯಿಲಿ, ರಕ್ಷಾ ರಾಮಯ್ಯ, ಎನ್‌.ಎಚ್‌. ಶಿವಶಂಕರ ರೆಡ್ಡಿ, ಮಾಜಿ ಶಾಸಕ ವೆಂಕಟರಮಣಯ್ಯ ಮತ್ತು ಮುಖಂಡ ಕೆಂಚೇಗೌಡ ಅವರ ಹೆಸರುಗಳೊಂದಿಗೆ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ವೀರಪ್ಪ ಮೊಯಿಲಿ, ರಕ್ಷಾ ರಾಮಯ್ಯ, ಎನ್‌.ಎಚ್‌. ಶಿವಶಂಕರ ರೆಡ್ಡಿ ಅವರು ಟಿಕೆಟ್‌ಗೆ ಪ್ರಬಲ ಪೈಪೋಟಿ ನಡೆಸುವ ಸಾಧ್ಯತೆ ಇದೆ. ಅಂತಿಮವಾಗಿ ರಾಜ್ಯ ನಾಯಕರು ಮತ್ತು ಹೈಕಮಾಂಡ್ ಒಲವು ಹೊಂದಿದ್ದವರಿಗೆ ಟಿಕೆಟ್ ದೊರೆಯಲಿದೆ. ವೀರಪ್ಪ ಮೊಯಿಲಿ ಮತ್ತು ರಕ್ಷಾ ರಾಮಯ್ಯ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಈಗಾಗಲೇ ಕ್ಷೇತ್ರದಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. 

ಸಭೆಗಳನ್ನು ನಡೆಸುವ ವಿಚಾರದಲ್ಲಿಯೂ ಪಕ್ಷದೊಳಗೆ ಪೈಪೋಟಿ ಇದೆ. ಎರಡೂ ಬಣಗಳಿಗೆ ಸೇರದ ಮುಖಂಡರು ತಟಸ್ಥ ನಿಲುವು ತಾಳಿದ್ದಾರೆ. ಹೈಕಮಾಂಡ್‌ನತ್ತ ಬೆರಳು ತೋರುತ್ತಿದ್ದಾರೆ. 

ಸಭೆಯಲ್ಲಿ ಗೌರಿಬಿದನೂರು ಕ್ಷೇತ್ರದ ಮುಖಂಡರು ಶಿವಶಂಕರರೆಡ್ಡಿ, ದೊಡ್ಡಬಳ್ಳಾಪುರ ಕ್ಷೇತ್ರದ ಮುಖಂಡರು ವೆಂಕಟರಮಣಯ್ಯ ಅವರಿಗೆ ಟಿಕೆಟ್ ನೀಡುವಂತೆ ಪ್ರತಿಪಾದಿಸಿದ್ದಾರೆ. ಆದರೆ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಮತ್ತು ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಅವರ ‍ಬಣಗಳ ನಡುವೆ ಜಟಾಪಟಿ ಜೋರಾಗಿಯೇ ನಡೆದಿದೆ. 

ಆ ಜಪಾಪಟಿ ಈಗ ವಿಧಾನಸಭಾ ಕ್ಷೇತ್ರಗಳಿಗೂ ಕಾಲಿಟ್ಟಿದೆ. ವೀರಪ್ಪ ಮೊಯಿಲಿ ಬಣ, ರಕ್ಷಾ ರಾಮಯ್ಯ ಅವರ ಬಣ ಎನ್ನುವ ರೀತಿಯಲ್ಲಿ ‘ಪ್ರಮುಖ’ ಮುಖಂಡರು ವಿಭಜನೆಯಾಗಿದ್ದಾರೆ. ವಿಧಾನಸಭಾ ಚುನಾವಣೆಯ ವೇಳೆ ರಕ್ಷಾ ಅವರು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ತಿಳಿಸಿದರು. ಅವರ ಹೆಸರು ಸಹ ಚಿಕ್ಕಬಳ್ಳಾಪುರದ ಕ್ಷೇತ್ರದಲ್ಲಿ ಹೆಚ್ಚಿನ ಚಾಲ್ತಿಯಲ್ಲಿ ಇತ್ತು. ಆದರೆ ಅವರೇ ಈ ಬಗ್ಗೆ ಆಸಕ್ತಿವಹಿಸಲಿಲ್ಲ. ಈ ವಿಚಾರವನ್ನು ಸಹ ಚಿಕ್ಕಬಳ್ಳಾಪುರ ಕ್ಷೇತ್ರದ ಮುಖಂಡರೊಬ್ಬರು ಸಭೆಯಲ್ಲಿ ಪ್ರಸ್ತಾಪಿಸಿ ವೀರಪ್ಪ ಮೊಯಿಲಿ ಅವರ ಪರವಾಗಿ ಮಾತನಾಡಿದ್ದಾರೆ.

ಶಾಸಕರ ಚಿತ್ತ ಎತ್ತ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಐದು ಮಂದಿ ಕಾಂಗ್ರೆಸ್ ಶಾಸಕರು ಇದ್ದಾರೆ. ಈ ಶಾಸಕರ ಅಭಿಪ್ರಾಯ ಸಹ ಮುಖ್ಯವಾಗುತ್ತದೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಬಹಿರಂಗವಾಗಿಯೇ ವೀರಪ್ಪ ಮೊಯಿಲಿ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಕೆಲವು ಶಾಸಕರು ‘ಗುಪ್ತ’ವಾಗಿ ವೀಕ್ಷಕರಿಗೆ ಅಭಿಪ್ರಾಯ ಹೇಳಿದ್ದಾರೆ.

ಜಾತಿ ಲೆಕ್ಕಾಚಾರ, ಹಿರಿತನ, ಪ್ರಭಾವ ಇತ್ಯಾದಿ ಲೆಕ್ಕಾಚಾರಗಳು ಸಹ ಟಿಕೆಟ್ ಹಂಚಿಕೆಯಲ್ಲಿ ಪ್ರಮುಖವಾಗುತ್ತದೆ. 

ರಕ್ಷಾ ರಾಮಯ್ಯ
ರಕ್ಷಾ ರಾಮಯ್ಯ
ಎನ್‌.ಎಚ್‌.ಶಿವಶಂಕರರೆಡ್ಡಿ
ಎನ್‌.ಎಚ್‌.ಶಿವಶಂಕರರೆಡ್ಡಿ
ಟಿ.ವೆಂಕಟರಮಣಯ್ಯ
ಟಿ.ವೆಂಕಟರಮಣಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT