ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಸ್ವೀಕಾರ

ಸಿನಿಮಾ ಡೈಲಾಗ್‌ ಬಿಟ್ಟು ಅಭಿವೃದ್ಧಿಗೆ ಸಹಕರಿಸಿ; ಶಾಸಕರಿಗೆ ಜೆ.ನಾಗರಾಜ್ ಸಲಹೆ
Published : 17 ಸೆಪ್ಟೆಂಬರ್ 2024, 14:35 IST
Last Updated : 17 ಸೆಪ್ಟೆಂಬರ್ 2024, 14:35 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ಇಲ್ಲಿನ ನಗರಸಭೆ ಅಧ್ಯಕ್ಷರಾಗಿ ಎ.ಗಜೇಂದ್ರ ಮತ್ತು ಉಪಾಧ್ಯಕ್ಷರಾಗಿ ಜೆ.ನಾಗರಾಜ್ ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದರು. ಬಿಜೆಪಿ ಸದಸ್ಯರು, ಮುಖಂಡರು ಈ ವೇಳೆ ಹಾಜರಿದ್ದರು. ನಗರಸಭೆ ಮುಂಭಾಗ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. 

ಈ ವೇಳೆ ಮಾತನಾಡಿದ ನಗರಸಭೆ ನೂತನ ಅಧ್ಯಕ್ಷ ಎ.ಗಜೇಂದ್ರ, ‘ಚಿಕ್ಕಬಳ್ಳಾಪುರ ಅಭಿವೃದ್ಧಿ ಆದ್ಯತೆ ನೀಡುತ್ತೇವೆ. ಅಭಿವೃದ್ಧಿಗಾಗಿ ಎಲ್ಲರ ಸಹಕಾರ ಪಡೆಯುತ್ತೇವೆ. ಡಾ.ಕೆ.ಸುಧಾಕರ್ ಅವರು ನನ್ನನ್ನು ಮೂರು ಬಾರಿ ನಗರಸಭೆ ಸದಸ್ಯನನ್ನಾಗಿ ಮಾಡಿದ್ದಾರೆ. ಅವರು ಶಾಸಕರಾಗಿದ್ದ ಅವಧಿಯಲ್ಲಿ ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಶ್ರಮಿಸಿದರು. ಅವರ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಹೇಳಿದರು.

ಉಪಾಧ್ಯಕ್ಷ ಜೆ.ನಾಗರಾಜ್, ಪಕ್ಷಾತೀತವಾಗಿ ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಡಾ.ಕೆ.ಸುಧಾಕರ್ ಅವರ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿಗೊಳಿಸಿದ್ದಾರೆ ಎಂದರು.

ಶಾಸಕ ಪ್ರದೀಪ್ ಈಶ್ವರ್ ಅವರು ಸಿನಿಮಾ ಡೈಲಾಗ್‌ಗಳನ್ನು ಬಿಟ್ಟು ಅಭಿವೃದ್ಧಿಗೆ ಸಹಕಾರ ನೀಡಲಿ. ಶಾಸಕರಾಗಿ ಆಯ್ಕೆಯಾಗಿ ಒಂದೂಕಾಲು ವರ್ಷವಾಗಿದೆ. ಆದರೆ ಅಭಿವೃದ್ಧಿ ಕೆಲಸಗಳೇ ಆಗಿಲ್ಲ ಎಂದರು.

ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ‘ಕುಡುವತ್ತಿ ಗ್ರಾಮದ ಸರ್ಕಾರಿ ಶಾಲೆಗೆ ಸಿಎಸ್‌ಆರ್‌ ನಿಧಿಯ ಅಡಿಯಲ್ಲಿ ಆರು ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಸಿಎಸ್‌ಆರ್ ಹಣದಲ್ಲಿ ಅನೇಕ ಶಾಲೆಗಳ ಕೊಠಡಿ ನಿರ್ಮಿಸಲಾಗಿದೆ. ಆದರೆ ಕುಡುತಿಯಲ್ಲಿ ನಡೆದ ಕೊಠಡಿ ಉದ್ಘಾಟನೆ ಕಾರ್ಯಕ್ರಮಕ್ಕೆ ಸೌಜನ್ಯಕ್ಕೂ ನನಗೆ ಮಾಹಿತಿ ನೀಡಿಲ್ಲ. ಮಾಹಿತಿ ನೀಡದೆಯೇ ಉದ್ಘಾಟಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಚಿಲ್ಲರೆ ರಾಜಕೀಯ ಆರಂಭವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದಿನ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ನಗರಸಭೆಯಲ್ಲಿ ಆಡಳಿತ ನಡೆಸಿದ್ದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರು ಈ ದಿಕ್ಕಿನಲ್ಲಿ ಮುನ್ನಡೆಯಬೇಕು. ಎಲ್ಲರ ಸಹಕಾರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕು ಎಂದು ಕಿವಿಮಾತು ಹೇಳಿದರು.

ನಗರೋತ್ಥಾನ ಯೋಜನೆಯಡಿ ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ₹ 40 ಕೋಟಿ ಅನುದಾನವನ್ನು ತಂದಿದ್ದೆ. ಆ ಅನುದಾನವು ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಕೆ ಆಗಲಿ. ರಾಜಕೀಯದಲ್ಲಿ ಜಿದ್ದು ಸಾಧಿಸುವ ಸನ್ನಿವೇಶದಲ್ಲಿ ನಾವು ಇಲ್ಲಿ ಗೆಲುವು ಸಾಧಿಸಿದ್ದೇವೆ. ಇದಕ್ಕೆಲ್ಲ ಕಾಲವೇ ಉತ್ತರ ನೀಡಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT