ಚಿಕ್ಕಬಳ್ಳಾಪುರ: ‘ನಾನೊಬ್ಬ ಎಜುಕೇಟೆಡ್. ಇ–ಖಾತೆ ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ್ದೇನೆ. 40 ಕೆಲಸದ ದಿನಗಳ ಒಳಗೆ ದಾಖಲೆಗಳನ್ನು ನೀಡಬೇಕು. ಆದರೆ ಆ ಅವಧಿ ಮೀರಿ ಹೋಗಿದೆ. ಪದೇ ಪದೇ ಕಾರಣಗಳನ್ನು ಹೇಳುತ್ತಿದ್ದೀರಿ’–ಹೀಗೆ ನಾಗರಿಕ ನಾರಾಯಣಸ್ವಾಮಿ ನಗರಸಭೆ ಕಂದಾಯ ವಿಭಾಗದ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೇ ಕಿಡಿಕಾರುತ್ತಿದ್ದರು.
ಸಿಬ್ಬಂದಿ ಪಕ್ಕದಲ್ಲಿದ್ದ ನಗರಸಭೆ ಸದಸ್ಯರಿಗೆ, ‘ನಾನು ನಿಮ್ಮ ಮತದಾರ. ಇಂತಹದ್ದಕ್ಕೆಲ್ಲ ನಿಮ್ಮ ಮನೆ ಹತ್ತಿರ ಬರಲು ಆಗುತ್ತದೆಯೇ’ ಎಂದರು. ಆಗ, ಸದಸ್ಯರು, ‘ಸಿಬ್ಬಂದಿ ಕೊರತೆ ಇದೆ. ಇವರು ಒಬ್ಬರೇ ನಾಲ್ಕೈದು ವಿಭಾಗ ನಿರ್ವಹಿಸುವರು’ ಎಂದರು.
ನಾರಾಯಣಸ್ವಾಮಿ ಅವರಿಗೂ ಮುನ್ನ ಮತ್ತೊಬ್ಬ ವ್ಯಕ್ತಿಯೂ ನಿತ್ಯವೂ ಕಚೇರಿಗೆ ಸಿಬ್ಬಂದಿ ಅಲೆಸುತ್ತಿದ್ದಾರೆ. ಕೆಲಸ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಆ ಸಿಬ್ಬಂದಿ ‘ನಾನು ಇರುವುದೇ ಹೀಗೆ, ನಾನು ಮಾಡುವುದೇ ಹೀಗೆ’ ಎನ್ನುವಂತೆ ಸುಮ್ಮನೆ ಕುಳಿತಿದ್ದರು. ದಾಖಲೆಗಾಗಿ, ಕೆಲಸ ಕಾರ್ಯಗಳಿಗಾಗಿ ಕಚೇರಿ ಆವರಣದಲ್ಲಿ ಹಲವರು ಸಾಲುಗಟ್ಟಿದ್ದರು.
ಕೆಲಸ ಆಗದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುವವರಿಗೆ ‘ಆ ಕಡತ ಆ ಸಿಬ್ಬಂದಿ ಹತ್ತಿರ ಇದೆ. ನನ್ನ ಬಳಿ ಬಂದಿಲ್ಲ. ನಾನು ರಜೆಯಲ್ಲಿ ಇದ್ದೆ. ಮೂರು ದಿನ ಬಿಟ್ಟು ಬನ್ನಿ’ ಎನ್ನುವ ಸಿದ್ಧ ಮಾದರಿಯ ಉತ್ತರಗಳನ್ನು ಹೇಳಿ ಕಳುಹಿಸುತ್ತಿದ್ದರು.
ನಗರಸಭೆ ಆವರಣದಲ್ಲಿ ನಿತ್ಯವೂ ಇಂತಹ ಪ್ರಸಂಗಗಳು ಕಂಡು ಬರುತ್ತವೆ. ಈ ನಾಗರಿಕರನ್ನು ಮಾತನಾಡಿಸಿದರೆ ನಗರಸಭೆ ಸಿಬ್ಬಂದಿಯ ಬೇಜವಾಬ್ದಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಕಾಸು ಬಿಚ್ಚದಿದ್ದರೆ ಯಾವ ಕೆಲಸವೂ ಆಗುವುದಿಲ್ಲ ಎನ್ನುವ ಮಾತುಗಳು ಹೊರಬರುತ್ತವೆ.
ಜಿಲ್ಲಾಧಿಕಾರಿ ಹೇಳಿದ್ದೆಲ್ಲವೂ ಜಾರಿಯಿಲ್ಲ: ನಗರಸಭೆಯಲ್ಲಿ ಸದ್ಯ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇಲ್ಲ. ಡಿ.ಆರ್.ಆನಂದರೆಡ್ಡಿ ಬಾಬು ಮತ್ತು ವೀಣಾ ರಾಮು ಅವರ ಅಧ್ಯಕ್ಷ, ಉಪಾಧ್ಯಕ್ಷ ಅವಧಿ ಮುಗಿದ ನಂತರ ಸರ್ಕಾರವು ಮೀಸಲಾತಿ ನಿಗದಿಗೊಳಿಸಿಲ್ಲ. ಮೀಸಲಾತಿ ವಿಚಾರವು ನ್ಯಾಯಾಲಯದಲ್ಲಿರುವ ಕಾರಣ ಸದ್ಯಕ್ಕೆ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವ ಲಕ್ಷಣಗಳೂ ಇಲ್ಲ.
ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಬಜೆಟ್ ಪೂರ್ವಭಾವಿ ಸಭೆ, ಬಜೆಟ್ ಸಭೆ ಸೇರಿದಂತೆ ಆಗಾಗ್ಗೆ ನಗರಸಭೆಗೆ ಬಂದು ಸಭೆಗಳನ್ನು ನಡೆಸುವರು. ಈ ವೇಳೆ ನಗರಸಭೆ ಆಸ್ತಿಗಳಿಗೆ ನಾಮಫಲಕ ಅಳವಡಿಸಬೇಕು, ಒತ್ತುವರಿ ತೆರವುಗೊಳಿಸಬೇಕು, ಇ–ಖಾತೆಯನ್ನು ಕಾಲಮಿತಿಯಲ್ಲಿ ಮಾಡಿಕೊಡಬೇಕು. ನಾಗರಿಕರಿಗೆ ಸಿಬ್ಬಂದಿ ಸ್ಪಂದಿಸಬೇಕು...ಹೀಗೆ ಜನಸ್ನೇಹಿಯಾಗಿ ಸಿಬ್ಬಂದಿ ಕೆಲಸ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುವರು. ಆದರೆ ಅವು ಎಷ್ಟರ ಮಟ್ಟಿಗೆ ಜಾರಿಯಾಗಿವೆ ಎಂದು ನೋಡಿದರೆ ‘ಇಲ್ಲ’ ಎನ್ನುವ ಉತ್ತರ ದೊರೆಯುತ್ತದೆ. ನಗರಸಭೆ ಆಡಳಿತಾಧಿಕಾರಿಯ ಮಾತುಗಳಿಗೇ ಸಿಬ್ಬಂದಿ ಕಿಮ್ಮತ್ತು ನೀಡುತ್ತಿಲ್ಲ.
ಇ–ಖಾತೆ ಪ್ರತಿ ಕೇಳಿದರೆ ನಾನಾ ಸಬೂಬು: ಮುನ್ಸಿಪಲ್ ಬಡಾವಣೆಯಲ್ಲಿ ಮನೆಯೊಂದನ್ನು ಮಾಲೀಕರು ಮಾರಾಟಕ್ಕೆ ಇಟ್ಟಿದ್ದಾರೆ. ಆ ಮನೆಗೆ ಈಗಾಗಲೇ ಇ–ಖಾತೆಯೂ ಆಗಿದೆ. ಅದರ ಹೊಸ ಪ್ರತಿಯನ್ನು ಮನೆ ಮಾಲೀಕರು ಪಡೆಯಲು ಮುಂದಾಗಿದ್ದಾರೆ. ಒಂದು ವಾರದ ಮೇಲಾದರೂ ಈ ಸಣ್ಣ ಕೆಲಸವನ್ನು ಸಿಬ್ಬಂದಿ ಮಾಡುತ್ತಿಲ್ಲ.
ಸ್ಥಳಕ್ಕೆ ಬರಬೇಕು, ಸ್ಥಳ ಪರಿಶೀಲಿಸಬೇಕು ಎಂದು ಸಬೂಬು ಹೇಳಿ ಅರ್ಜಿ ಪಡೆಯಲು ಸತಾಯಿಸಿದ್ದಾರೆ. ‘ನೀವೇ ಇ–ಖಾತೆ ನೀಡಿದ್ದೀರಿ. ತೆರಿಗೆ ಕಟ್ಟಿದ್ದೇವೆ. ಏಕಿಷ್ಟು ಸತಾಯಿಸುತ್ತಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದಾಗ, ಅರ್ಜಿ ಪಡೆದಿದ್ದಾರೆ. ಆದರೆ ಆ ಕೆಲಸ ಇಂದಿಗೂ ಪೂರ್ಣವಾಗಿಲ್ಲ. ಇಂದು ಬನ್ನಿ, ನಾಳೆ ಬನ್ನಿ ಎಂದು ವಾರ ದಾಟಿಸಿದ್ದಾರೆ. ವಾರದ ನಂತರ ಮನೆಯ ಭಾವಚಿತ್ರ ಬೇಕು ಎಂದು ಹೇಳುತ್ತಿದ್ದಾರೆ. ಮನೆ ಭಾವಚಿತ್ರ ಬೇಕು ಎಂದು ಹೇಳಲು ನಗರಸಭೆ ಸಿಬ್ಬಂದಿ ತೆಗೆದುಕೊಂಡ ಅವಧಿ ಒಂದು ವಾರಕ್ಕೂ ಹೆಚ್ಚು!
ಆಯುಕ್ತರತ್ತ ಬೆರಳು ತೋರುವ ಸಿಬ್ಬಂದಿ: ಇ–ಖಾತೆ ಮತ್ತಿತರ ವಿಚಾರಗಳ ಕುರಿತು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಸಿಬ್ಬಂದಿ ನಗರಸಭೆ ಪೌರಾಯುಕ್ತರತ್ತ ಬೆರಳು ತೋರುತ್ತಾರೆ. ‘ಆಯುಕ್ತರು ಹೇಳಿದ್ದಾರೆ, ಆಯುಕ್ತರು ಒಪ್ಪುವುದಿಲ್ಲ’ ಎಂದು ಕಾರಣಗಳನ್ನು ಹೇಳುತ್ತಾರೆ. ಮುನ್ಸಿಪಲ್ ಬಡಾವಣೆಯ ಮನೆಯ ಪ್ರಕರಣದಲ್ಲಿ ಮನೆಯ ಮಾಲೀಕರ ಕಡೆಯುವರು, ‘ಆಯುಕ್ತರಿಗೆ ಕರೆ ಮಾಡುತ್ತೇವೆ. ಮಾತನಾಡುತ್ತೇವೆ ಎಂದು ಮೊಬೈಕ್ ಕೈಗೆತ್ತಿಕೊಳ್ಳುತ್ತಿದ್ದಂತೆ’ ಅರ್ಜಿ ಪಡೆದಿದ್ದಾರೆ. ಹೀಗೆ ಕೆಲವು ಸಿಬ್ಬಂದಿ ನಗರಸಭೆ ಪೌರಾಯುಕ್ತರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ವ್ಯಾಪಕವಾಗಿವೆ.
ಅವಾಂತರಗಳ ಸರಣಿ
ಚಿಕ್ಕಬಳ್ಳಾಪುರ ನಗರಸಭೆ ಆಡಳಿತ ವ್ಯವಸ್ಥೆ ಜಡ್ಡುಗಟ್ಟಿದೆ. ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಇ–ಖಾತೆ ಆಗುತ್ತಿಲ್ಲ. ಕಚೇರಿಗಳಿಗೆ ಅಲೆದರೂ ದಾಖಲೆಗಳು ದೊರೆಯುತ್ತಿಲ್ಲ. ವಾರ್ಡ್‌ಗಳಲ್ಲಿ ಸ್ವಚ್ಛತೆ ಕೈಗೊಳ್ಳುತ್ತಿಲ್ಲ. ಹೀಗೆ ನಗರಸಭೆಯ ಸಿಬ್ಬಂದಿಯ ಕೆಲಸ ಕಾರ್ಯಗಳ ಬಗ್ಗೆ ನಾಗರಿಕರು ಮತ್ತು ಕೆಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಲಿದೆ. ತಮ್ಮ ಕೆಲಸ ಕಾರ್ಯಗಳು ಆಗದಿರುವ ಬಗ್ಗೆ ಸಿಬ್ಬಂದಿಯ ತಾತ್ಸಾರ ಧೋರಣೆಗಳ ಬಗ್ಗೆ ನಾಗರಿಕರು ದಾಖಲೆ ಸಮೇತ ಮಾಹಿತಿ ನೀಡಬಹುದು. ಸಂಪರ್ಕಕ್ಕೆ 94490 34572
ಪೌರಾಯುಕ್ತರ ವಿರುದ್ಧವೇ ಪಿತೂರಿ
ನಗರಸಭೆ ಪೌರಾಯುಕ್ತ ಮಂಜುನಾಥ್ ಅಧಿಕಾರ ವಹಿಸಿಕೊಂಡ ನಂತರ ನಗರದಲ್ಲಿ ವಾಣಿಜ್ಯ ಸಂಕೀರ್ಣಗಳ ಕಂದಾಯ ವಸೂಲಿ, ಅಕ್ರಮ ಬಡಾವಣೆಗಳಿಗೆ ದುಪ್ಪಟ್ಟು ತೆರಿಗೆ ಹೀಗೆ ಕಾನೂನು ರೀತಿ ಕ್ರಮಗಳಿಗೆ ಮುಂದಾದರು. ಆದರೆ ನಗರಸಭೆಯ ಕೆಲವು ಸಿಬ್ಬಂದಿಯೇ ಪೌರಾಯುಕ್ತರ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಸಿಬ್ಬಂದಿಯ ಅಕ್ರಮಗಳ ಬಗ್ಗೆ ಪೌರಾಯುಕ್ತರು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದಾರೆ. ಈಗ ಇಂತಹ ಸಿಬ್ಬಂದಿ ಪೌರಾಯುಕ್ತರ ವರ್ಗಾವಣೆಯಲ್ಲಿ ಶಾಮೀಲಾಗಿದ್ದಾರೆ ಎಂದು ನಗರಸಭೆ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಕೆಲವು ಸಿಬ್ಬಂದಿ ದಪ್ಪ ಚರ್ಮದವರು. ಎಷ್ಟು ಹೇಳಿದರೂ ಕೆಲಸಗಳೇ ಆಗುವುದಿಲ್ಲ. ನಾಗರಿಕರು ಕಚೇರಿಗಳಿಗೆ ಅಲೆದು ಹೈರಾಣಾಗುತ್ತಿದ್ದಾರೆ. ಒಳ್ಳೆಯ ಕೆಲಸಗಳನ್ನು ಮಾಡಲು ಮುಂದಾದ ಪೌರಾಯುಕ್ತರ ವಿರುದ್ಧವೇ ಸಿಬ್ಬಂದಿ ಪಿತೂರಿ ಮಾಡುತ್ತಾರೆ ಎಂದರೆ ಇವರ ‘ಲಾಭ’ದ ಬಗ್ಗೆ ಅರ್ಧ ಮಾಡಿಕೊಳ್ಳಬಹುದು ಎಂದರು.
ಕರೆ ಸ್ವೀಕರಿಸದ ಜಿಲ್ಲಾಧಿಕಾರಿ
ಇ–ಖಾತೆ, ನಗರಸಭೆ ಆಸ್ತಿಗಳ ಒತ್ತುವರಿ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಮಾಹಿತಿ ಪಡೆಯಲು ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರಿಗೆ ‘ಪ್ರಜಾವಾಣಿ’ ಪ್ರತಿನಿಧಿ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.