ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಸರ್‌ಎಂ.ವಿ ಸಮಾಧಿ ಎದುರು ಶಿಲ್ಪಕಲಾ ಉದ್ಯಾನ

ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನಿಂದ ಆಲೋಚನೆ
Published : 20 ಸೆಪ್ಟೆಂಬರ್ 2024, 6:50 IST
Last Updated : 20 ಸೆಪ್ಟೆಂಬರ್ 2024, 6:50 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ಭಾರತ ರತ್ನ ಸರ್‌.ಎಂ.ವಿಶ್ವೇಶ್ವರಯ್ಯ ಅವರು ಚಿಕ್ಕಬಳ್ಳಾಪುರಕ್ಕೆ ಹೆಸರು ಮತ್ತು ಹೆಮ್ಮೆ ತಂದ ಪುತ್ರರತ್ನ. ತಾಲ್ಲೂಕಿನ ಮುದ್ದೇನಹಳ್ಳಿಯ ಅವರ ನಿವಾಸ, ಸಮಾಧಿ ಮತ್ತು ವಸ್ತುಸಂಗ್ರಹಾಲಯಕ್ಕೆ ರಾಜ್ಯದ ವಿವಿಧ ಭಾಗಗಳ ಗಣ್ಯರು, ವಿದ್ಯಾರ್ಥಿಗಳು ನಿತ್ಯ ಭೇಟಿ ನೀಡುವರು. ಇದು ಪ್ರಮುಖ ಪ್ರವಾಸಿ ಸ್ಥಳವೂ ಆಗಿದೆ.

ಸರ್‌.ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವಸ್ತುಸಂಗ್ರಹಾಲಯ, ಸಮಾಧಿಯನ್ನು ನಿರ್ವಹಿಸುತ್ತಿದೆ. ವಸ್ತುಸಂಗ್ರಹಾಲಯದಲ್ಲಿ ಭಾರತರತ್ನ ಸೇರಿದಂತೆ ಸರ್‌.ಎಂ.ವಿ ಅವರಿಗೆ ಸಂದಿರುವ ಪುರಸ್ಕಾರಗಳು, ಗೌರವ ಡಾಕ್ಟರೇಟ್‌ಗಳು, ಅವರು ಬಳಸುತ್ತಿದ್ದ ವಸ್ತುಗಳನ್ನು ಕಾಣಬಹುದು. 

ಹೀಗೆ ವಿದ್ಯಾರ್ಥಿಗಳನ್ನು ಮತ್ತು ಗಣ್ಯರನ್ನು ಸೆಳೆಯುತ್ತಿರುವ ಮುದ್ದೇನಹಳ್ಳಿಯ ಸರ್‌.ಎಂ.ವಿ ಅವರ ಜನ್ಮಸ್ಥಳದಲ್ಲಿ ಈಗ ಮತ್ತೊಂದು ಚಿಂತನೆಯು ಮೈದಳೆಯುತ್ತಿದೆ.

ಅಂದುಕೊಂಡ ರೀತಿಯಲ್ಲಿ ಆದರೆ ವಿಶ್ವೇಶ್ವರಯ್ಯ ಅವರ ಸಮಾಧಿ ಮುಂಭಾಗದ ಖಾಲಿ ಜಾಗದಲ್ಲಿ ಶಿಲ್ಪಕಲಾ ಉದ್ಯಾನವು ಮುಂದಿನ ದಿನಗಳಲ್ಲಿ ತಲೆ ಎತ್ತಲಿದೆ.  ಸರ್‌.ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ಸರ್‌.ಎಂ.ವಿ ಅವರ ಬಾಲ್ಯ, ಶಿಕ್ಷಣ, ಸಾಧನೆಗಳನ್ನು ಪ್ರತಿಬಿಂಬಿಸುವ ಮಾದರಿಗಳನ್ನು ಶಿಲ್ಪಕಲೆಯಲ್ಲಿ ಮೂಡಿಸಲು ಮುಂದಾಗಿದೆ.  ಶಿಲ್ಪಕಲಾ ಉದ್ಯಾನ ನಿರ್ಮಾಣಕ್ಕೆ ಚಿಂತಿಸಿದೆ. 

ವಿಶ್ವೇಶ್ವರಯ್ಯ ಅವರ ಮನೆ, ಅವರು ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ಕಂದವಾರ ಶಾಲೆ, ಅವರು ವ್ಯಾಸಂಗ ಮಾಡಿದ ಪುಣಿಯ ಎಂಜಿನಿಯರಿಂಗ್ ಕಾಲೇಜು, ನುಗು ಅಣೆಕಟ್ಟೆ, ‌ಕೆ.ಆರ್‌.ಎಸ್ ಅಣೆಕಟ್ಟೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಮೈಸೂರು ಸಾಬೂನು ಕಾರ್ಖಾನೆ, ಪುಣಿ, ಕೊಲ್ಹಾಪುರದಲ್ಲಿ ನಿರ್ಮಿಸಿದ ಅಣೆಕಟ್ಟೆ, ಬಿಹಾರದ ಮೊಕಾಮ್ ಬ್ರಿಡ್ಜ್–ಹೀಗೆ ವಿಶ್ವೇಶ್ವರಯ್ಯ ಅವರ ಬಾಲ್ಯ ಮತ್ತು ಸಾಧನೆಗಳನ್ನು ಪ್ರತಿಬಿಂಬಿಸುವ ಮಾದರಿಗಳು  ಶಿಲ್ಪಕಲೆಯಲ್ಲಿ ಮೂಡಲಿವೆ.  

ಯಾವುದೇ ವಿಷಯಗಳನ್ನು ಪುಸ್ತಕ ಮತ್ತು ಚಿತ್ರಗಳಲ್ಲಿ ನೋಡುವುದಕ್ಕೂ ಮಾದರಿಗಳಲ್ಲಿ ನೋಡುವುದಕ್ಕೂ ವ್ಯತ್ಯಾಸಗಳು ಇವೆ. ಮಾದರಿಗಳು ಹೆಚ್ಚು ಪರಿಣಾಮ ಬೀರುತ್ತದೆ ಎಂದು ವಿಶ್ವೇಶ್ವರಯ್ಯ ಅವರ ಮೊಮ್ಮಗ ಹಾಗೂ ಸರ್‌.ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಸತೀಶ್ ಮೋಕ್ಷಗೊಂಡಂ ‘ಪ್ರಜಾವಾಣಿ’ಗೆ ತಿಳಿಸಿದರು.

ಮುದ್ದೇನಹಳ್ಳಿಯಲ್ಲಿರುವ ವಿಶ್ವೇಶ್ವರಯ್ಯ ಅವರ ಪುತ್ಥಳಿ 
ಮುದ್ದೇನಹಳ್ಳಿಯಲ್ಲಿರುವ ವಿಶ್ವೇಶ್ವರಯ್ಯ ಅವರ ಪುತ್ಥಳಿ 

ವಿಶ್ವೇಶ್ವರಯ್ಯ ಅವರು ದಿವಾನರಾಗಿದ್ದ ಅವಧಿಯಲ್ಲಿ ಹತ್ತು ಹಲವು ಮಹತ್ವದ ನಿರ್ಮಾಣಗಳನ್ನು ನಾಡಿಗೆ ಸಮರ್ಪಿಸಿದರು. ಅವರ ಓದು, ಸಾಧನೆಗಳನ್ನು ಪ್ರತಿಬಿಂಬಿಸುವಂತೆ ಶಿಲ್ಪಕಲಾ ಉದ್ಯಾನವನ್ನು ರೂಪಿಸಲಾಗುವುದು’ ಎಂದು ಹೇಳಿದರು.

ವಿಶ್ವೇಶ್ವರಯ್ಯ ಅವರ ಸಾಧನೆಗಳು ಬಹಳಷ್ಟಿವೆ. ಇಲ್ಲಿ ಎಷ್ಟು ಮಾದರಿಗಳನ್ನು ನಿರ್ಮಿಸಬೇಕು ಎನ್ನುವ ಬಗ್ಗೆ ಟ್ರಸ್ಟ್‌ನ ಸದಸ್ಯರು ಚರ್ಚಿಸಿದ್ದೇವೆ. ಇದು ಮಹತ್ವದ ಯೋಜನೆಯಾಗಿದೆ ಎಂದರು. 

ಸತೀಶ್ ಮೋಕ್ಷಗೊಂಡಂ
ಸತೀಶ್ ಮೋಕ್ಷಗೊಂಡಂ
‘2025ರ ಜನವರಿಯಿಂದ ಕೆಲಸ ಆರಂಭ’
ವಿಶ್ವೇಶ್ವರಯ್ಯ ಅವರ ಸಮಾಧಿ ಮುಂಭಾಗದಲ್ಲಿನ ಖಾಲಿ ಜಾಗದಲ್ಲಿ ಶಿಲ್ಪಕಲಾ ಉದ್ಯಾನ ನಿರ್ಮಿಸಲು ಚಿಂತಿಸಿದ್ದೇವೆ. ಇದು ನಮ್ಮ ಟ್ರಸ್ಟ್‌ನ ಮೂರು ವರ್ಷಗಳ ಆಲೋಚನೆ ಎಂದು ಸತೀಶ್ ಮೋಕ್ಷಗೊಂಡಂ ‘ಪ್ರಜಾವಾಣಿ’ಗೆ ತಿಳಿಸಿದರು. ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್‌) ಹಣವನ್ನು ನೀಡುವುದಾಗಿ ಕೆಲವರು ಮುಂದೆ ಬಂದಿದ್ದಾರೆ. ಈ ಹಣವನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದರು. 2025ರ ಜನವರಿಯಿಂದ ಈ ಕೆಲಸಗಳು ಕಾರ್ಯಾರಂಭವಾಗಲಿವೆ.  ವಿಶ್ವೇಶ್ವರಯ್ಯ ಅವರ ಮನೆ ವ್ಯಾಸಂಗ ಮಾಡಿದ ಶಾಲೆ ಕಾಲೇಜುಗಳು ಅಂದು ಹೇಗಿದ್ದವು ಎನ್ನುವ ಮಾದರಿಗಳನ್ನು ಕಲ್ಲಿನಲ್ಲಿ ರೂಪಿಸಲಾಗುವುದು. ಎಂಜಿನಿಯರ್ ಆದ ಮೇಲೆ ಅವರ ಮೊದಲ ಯೋಜನೆ ಧುಲೆ. ಆ ಯೋಜನೆ ಇಂದಿಗೂ ಇದೆ. ಅದರ ಭಾವಚಿತ್ರ ತೆಗೆಸಿ ಅದನ್ನು ಶಿಲ್ಪಕಲೆಗೆ ಇಳಿಸಲಾಗುವುದು ಎಂದರು. ಶಿಲ್ಪಗಳ ಅಡಿ ಬರಹರದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಒಕ್ಕಣೆಗಳು ಇರುತ್ತವೆ. ಮಹಾರಾಜರ ಭಾವಚಿತ್ರವೂ ಇಲ್ಲಿ ಇರುತ್ತದೆ ಎಂದು ಹೇಳಿದರು.
ಹೊಸ ವಸ್ತು ಸಂಗ್ರಹಾಲಯಕ್ಕೂ ಆಲೋಚನೆ
ಟ್ರಸ್ಟ್‌ನಿಂದ ಹೊಸ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೂ ಆಲೋಚಿಸಲಾಗಿದೆ ಎಂದು ಸತೀಶ್ ಮೋಕ್ಷಗೊಂಡಂ ತಿಳಿಸಿದರು. ಹೊಸ ವಸ್ತು ಸಂಗ್ರಹಾಲಯ ಯಾವ ರೀತಿ ಇರಬೇಕು. ಯಾವ ರೀತಿಯಲ್ಲಿ ನಿರ್ಮಿಸಬಹುದು ಎನ್ನುವ ಬಗ್ಗೆ ವಿನ್ಯಾಸವನ್ನು ಮಾಡಿಸಲಾಗುತ್ತಿದೆ. ಶಿಲ್ಪಕಲಾ ಉದ್ಯಾನದ ಕಾರ್ಯಗಳಿಗೆ ಚಾಲನೆ ದೊರೆತ ನಂತರ ಹೊಸ ವಸ್ತುಸಂಗ್ರಹಾಲಯ ನಿರ್ಮಾಣ ಸಹ ಆರಂಭವಾಗಲಿವೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT