ಬುಧವಾರ, ಜುಲೈ 15, 2020
27 °C
ಇಂಧನ ಬೆಲೆ, ಅಗತ್ಯ ವಸ್ತುಗಳ ಬೆಲೆಗಳ ಇಳಿಕೆಗೆ ಆಗ್ರಹ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಧೋರಣೆಗೆ ಆಕ್ರೋಶ

ನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಪೆಟ್ರೋಲ್, ಡೀಸೆಲ್ ದರ ಏರಿಕೆ, ಕೊರೊನಾ ನಿಯಂತ್ರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯ, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದಲ್ಲಿ ಸೋಮವಾರ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಬಿ.ಬಿ.ರಸ್ತೆಯಲ್ಲಿರುವ ಕಾಂಗ್ರೆಸ್‌ ಕಚೇರಿಯಿಂದ ತಾಲ್ಲೂಕು ಕಚೇರಿ ವರೆಗೆ ಕಾಲ್ನಡಿಗೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವ ರೆಡ್ಡಿ,‘ಈ ಹಿಂದೆ ಕಾಂಗ್ರೆಸ್‌ ಆಡಳಿತದಲ್ಲಿ ತೈಲ ಬೆಲೆ ಏರಿಕೆಯಾದಾಗಲೆಲ್ಲ ಬೀದಿಗಿಳಿದು ಪ್ರತಿಭಟಿಸುತ್ತಿದ್ದ ಬಿಜೆಪಿಯವರು, ಇದೀಗ ತಮ್ಮದೇ ಆಡಳಿತದಲ್ಲಿ ಕಳೆದ ಕೆಲ ವಾರಗಳಿಂದ ಪೆಟ್ರೋಲ್, ಡೀಸೆಲ್ ದರಗಳು ನಿರಂತವಾಗಿ ಏರಿಕೆಯಾಗುತ್ತಿದ್ದರೂ ತುಟಿ ಬಿಚ್ಚುತ್ತಿಲ್ಲ’ ಎಂದು ಹೇಳಿದರು.

‘ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 130 ಡಾಲರ್ ಇತ್ತು. ಆಗಲೇ ಪೆಟ್ರೋಲ್, ಡೀಸೆಲ್, ಗ್ಯಾಸ್‌ಗೆಗೆ ಕಾಂಗ್ರೆಸ್‌ ಸರ್ಕಾರ ₹2.41 ಲಕ್ಷ ಕೋಟಿ ಸಬ್ಸಿಡಿ ನೀಡುತ್ತಿತ್ತು. ಈಗ ಕಚ್ಚಾ ತೈಲದ ಬ್ಯಾರೆಲ್‌ಗೆ ₹40 ಡಾಲರ್ ಆಸುಪಾಸಿದೆ. ಈಗ ಪೆಟ್ರೋಲ್, ಡೀಸೆಲ್ ₹25 ಒಂದು ಲೀಟರ್‌ಗೆ ಮಾರಬೇಕು. ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿ ಸಬ್ಸಿಡಿ ನೀಡುತ್ತಿಲ್ಲ’ ಎಂದು ಆರೋಪಿಸಿದರು.

‘ಆರು ವರ್ಷಗಳಲ್ಲಿ ಅಬಕಾರಿ ಸುಂಕದಿಂದ ಕೇಂದ್ರ ಸರ್ಕಾರಕ್ಕೆ ₹18 ಲಕ್ಷ ಕೋಟಿ ‌ಆದಾಯ ಬಂದಿದೆ. ಆದರೂ ಕೊರೊನಾದಂತಹ ಸಂಕಷ್ಟದ ಸಮಯದಲ್ಲೂ ಕೇಂದ್ರ ನಿತ್ಯ ಇಂಧನ ದರ ಏರಿಕೆ ಮಾಡುವ ಜತೆಗೆ ಅಬಕಾರಿ ಸುಂಕ ಏರಿಸಿದ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ’ ಎಂದು ಹೇಳಿದರು.

‘ಕೊರೊನಾ ನಿರ್ವಹಣೆಯಲ್ಲೂ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿವೆ. ಗ್ರಾಮೀಣ ಭಾಗದಲ್ಲಿ ಕೆಲಸವಿಲ್ಲದೆ ನಿರುದ್ಯೋಗ ತಾಂಡವವಾಡುತ್ತಿದೆ. ಕೇಂದ್ರ ಸರ್ಕಾರ ನೆರವಿಗೆ ಬಾರದೆ ಬೀದಿಗೆ ತಳ್ಳಿದೆ. ₹20 ಲಕ್ಷ ಕೋಟಿ ಪ್ಯಾಕೇಜ್ ಯಾರಿಗೆ ತಲುಪಿದೆ’ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಮುಖಂಡರಾದ ಯಲುವಹಳ್ಳಿ ರಮೇಶ್, ಕೆ.ವಿ.ನವೀನ್ ಕಿರಣ್, ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಮಕೃಷ್ಣ ಮತ್ತು ಜಯರಾಂ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್ ರೆಡ್ಡಿ, ಮುಖಂಡರಾದ ರಫೀವುಲ್ಲಾ, ಕೃಷ್ಣಪ್ಪ, ಅಡ್ಡಗಲ್ ಶ್ರೀಧರ್, ನಾರಾಯಣಸ್ವಾಮಿ, ಮಮತಾಮೂರ್ತಿ, ಮಂಗಳಾ ಪ್ರಕಾಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು