ಚಿಂತಾಮಣಿ: ತಾಲ್ಲೂಕಿನ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಪ್ರಸಕ್ತ ವರ್ಷ (2024-25) 6 ಶಾಲೆಗಳನ್ನು ಮುಚ್ಚಲಾಗಿದೆ.
ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಖಾಸಗಿ ಪ್ರತಿಷ್ಠಿತ ಶಾಲೆಗಳಲ್ಲಿ ಮಾತ್ರ ದಾಖಲಾತಿ ಹೆಚ್ಚುತ್ತಿದೆ.
ತಾಲ್ಲೂಕಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಅನುದಾನರಹಿತ ಶಾಲೆಗಳು ಸೇರಿ ಒಟ್ಟು 438 ಶಾಲೆಗಳಿವೆ. ಶಾಲೆಗಳಲ್ಲಿ ಒಟ್ಟು 40,561 ಮಕ್ಕಳು ಓದುತ್ತಿದ್ದಾರೆ. ತಾಲ್ಲೂಕಿನ 30 ಶಾಲೆಗಳು ಏಕೋಪಾಧ್ಯಾಯ ಶಾಲೆಗಳಿವೆ.
ಒಂದೆಡೆ ಖಾಸಗಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಸಂಖ್ಯೆ ಹೆಚ್ಚುತ್ತಿದ್ದರೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ ಕುಸಿಯುತ್ತಿದೆ. ಶಾಲೆಗಳು ಮಕ್ಕಳಿಲ್ಲದೆ ಭಣಗುಡುತ್ತಿವೆ. ಮಕ್ಕಳ ಕಲರವ ಇಲ್ಲದೆ ಬಿಕೋ ಎನ್ನುತ್ತಿವೆ. ಕೆಲವು ಶಾಲೆಗಳು ಮಕ್ಕಳಿಲ್ಲದೆ ಬಾಗಿಲು ಮುಚ್ಚುವ ಸ್ಥಿತಿಯಲ್ಲಿವೆ.
ತಾಲ್ಲೂಕಿನ 67 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಇದೆ. ಕೆಲವು ಶಾಲೆಗಳಲ್ಲಿ 1-5 ಮಕ್ಕಳ ದಾಖಲಾತಿ ಇರುವುದರಿಂದ ಶಾಲೆಗಳ ಅಳಿವು-ಉಳಿವಿನ ಪ್ರಶ್ನೆ ಕಾಡತೊಡಗಿದೆ. ಇದರಲ್ಲಿ ಕನ್ನಡ, ಉರ್ದು ಶಾಲೆಗಳು ಸೇರಿವೆ. ವರ್ಷ ವರ್ಷವೂ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು ಶಾಲೆಗಳನ್ನು ಬಂದ್ ಮಾಡಲಾಗುತ್ತಿದೆ. ಶೂನ್ಯ ದಾಖಲಾತಿ ಅಥವಾ ಕೇವಲ 1-2 ಮಕ್ಕಳು ಇದ್ದರೆ ಹೇಗೆ ಶಾಲೆ ನಡೆಸಲು ಸಾಧ್ಯ? ಅಲ್ಲಿರುವ ಒಂದೆರಡು ಮಕ್ಕಳನ್ನು ಬೇರೆ ಹತ್ತಿರದ ಶಾಲೆಗೆ ಸೇರಿಸಲಾಗುತ್ತಿದೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮೂಲಗಳು ತಿಳಿಸಿವೆ.
ತಾಲ್ಲೂಕಿನ 30 ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 5ಕ್ಕಿಂತ ಕಡಿಮೆ ಇದ್ದು, ಮುಂದಿನ ವರ್ಷಕ್ಕೆ ಈ ಶಾಲೆ ಮುಚ್ಚುವ ಭೀತಿ ಎದುರಾಗಿದೆ. ಕಳೆದ ವರ್ಷ 5 ಶಾಲೆಗಳನ್ನು ಮುಚ್ಚಲಾಗಿತ್ತು. ಈ ವರ್ಷ 6 ಶಾಲೆಗಳನ್ನು ಮುಚ್ಚಲಾಗಿದೆ. ಇಂಥಹ ಅನೇಕ ಶಾಲೆಗಳ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ. 37 ಶಾಲೆಗಳಲ್ಲಿ 5-10, 97 ಶಾಲೆಗಳಲ್ಲಿ 10-20 ವಿದ್ಯಾರ್ಥಿಗಳ ದಾಖಲಾತಿ ಇದೆ ಎಂಬುದು ಶಿಕ್ಷಣ ಇಲಾಖೆಯ ಮಾಹಿತಿ.
ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚೀಮನಹಳ್ಳಿಯಲ್ಲಿ 1, ಮಾದಮಂಗಲ, ತಮ್ಮೇಪಲ್ಲಿ ಹಾಗೂ ಉರ್ದು ಎಚ್.ಪಿ.ಎಸ್ ಎಂ.ಗೊಲ್ಲಹಳ್ಳಿ, ಕೊತ್ತವುಡ್ಯ ಶಾಲೆಗಳಲ್ಲಿ 2, ಬೂರಗಮಾಕಲಹಳ್ಳಿ, ಗೊಲ್ಲಹಳ್ಳಿ, ವೆಂಕಟರಾಯನಕೋಟೆ, ಬಾರ್ಲಹಳ್ಳಿ, ಗಡಿಗವಾರಹಳ್ಳಿ ಉರ್ದು ಶಾಲೆಯಲ್ಲಿ 3 ವಿದ್ಯಾರ್ಥಿಗಳು ಈ ವರ್ಷದಲ್ಲಿ ದಾಖಲಾಗಿದ್ದಾರೆ.
ಶಾಲೆಯಲ್ಲಿದ್ದ ಒಂದೆರಡು ವಿದ್ಯಾರ್ಥಿಗಳು ಬಿಟ್ಟು ಹೋಗಿ ಬೇರೆ ಶಾಲೆಗಳಿಗೆ ಸೇರಿಕೊಳ್ಳುವುದು ಮತ್ತು ಈ ವರ್ಷ ಯಾವುದೇ ವಿದ್ಯಾರ್ಥಿಗಳು ಶಾಲೆಗೆ ಸೇರದ ಕಾರಣದಿಂದ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಕೆಲವು ಕಡೆ ಶಿಕ್ಷಕರು, ಪೋಷಕರ ಮತ್ತು ವಿದ್ಯಾರ್ಥಿಗಳ ಮನಸ್ಸು ಗೆಲ್ಲಲು ವಿಫಲರಾದ ಕಾರಣ ಇರುವ ಒಂದೆರಡು ಮಕ್ಕಳನ್ನು ಪೋಷಕರು ಶಾಲೆ ಬಿಡಿಸಿ ಬೇರೆ ಶಾಲೆಗೆ ಸೇರಿಸುತ್ತಾರೆ. ಮುಂದಿನ ವರ್ಷಗಳಲ್ಲಿ ಮಕ್ಕಳು ಬಂದರೆ ಮತ್ತೆ ಶಾಲೆಯನ್ನು ಪುನ: ಆರಂಭಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ, ವಿದ್ಯಾರ್ಥಿವೇತನ ಮತ್ತಿತರ ಹಲವಾರು ಸೌಲಭ್ಯಗಳನ್ನು ಒದಗಿಸಿದೆ. ಮೆರಿಟ್ ಆಧಾರದ ಮೇಲೆ ಪ್ರತಿಭಾವಂತ ಶಿಕ್ಷಕರನ್ನು ನೇಮಕ ಮಾಡುತ್ತಿದೆ. ಶೌಚಾಲಯ, ಕುಡಿಯುವ ನೀರು ಒದಗಿಸಲು ಶ್ರಮಿಸುತ್ತಿದೆ. ಇಷ್ಟಾದರೂ ಏಕೆ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿಲ್ಲ ಎಂಬುದರ ಚರ್ಚೆ ಎಲ್ಲೆಡೆ ನಡೆಯುತ್ತದೆ.
ಸರ್ಕಾರಿ ಶಾಲೆಗಳಲ್ಲಿ ಇಷ್ಟೆಲ್ಲ ಸೌಲಭ್ಯಗಳನ್ನು ಒದಗಿಸುತ್ತಿದ್ದರೂ ಪೋಷಕರು ತಮ್ಮ ಮಕ್ಕಳನ್ನು ಏಕೆ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಾರೆ. ಪೋಷಕರಿಗೆ ಖಾಸಗಿ ಶಾಲೆಗಳ ವ್ಯಾಮೋಹ ಎಂದು ಅಧಿಕಾರಿಗಳು ಮತ್ತು ಸರ್ಕಾರಿ ಶಾಲೆಗಳ ಶಿಕ್ಷಕರು ಸುಲಭವಾಗಿ ಹೇಳುತ್ತಾರೆ. ಸಾಮಾನ್ಯವಾಗಿ ಸರ್ಕಾರಿ ಶಾಲೆಗಳ ನೇಮಕಾತಿಯಲ್ಲಿ ವಿಫಲರಾದವರು, ಅಗತ್ಯ ವಿದ್ಯಾರ್ಹತೆ ಮತ್ತು ತರಬೇತಿ ಇಲ್ಲದ ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ಪಾಠ ಮಾಡುತ್ತಾರೆ.
ಕಳೆದ 5 ವರ್ಷಗಳ ಪರಿಸ್ಥಿತಿ ಅವಲೋಕಿಸಿದರೆ ಮುಂದಿನ 10 ವರ್ಷಗಳಲ್ಲಿ ಬಹುತೇಕ ಸರ್ಕಾರಿ ಶಾಲೆ ಮುಚ್ಚಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಮಕ್ಕಳಿಗೆ ಮತ್ತು ಪೋಷಕರಿಗೆ ಶೈಕ್ಷಣಿಕ ಪ್ರಗತಿ ಹೊರತುಪಡಿಸಿ ಬೇರೆ ಯಾವ ಸೌಲಭ್ಯವನ್ನು ನೀಡಿದರೂ ಗೌಣ ಎನಿಸುತ್ತದೆ. ಆಧುನಿಕ ತಾಂತ್ರಿಕ ಯುಗದಲ್ಲಿ ಗುಣಮಟ್ಟದ ವಿದ್ಯಾಭ್ಯಾಸ ಮುಖ್ಯವೇ ಹೊರತು ಸೌಲಭ್ಯಗಳಲ್ಲ ಎನ್ನುವುದು ಎಲ್ಲರಿಗೂ ಅರಿವಾಗಿದೆ.
‘ನಗರದ ಪ್ರಥಮ ಪ್ರೌಢಶಾಲೆ ಹಾಗೂ 100 ವರ್ಷಗಳ ಇತಿಹಾಸವುಳ್ಳ ಬಾಲಕರ ಸರ್ಕಾರಿ ಪ್ರೌಢಶಾಲೆ ಇಂದು ವಿದ್ಯಾರ್ಥಿಗಳಿಲ್ಲದೆ ಭಣಗುಡುತ್ತಿದೆ. 8 ರಿಂದ 10ನೇ ತರಗತಿವರೆಗೆ, ಪ್ರತಿ ತರಗತಿಯಲ್ಲಿ ನಾಲ್ಕು ವಿಭಾಗಗಳಿರುತ್ತಿದ್ದವು. ಪ್ರತಿ ವಿಭಾಗದಲ್ಲಿ 80-100 ವಿದ್ಯಾರ್ಥಿಗಳಿರುತ್ತಿದ್ದರು. 800ರಿಂದ ಸಾವಿರದವರೆಗೆ ಇದ್ದ ವಿದ್ಯಾರ್ಥಿಗಳ ಸಂಖ್ಯೆ ಇಂದು 120ಕ್ಕೆ ಕುಸಿದಿದೆ. ಕೇವಲ 15 ವರ್ಷಗಳ ಹಿಂದೆ ಶಾಲೆಯಲ್ಲಿ ದಾಖಲಾತಿ ಸಿಗದೆ ಸ್ವಲ್ಪ ದೂರದವರು ಎಂಎಲ್‌ಎ, ಎಂಪಿ ಗಳ ಶಿಫಾರಸು ಪತ್ರ ತಂದು ಒತ್ತಡ ಹೇರುತ್ತಿದ್ದರು. ಆದರೆ ಇಂದು ಮಕ್ಕಳ ದಾಖಲಾತಿಗಾಗಿ ಅಂಗಲಾಚಬೇಕಿದೆ’ ಎಂದು ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣಪ್ಪ ಹೇಳುತ್ತಾರೆ.
ಶಿಕ್ಷಕರ ಬದ್ಧತೆ ಮತ್ತು ಮನಸ್ಥಿತಿ ಬದಲಾಗಬೇಕು. ಸಾರ್ವಜನಿಕರಿಗೆ ಸರ್ಕಾರಿ ಶಾಲೆಗಳ ಬಗ್ಗೆ ನಂಬಿಕೆ ಬರಬೇಕು. ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತಹ ವಾತಾವರಣ ಉಂಟುಮಾಡಬೇಕು ಎನ್ನುತ್ತಾರೆ ನಿವೃತ್ತ ಮುಖ್ಯ ಶಿಕ್ಷಕ ಎಸ್.ಎನ್.ಶಾಸ್ತ್ರಿ.
ತಾಲ್ಲೂಕಿನ ಶಾಲೆಗಳ ಸ್ಥಿತಿಗತಿ ಹಾಗೂ ಮಕ್ಕಳ ದಾಖಲಾತಿ ಬಗ್ಗೆ ವರದಿ ಮಾಡಲು ಮಾಹಿತಿ ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಹಲವಾರು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.
ಸರ್ಕಾರ ಶಿಕ್ಷಣ ಇಲಾಖೆ ಹಾಗೂ ಶಾಲೆಗಳ ಸುಧಾರಣೆಗಾಗಿ ಅನೇಕ ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಪೋಷಕರ ಖಾಸಗಿ ಶಾಲಾ ವ್ಯಾಮೋಹದಿಂದ ಸರ್ಕಾರಿ ಶಾಲಾ ದಾಖಲಾತಿ ಕುಸಿಯುತ್ತಿದೆ
-ಸುರೇಶ್ ಬಿಆರ್‌ಸಿ ಸಮನ್ವಯಾಧಿಕಾರಿ ಚಿಂತಾಮಣಿ
ಶಿಕ್ಷಕರನ್ನು ನೂರೆಂಟು ಯೋಜನೆಗಳಿಗೆ ಬಳಸಿಕೊಳ್ಳದೆ ಸಂಪೂರ್ಣ ಬೋಧನೆಗೆ ಅವಕಾಶ ನೀಡಬೇಕು. ತರಗತಿಗೆ ತೆರಳಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತಾಗಬೇಕು -ನಾರಾಯಣರೆಡ್ಡಿ ಶಿಕ್ಷಣ ತಜ್ಞ
ಶಿಕ್ಷಕರು ಮನಸ್ಸು ಮಾಡಿದರೆ ಮಾತ್ರ ಸರ್ಕಾರಿ ಶಾಲೆ ಉಳಿಸಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಹೊರತುಪಡಿಸಿ ಇತರೆ ಯಾವ ಸೌಲಭ್ಯ ನೀಡಿದರೂ ಮಕ್ಕಳು
-ದಾಖಲಾಗುವುದಿಲ್ಲ ಮಂಜುನಾಥ್ ಪೋಷಕ
ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ನಿಜ. ಆದರೆ ಎಲ್ಲಕ್ಕೂ ಶಿಕ್ಷಕರನ್ನೇ ಹೊಣೆ ಮಾಡುವುದು ಸರಿಯಲ್ಲ. ಶಿಕ್ಷಕರ ಜತೆ ಸಮುದಾಯ ಮತ್ತು ಶಿಕ್ಷಣ ಇಲಾಖೆ ಕೈಜೋಡಿಸಬೇಕು
-ಆರ್.ಅಶೋಕ್ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.