ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿ

Last Updated 12 ಜೂನ್ 2020, 15:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಈ ಬಾರಿ ಲಾಕ್‌ಡೌನ್‌ ಕಾರಣಕ್ಕೆ ವಿಳಂಬವಾಗಿ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸಾಧನೆ ತೋರಬೇಕಾದರೆ ಶಿಕ್ಷಕರು ಮತ್ತು ಪೋಷಕರ ಪಾತ್ರ ಹಿರಿದಾಗಿದೆ. ಪರೀಕ್ಷೆಯ ದಿನಗಳಲ್ಲಿ ಮಕ್ಕಳಿಗೆ ಪ್ರೋತ್ಸಾಹಿಸುವ ಅಗತ್ಯವಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಅವರು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

‘ಪ್ರಸ್ತುತ ಕೊರೊನಾ ವೈರಸ್‌ ಸೋಂಕಿನ ಭೀತಿ ಇರುವುದರಿಂದ ಪ್ರತಿಯೊಬ್ಬರೂ ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಪರೀಕ್ಷಾ ಕೇಂದ್ರಗಳ ಸುರಕ್ಷತೆ ಬಗ್ಗೆ ಇರುವ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಆದ್ಯತೆಯ ಮೆರೆಗೆ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ಪರೀಕ್ಷಾ ಕೇಂದ್ರಗಳಲ್ಲಿ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ವಿಡಿಯೊ ಚಿತ್ರೀಕರಣ ಮಾಡಿ ವ್ಯಾಟ್ಸಪ್‌ ಗ್ರೂಪ್‌ಗಳ ಮೂಲಕ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಡ್ಡಾಯವಾಗಿ ಮಾಡಬೇಕು’ ಎಂದು ಸೂಚಿಸಿದರು.

‘ಮಕ್ಕಳಿಗೆ ಮೂರು ಗಂಟೆಗಳ ಕಾಲ ಮುಖಗವಸುಗಳನ್ನು ಧರಿಸಿ ಪರೀಕ್ಷೆ ಬರೆಯುವುದು ಅಭ್ಯಾಸ ಮಾಡುವಂತೆ ಸೂಚಿಸಬೇಕು. ಈ ಬಗ್ಗೆ ವಿಷಯವಾರು ಶಿಕ್ಷಕರು ವ್ಯಾಟ್ಸಪ್‌ ಮೂಲಕ ನಿಗಾ ವಹಿಸಬೇಕು. ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರ ಪಡೆಯಲು ಬರುವ ವೇಳೆ ಮತ್ತು ಪರೀಕ್ಷಾ ಸಂದರ್ಭದಲ್ಲಿ ಎಲ್ಲಾ ಶಾಲೆಗಳನ್ನು ಕಡ್ಡಾಯವಾಗಿ ವೈರಸ್‌ ನಾಶಕ ಸಿಂಪಡಿಸಿ ಶುಚಿಯಾಗಿಟ್ಟುಕೊಳ್ಳಬೇಕು’ ಎಂದರು.

‘ಇಲಾಖೆಯಿಂದ ಪರೀಕ್ಷೆಗೆ ಶುಭಾಶಯ ಕೋರುವ ಮತ್ತು ಪೂರ್ವಸಿದ್ಧತೆಯ ಬಗೆಗಿನ ಕ್ರಮಗಳ ಕುರಿತ ಪತ್ರಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ತಪ್ಪದೆ ತಲುಪಿಸುವ ಕೆಲಸವಾಗಬೇಕು. ಪರೀಕ್ಷಾ ವೇಳೆಯಲ್ಲಿ ಶಾಲೆಗಳಲ್ಲಿ ಯಾವುದೇ ರೀತಿಯ ಕಾಮಗಾರಿ ನಡೆಯದಂತೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ ಉಪವಿಭಾಗೀಯ ಅಧಿಕಾರಿ ಬಸವರಾಜು ಮಾತನಾಡಿ, ‘ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 90 ಕೆೆಎಸ್‌ಆರ್‌ಟಿಸಿ ಮತ್ತು 110 ಖಾಸಗಿ ಬಸ್‌ ಸೇರಿದಂತೆ ಒಟ್ಟು 200 ಬಸ್‌ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಜಿ.ನಾಗೇಶ್, ನೋಡಲ್‌ ಅಧಿಕಾರಿ ಶಿವಲಿಂಗಯ್ಯ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT