ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು ವಿಧಾನ ಪರಿಷತ್‌: ಬಿಜೆಪಿ–ಕಾಂಗ್ರೆಸ್‌ ಮಧ್ಯೆ ತೀವ್ರ ಹಣಾಹಣಿ

ಚಿಕ್ಕಮಗಳೂರು: ವಿಧಾನ ಪರಿಷತ್‌ ಚುನಾವಣೆ
Last Updated 4 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಫಿನಾಡಿನ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಬಿಜೆಪಿಯ ಎಂ.ಕೆ. ಪ್ರಾಣೇಶ್‌ ಅವರಿಗೆ ಸ್ಥಾನ ಉಳಿಸಿಕೊಳ್ಳುವ ಅನಿವಾರ್ಯತೆ ಇದ್ದರೆ, ಕಾಂಗ್ರೆಸ್‌ನ ಎ.ವಿ. ಗಾಯತ್ರಿ ಶಾಂತೇಗೌಡ ಅವರು ಕೈಬಿಟ್ಟಿದ್ದ ಕ್ಷೇತ್ರವನ್ನು ಮರಳಿ ಪಡೆಯಲು ಕಸರತ್ತು ನಡೆಸಿದ್ದಾರೆ.

ಆಮ್‌ ಆದ್ಮಿ ಪಕ್ಷದಿಂದ ಡಾ.ಕೆ. ಸುಂದರಗೌಡ, ಪಕ್ಷೇತರವಾಗಿ ಬಿ.ಟಿ. ಚಂದ್ರಶೇಖರ ಹಾಗೂ ಜಿ.ಐ. ರೇಣುಕುಮಾರ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ತೀವ್ರ ಹಣಾಹಣಿಯಿದ್ದು ಶಕ್ತಿ ಪ್ರದರ್ಶನದ ಕಾವು ಏರಿದೆ.

ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಆ ಪಕ್ಷದ ಲೆಕ್ಕಾಚಾರ. ಜೆಡಿಎಸ್‌ ಕಣದಿಂದ ದೂರ ಉಳಿದಿರುವುದು ತನಗೆ ಅನುಕೂಲವಾಗಲಿದೆ ಎಂಬುದು ಕಾಂಗ್ರೆಸ್‌ ವಿಶ್ಲೇಷಣೆ.

ವಿಧಾನ ಪರಿಷತ್‌ ಸದಸ್ಯರಾಗಿದ್ದ ಎಂ.ಕೆ. ಪ್ರಾಣೇಶ್‌ ಅವರಿಗೆ ಉಪ ಸಭಾಪತಿ ಸ್ಥಾನ ಒಲಿದಿತ್ತು. ಚುನಾವಣೆಯಲ್ಲಿ ಈಗ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಾಯಕರೊಂದಿಗೆ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದಾರೆ. ಮತದಾರರ ನಾಡಿಮಿಡಿತ ಹಿಡಿಯುವ ಸಾಹಸದಲ್ಲಿ ತೊಡಗಿದ್ದಾರೆ.

ಕಡೂರು ಭಾಗದಲ್ಲಿ ಜೆಡಿಎಸ್‌, ಕಾಂಗ್ರೆಸ್‌ಅನ್ನು ಬೆಂಬಲಿಸಲಿದೆ ಎಂದು ವೈ.ಎಸ್‌.ವಿ. ದತ್ತ ಹೇಳಿದ್ದಾರೆ. ಜೆಡಿಎಸ್‌ನ ಇತರ ಮುಖಂಡರಾದ ಎಸ್‌.ಎಲ್‌.ಭೋಜೇಗೌಡ, ಸುಧಾಕರ ಎಸ್‌. ಶೆಟ್ಟಿ ಅವರು ಬೆಂಬಲ ಯಾರಿಗೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಕಾಂಗ್ರೆಸ್‌ ಬೆಂಬಲಿಸುವುದಾಗಿ ಸಿಪಿಐ ಹೇಳಿದೆ.

ಗಾಯತ್ರಿ ಅವರು ವಿಧಾನ ಪರಿಷತ್‌ ಚುನಾವಣೆಯಲ್ಲಿ ಒಮ್ಮೆ ಗೆದ್ದು, ಒಮ್ಮೆ ಸೋತಿದ್ದಾರೆ. ಸಿದ್ದರಾಮಯ್ಯ ಮತ್ತು ಪಕ್ಷದ ನಾಯಕರ ಒತ್ತಾಸೆಯಂತೆ ಕಣಕ್ಕೆ ಇಳಿದಿದ್ದಾರೆ. ಪಕ್ಷದ ಮುಖಂಡರು ಕ್ಷೇತ್ರಗಳನ್ನು ಹಂಚಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ.

ಮಲೆನಾಡು, ಬಯಲುಸೀಮೆ ಪ್ರದೇಶಗಳ ವೈಶಿಷ್ಟ್ಯದ ಕ್ಷೇತ್ರ ಇದು. ಕಾಂಗ್ರೆಸ್‌ ಮತ್ತು ಬಿಜೆಪಿ ಎರಡಕ್ಕೂ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಒಳಏಟಿನ ಭೀತಿಯೂ ಇದೆ. ಗೆಲುವಿನ ಹಾದಿ ಸುಗಮ ಇಲ್ಲ.

* ಗ್ರಾಮ ಪಂಚಾಯಿತಿಗಳಿಗೆ ಜನರೇಟರ್‌ ಒದಗಿಸಿದ್ದೇನೆ. ಬಿಜೆಪಿ ಸರ್ಕಾರದ ಯೋಜನೆಗಳು ಶ್ರೀರಕ್ಷೆಯಾಗಿವೆ. ಮತದಾರರು ಕೆಲಸ ಗುರುತಿಸಿ ಬೆಂಬಲಿಸುತ್ತಾರೆ ಎಂಬ ಭರವಸೆ ಇದೆ.

-ಎಂ.ಕೆ. ಪ್ರಾಣೇಶ್‌, ಬಿಜೆಪಿ ಅಭ್ಯರ್ಥಿ

* ಪಕ್ಷದ ನಾಯಕರು ಬೆನ್ನಿಗೆ ನಿಂತಿದ್ದಾರೆ. ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ. ಕಾಂಗ್ರೆಸ್‌ ಸಾಧನೆಗಳು, ವಿಧಾನ ಪರಿಷತ್‌ ಸದಸ್ಯೆಯಾಗಿದ್ದಾಗ ಮಾಡಿದ್ದ ಕೆಲಸಗಳು ಕೈಹಿಡಿಯಲಿವೆ.

-ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT