ಶುಕ್ರವಾರ, ಫೆಬ್ರವರಿ 26, 2021
20 °C
ಕೆಳಗಿನತೋಟದ ವಿನಾಯಕ ಬಡಾವಣೆ ಮಧ್ಯ ಕಾಲುವೆ ತೋಡಲು ಮುಂದಾದ ಅಧಿಕಾರಿಗಳು, ಭಯದಲ್ಲಿ ನಾಗರಿಕರು

ಚಿಕ್ಕಬಳ್ಳಾಪುರ: ಕಳವಳ ಹುಟ್ಟಿಸಿದ ಕಾಲುವೆ ಗುರುತು

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಹೆಬ್ಬಾಳ ನಾಗವಾರ ಕೆರೆಗಳ ಸಂಸ್ಕರಿಸಿದ ತ್ಯಾಜ್ಯ ನೀರಿನಿಂದ ಜಿಲ್ಲೆಯ ಕೆರೆಗಳ ತುಂಬುವ ಯೋಜನೆ ಅಡಿ ನಗರದಲ್ಲಿ ಕೈಗೆತ್ತಿಕೊಂಡಿರುವ ಕೆರೆ ಸಂಪರ್ಕ ಕಾಲುವೆಗಳ ಸಜ್ಜುಗೊಳಿಸುವ ಕಾಮಗಾರಿ ಕೆಳಗಿನತೋಟ ಪ್ರದೇಶದ ಬಡಾವಣೆಯೊಂದರ ನಿವಾಸಿಗಳಲ್ಲಿ ಆತಂಕ ತಂದಿಟ್ಟಿದೆ.

ಕೆಳಗಿನತೋಟ ಪ್ರದೇಶಕ್ಕೆ ಹೊಂದಿಕೊಂಡಂತೆ ಕೆಲ ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ವಿನಾಯಕ ಬಡಾವಣೆಯ ನಡುವೆಯೇ ಕಂದಾಯ ಇಲಾಖೆ ಅಧಿಕಾರಿಗಳು ಇಲ್ಲದೇ ಇರುವ ಕಾಲುವೆ ತೋಡಲು ಮುಂದಾಗಿರುವ ಆರೋಪ ಕೇಳಿಬಂದಿದ್ದು, ಇದರಿಂದ ಸಾಲಮಾಡಿ ಮನೆ ಕಟ್ಟಿದವರು, ಕಷ್ಟಪಟ್ಟು ನಿವೇಶನ ಖರೀದಿಸಿದವರು ಚಿಂತೆಗೀಡಾಗಿದ್ದಾರೆ.

ಏನಿದು ಪ್ರಕರಣ?

ಇಲ್ಲಿನ ಸರ್ವೇ ನಂಬರ್ 227 ರಲ್ಲಿ ಸುಮಾರು ನಾಲ್ಕು ಎಕರೆ ಜಾಗದಲ್ಲಿ ಬೆಂಗಳೂರು ಮೂಲದ ರಿಯಲ್‌ ಎಸ್ಟೆಟ್‌ ಉದ್ಯಮಿಯೊಬ್ಬ ಆರೇಳು ವರ್ಷಗಳ ಹಿಂದೆ ವಿನಾಯಕ ಬಡಾವಣೆ ನಿರ್ಮಿಸಿ ಎಲ್ಲ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ.

ಬಡಾವಣೆಯಲ್ಲಿ ಈಗಾಗಲೇ ಸಾಕಷ್ಟು ಮನೆಗಳು ಕೂಡ ನಿರ್ಮಾಣವಾಗಿವೆ. ಇದೀಗ ಎಚ್‌.ಎನ್ ವ್ಯಾಲಿ ಯೋಜನೆ ಅಡಿ ನೀರು ತುಂಬುತ್ತಿರುವ ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣ ಕೆರೆಗೆ ಸಂಪರ್ಕಿಸುವ ಕಾಲುವೆಯನ್ನು ಸುಸಜ್ಜಿತಗೊಳಿಸುವ ಕಾಮಗಾರಿ ಬಡಾವಣೆಯ ನಾಗರಿಕರಲ್ಲಿ ಆತಂಕ ಉಂಟು ಮಾಡಿದೆ.

ನಗರಾಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆದಿರುವ ’ಮಾಸ್ಟರ್‌ ಫ್ಲ್ಯಾನ್‌‘ನಲ್ಲಿ ವಿನಾಯಕ ಬಡಾವಣೆಯ ಎರಡು ಅಂಚಿನಲ್ಲಿ ಕಾಲುವೆಗಳು ಇರುವುದು ಸಷ್ಟವಾಗಿ ಗೋಚರಿಸುತ್ತದೆ.

ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಕೆರೆಯ ಸಂಪರ್ಕ ಕಾಲುವೆ ಅತಿಕ್ರಮಿಸಿ ಬಡಾವಣೆ ನಿರ್ಮಿಸಲಾಗಿದೆ ಎಂದು ಬಡಾವಣೆ ನಡುವೆಯೇ ಕಾಲುವೆ ತೋಡಲು ಗುರುತು ಮಾಡಿ ಹೋಗಿರುವುದು ಸ್ಥಳೀಯ ನಿವಾಸಿಗಳಿಗೆ ಬರಸಿಡಿಲು ಬಡಿದಂತಾಗಿದೆ.

ಪ್ರಸ್ತುತ ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಿಟಾಚಿ ಯಂತ್ರದಿಂದ ಕಾಲುವೆ ತೋಡುತ್ತ ಬಡಾವಣೆ ಸಮೀಪಿಸುತ್ತಿರುವುದು ಸ್ಥಳೀಯರ ಎದೆ ಬಡಿತ ಹೆಚ್ಚಿದೆ.

’ಲಕ್ಷಗಟ್ಟಲೇ ಸಾಲ ಮಾಡಿ ನಿವೇಶನ ತೆಗೆದು, ಮನೆ ಕಟ್ಟಿಕೊಂಡವರು ಕಾಲುವೆಗೆ ಮಾಡಿರುವ ಗುರುತು ಕಂಡು ಭಯಗೊಂಡಿದ್ದಾರೆ. ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಬಂದು ಜಂಟಿ ಸಮೀಕ್ಷೆ ನಡೆಸಿ ಸ್ಥಳೀಯರಿಗೆ ನ್ಯಾಯ ಕೊಡಿಸಬೇಕು‘ ಎಂದು ಸ್ಥಳೀಯ ನಿವಾಸಿ ಶಿವಾನಂದ್‌ ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು