ಶುಕ್ರವಾರ, ಡಿಸೆಂಬರ್ 4, 2020
21 °C

ವಿದ್ಯುತ್ ದರ ಏರಿಕೆಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ‘ಕೋವಿಡ್-19 ಸಂಕಷ್ಟದಿಂದ ಜನರು ತತ್ತರಿಸಿದ್ದಾರೆ. ಅವರ ಸಹಾಯಕ್ಕೆ ಬರಬೇಕಾದ ಸರ್ಕಾರ ವಿದ್ಯುತ್ ದರ ಏರಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕೋನಪ್ಪಲ್ಲಿ ಕೋದಂಡ ಖಂಡಿಸಿದ್ದಾರೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೆಲಸ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಬಹುತೇಕ ಕಂಪನಿಗಳು ಉದ್ಯೋಗಿಗಳಿಗೆ ವೇತನ ಕಡಿತ ಮಾಡಿವೆ. ರೈತರು ಸಹ ಕೊರೊನಾ ಪರಿಣಾಮ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯದೆ ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ವಿದ್ಯುತ್ ಕಂಪನಿಗಳು ದರ ಏರಿಕೆ ಮಾಡಿರುವುದು ಸರಿಯಲ್ಲ ಎಂದು ದೂರಿದ್ದಾರೆ.

ರೈತರು ಸೇರಿದಂತೆ ವಿದ್ಯುತ್ ಬಳಕೆಯ ಎಲ್ಲ ವರ್ಗದ ಜನರಿಗೆ ಯೂನಿಟ್‌ಗೆ 40 ಪೈಸೆ ಹೆಚ್ಚಿಗೆ ಮಾಡಿರುವುದು ಹೊರೆಯಾಗಿದೆ. ಬಡವರ ಸಹಾಯಕ್ಕಾಗಿ ನಿಲ್ಲಬೇಕಿದ್ದ ಸರ್ಕಾರ ಮತ್ತಷ್ಟು ತೊಂದರೆ ನೀಡುತ್ತಿದೆ. ಕೂಡಲೇ ವಿದ್ಯುತ್ ದರ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು ಆಗ್ರಹಿಸಿದ್ದಾರೆ.

ದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಗ್ರಾಹಕರನ್ನು ಕಿತ್ತು ತಿನ್ನುತ್ತಿವೆ. ದೊಡ್ಡ ಉದ್ಯಮಿಗಳ ಸಾಲ ಮನ್ನಾ, ವಸೂಲಿಯಾಗದ ಸಾಲ ಎಂದು ಕೋಟ್ಯಂತರ ರೂಪಾಯಿಯನ್ನು ಮನ್ನಾ ಮಾಡಲಾಗಿದೆ. ಸಾಮಾನ್ಯ ಗ್ರಾಹಕರಿಗೆ ಪಕ್ಕಾ ಬಂಡವಾಳಶಾಹಿಗಳಂತೆ ಪ್ರತಿಯೊಂದು ಸೇವೆಗೂ ಶುಲ್ಕ ನಿಗದಿ ಮಾಡುತ್ತಿವೆ ಎಂದು ಟೀಕಿಸಿದ್ದಾರೆ.

ಬ್ಯಾಂಕ್ ಖಾತೆಯಿಂದ ಹಣ ಹಿಂತೆಗೆದುಕೊಳ್ಳಲು, ಖಾತೆಗೆ ಹಣ ಜಮಾ ಮಾಡಲು, ಚೆಕ್ ಪುಸ್ತಕ ಪಡೆಯಲು ಸೇರಿದಂತೆ ಎಲ್ಲ ಸೇವೆಗಳಿಗೂ ಮನಬಂದಂತೆ ಶುಲ್ಕ ವಿಧಿಸುತ್ತಿವೆ. ಬ್ಯಾಂಕ್‌ಗಳ ಮೇಲೆ ಯಾರ ಹಿಡಿತವೂ ಇಲ್ಲದಂತಾಗಿದೆ. ಒಂದೊಂದು ಬ್ಯಾಂಕ್ ಒಂದೊಂದು ರೀತಿಯಲ್ಲಿ ಸೇವಾ ಶುಲ್ಕವನ್ನು ವಸೂಲಿ ಮಾಡುತ್ತಿದೆ. ಗ್ರಾಹಕರ ಗಮನಕ್ಕೆ ಬಾರದೆ ಖಾತೆಗಳಿಂದ ಹಣವನ್ನು ಮುರಿದುಕೊಳ್ಳುತ್ತವೆ ಎಂದು ಆರೋಪಿಸಿದ್ದಾರೆ.

ಬ್ಯಾಂಕ್‌ಗಳ ರಾಷ್ಟ್ರೀಕರಣದ ಉದ್ದೇಶವೇ ವಿಫಲವಾಗುತ್ತಿದೆ. ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿರುವುದಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು. ಸರ್ಕಾರ ಕ್ರಮಕೈಗೊಳ್ಳದಿದ್ದರೆ ಕಾಂಗ್ರೆಸ್‌ನಿಂದ ಹೋರಾಟ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.