ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಿರಂಗ ಕ್ಷಮೆಯಾಚನೆಗೆ ಕಾಂಗ್ರೆಸ್ ಆಗ್ರಹ

Last Updated 6 ಡಿಸೆಂಬರ್ 2020, 8:19 IST
ಅಕ್ಷರ ಗಾತ್ರ

ಗುಡಿಬಂಡೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಬೆಂಗಳೂರಿನ ಬಿಜೆಪಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಾಲ್ಲೂಕು ಕಾಂಗ್ರೆಸ್ ಘಟಕ ಎಚ್ಚರಿಸಿದೆ.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪಕ್ಷದ ಮುಖಂಡ ಕೃಷ್ಣೇಗೌಡ, ‘ಬಾಗೇಪಲ್ಲಿಯಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಗ್ರಾಮ ಸ್ವರಾಜ್‌ ಸಮಾವೇಶದಲ್ಲಿ ಶಾಸಕರ ವಿರುದ್ಧ ನಳಿನ್ ಕುಮಾರ್ ಕಟೀಲ್ ಸತ್ಯಕ್ಕೆ ದೂರವಾದ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಕೂಡಲೇ ಶಾಸಕರ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

‘ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡುವ ಬದಲು ಯಾರು ಮಾಡಿದ್ದಾರೆ, ಯಾವ ಇಲಾಖೆಯಲ್ಲಿ ನಡೆದಿದೆ, ಎಷ್ಟು ಮೊತ್ತದ ಅವ್ಯವಹಾರವಾಗಿದೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ. ಇಲ್ಲವಾದರೆ ಎಸಿಬಿ ಅಥವಾ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿ’ ಎಂದು ಸವಾಲು ಹಾಕಿದರು.

ರಾಜ್ಯದ ಜನತೆಗೆ ಯಾವ ಪಕ್ಷದ ಜನಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದಾರೆ ಎಂಬುದು ಗೊತ್ತಿದೆ. ಕೊರೊನಾ ಹೆಸರಿನಲ್ಲಿ ಎಷ್ಟು ಲೂಟಿ ಮಾಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಬಾಗೇಪಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸುಬ್ಬಾರೆಡ್ಡಿ ವಿರುದ್ಧ ಸುಳ್ಳು ಆರೋಪ ಮಾಡಿದರೆ ಕ್ಷೇತ್ರದ ಜನರು ಕೈಕಟ್ಟಿಕೂರುವುದಿಲ್ಲ. ಇದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಆದಿನಾರಾಯಣಪ್ಪ ಮಾತನಾಡಿ, ಕೋವಿಡ್-19 ಸಮಯದಲ್ಲಿ ಶಾಸಕರು ಸುಮಾರು ಎರಡು ತಿಂಗಳ ಕಾಲ ಬಾಗೇಪಲ್ಲಿ ಕ್ಷೇತ್ರದ ಬಡಜನತೆಗೆ ಉಚಿತವಾಗಿ ಊಟ ನೀಡಿದ್ದಾರೆ. ಬಡವರಿಗೆ ಸಾಮೂಹಿಕ ವಿವಾಹ ಏರ್ಪಡಿಸಿದ್ದಾರೆ. ನೂತನ ದಂಪತಿಗೆ ಉಚಿತ ಹಸು ಹಾಗೂ ₹ 50 ಸಾವಿರ ನೀಡಿದ್ದಾರೆ. ಜನಪರ ಕೆಲಸ ಮಾಡುತ್ತಿರುವ ಶಾಸಕರ ವಿರುದ್ಧ ಮಾತನಾಡುವ ನೈತಿಕತೆ ನಳಿನ್ ಕುಮಾರ್ ಕಟೀಲ್ ಅವರಿಗೆ ಇಲ್ಲ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಬೈರಾರೆಡ್ಡಿ, ಕೋಚಿಮುಲ್ ನಿರ್ದೇಶಕ ಕೆ. ಅಶ್ವತ್ಥರೆಡ್ಡಿ, ಕಡೇಹಳ್ಳಿ ಬಾಲಕೃಷ್ಣಾರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ವೆಂಕಟಲಕ್ಷಮ್ಮ, ಪ.ಪಂ. ಮಾಜಿ ಅಧ್ಯಕ್ಷ ರಿಯಾಜ್ ಪಾಷಾ, ಮುಖಂಡರಾದ ಚಲಪತಿ, ವೆಂಕಟರಮಣಪ್ಪ, ಅಂಬರೀಶ್, ಮಂಜುನಾಥರೆಡ್ಡಿ, ಚಿಕ್ಕನಾರಾಯಣಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT