ಮಂಗಳವಾರ, ಮಾರ್ಚ್ 21, 2023
20 °C

ಸಚಿವರ ವಿರುದ್ಧ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ವಿ.ಎಸ್.ಉಗ್ರಪ್ಪ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ರಾಜ್ಯದ ಕಾಂಗ್ರೆಸ್ ನಾಯಕರ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದನ್ನು ಮರೆಯದಿರಿ ಸುಧಾಕರ್ ಎಂದು ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ವಿ.ಎಸ್.ಉಗ್ರಪ್ಪ
ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಯಿ ಸದುದ್ದೇಶದಿಂದ ಮಕ್ಕಳ ಲಾಲನೆ, ಪಾಲನೆ ‌ಮಾಡುತ್ತಾಳೆ. ತಾಯಿಗೆ ದ್ರೋಹ ಮಾಡಿದಾಗ ಆಕೆಗೆ ನೋವು ಆಗುತ್ತದೆ. ಏನೂ ಇಲ್ಲದ ವ್ಯಕ್ತಿಗೆ ರಾಜಕೀಯವಾಗಿ ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್. ಪಕ್ಷವನ್ನು ಬಿಟ್ಟು ಹೋಗಿದ್ದೀರಿ. ಆದರೆ ಪಕ್ಷದ ಬಗ್ಗೆ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಪ್ರವೃತ್ತಿಯನ್ನು ಬಿಡಬೇಕು’ ಎಂದು ಹೇಳಿದರು.

‘ನೀವು ರಾಜಕೀಯವಾಗಿ ಸೊನ್ನೆ.
ನಿಮ್ಮನ್ನು ‍ಪೋಷಿಸಿದ್ದು ಕಾಂಗ್ರೆಸ್. ಇಂತಹ ಮನೆಗೆ ದ್ರೋಹ ಮಾಡಿದ್ದೀರಿ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದು, ಉಂಡ ಮನೆಗೆ ಎರಡು ಬಗೆಯುವ ಪ್ರವೃತ್ತಿ ಬಿಡಿ. ದೇಶಕ್ಕೆ ತ್ಯಾಗ ಮಾಡಿದ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡುತ್ತೀರಲ್ಲ, ನಾಚಿಕೆ ಆಗುವುದಿಲ್ಲವೇ’ ಎಂದರು.

‘ಅಧಿಕಾರ ಸಿಕ್ಕಿದೆ. ಒಳ್ಳೆಯ ಕೆಲಸ ಮಾಡಿ. ಅದು ಬಿಟ್ಟು ಉದ್ದಟತನದ ಮಾತುಗಳು ಬೇಡ’ ಎಂದು ವಾಗ್ದಾಳಿ ನಡೆಸಿದರು.

‘ಈ ಕ್ಷೇತ್ರದ ಪ್ರತಿಯೊಬ್ಬ ಮತದಾರರು ಸುಧಾಕರ್ ಎದುರಾಳಿ. ಇಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಅಭಿವೃದ್ಧಿ ಶೂನ್ಯವಾಗಿದೆ. ಅಮಾಯಕರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಕೈಗಾರಿಕೆಗಳನ್ನು ತಂದು ಜನರಿಗೆ ಉದ್ಯೋಗ ನೀಡಿದ್ದೀರಾ? ರೈತರಿಗೆ ನೀರಾವರಿ ಯೋಜನೆ ಮಾಡಿದ್ದೀರಾ? ನಾವು ಮಾಡಿರುವುದನ್ನು ಉದ್ಘಾಟನೆ ಮಾಡುವುದಲ್ಲ’ ಎಂದು ಟೀಕಿಸಿದರು.

‘ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂ ಎನ್ನುವಂತೆ ಚಿಕ್ಕಬಳ್ಳಾಪುರ ಉತ್ಸವ ಮಾಡಿದ್ದಾರೆ. ಈ ಭಾಗಕ್ಕೆ ಎತ್ತಿನಹೊಳೆ ನೀರು ತಂದಿದ್ದರೆ ಶಬ್ಬಾಸ್ ಎನ್ನುತ್ತಿದ್ದೆವು. ಉತ್ಸವ ಮಾಡುವುದಕ್ಕೆ ಸಾರ್ಥವಾಗುತ್ತಿತ್ತು. ಉತ್ಸವ ಮಾಡಿದಾಕ್ಷಣ ಬದುಕು ಉತ್ತಮ ಆಗುವುದಿಲ್ಲ. ಜನರ ಬದುಕಿಗೆ ಏನು ಮಾಡಿದ್ದಿಯಪ್ಪ? ಸಾವಿರಾರು ಕೋಟಿ ಅನುದಾನ ತಂಡು ನಿರುದ್ಯೋಗ, ಬಡತವನ್ನು ಕಡಿಮೆ ಮಾಡಿದ್ದರೆ ಶಬ್ಬಾಸ್ ಎನ್ನಬಹುದಿತ್ತು’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್ ಪರ ಮತ್ತು ಬಿಜೆಪಿ ವಿರುದ್ಧದ ಗಾಳಿ ಬೀಸುತ್ತಿದೆ. ಪ್ರವಾಹದ ಸಂದರ್ಭದಲ್ಲಿ ರಾಜ್ಯಕ್ಕೆ ಬರದ ಪ್ರಧಾನಿ ಈಗ ಚುನಾವಣಾ ಸಮಯವಾದ ಕಾರಣ ಪದೇ ಪದೇ ಭೇಟಿ ನೀಡುತ್ತಿದ್ದಾರೆ. ಬಿಜೆಪಿಯದ್ದು ಅವಕಾಶವಾದಿ ರಾಜಕಾರಣ’ ಎಂದು
ಹೇಳಿದರು.   

‘ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಆಸ್ತಿ ಎಷ್ಟು ಹೆಚ್ಚಳವಾಗಿದೆ ಎನ್ನುವ ಬಗ್ಗೆ ನ್ಯಾಯಾಂಗದಿಂದಲೇ ತನಿಖೆ ಮಾಡಿಸಲಿ. ನಮ್ಮ ನಾಯಕರ ಆಸ್ತಿ ಹೆಚ್ಚಿದ್ದರೆ ಮುಟ್ಟುಗೋಲು ಹಾಕಿಕೊಳ್ಳಲಿ. ಬಿಜೆಪಿ ಭ್ರಷ್ಟಾಚಾರದ ಗಂಗೋತ್ರಿ’ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಮುಖಂಡರಾದ ಯಲುವಳ್ಳಿ ರಮೇಶ್, ಲಾಯರ್ ನಾರಾಯಣ ಸ್ವಾಮಿ, ನಾರಾಯಣ ಸ್ವಾಮಿ, ರಾಮಕೃಷ್ಣಪ್ಪ, ಗಂಗರೇಕಾಲುವೆ ನಾರಾಯಣಸ್ವಾಮಿ ಗೋಷ್ಠಿಯಲ್ಲಿ ಇದ್ದರು.

‘ಚಿಕ್ಕಬಳ್ಳಾಪುರ ಅಭ್ಯರ್ಥಿ; ಗೊಂದಲವಿಲ್ಲ’

ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನಾವು ಮತ ಕೇಳುವುದು ವ್ಯಕ್ತಿಗಲ್ಲ, ಪಕ್ಷಕ್ಕೆ. ಪಕ್ಷದ ಸಿದ್ದಾಂತ, ನಾಯಕತ್ವಕ್ಕೆ ಬದ್ದವಾಗಿರುವವರೇ ಅಭ್ಯರ್ಥಿ ಆಗುತ್ತಾರೆ ಎಂದು ವಿ.ಎಸ್.ಉಗ್ರಪ್ಪ ತಿಳಿಸಿದರು. 

ಪಕ್ಷ ಪ್ರಕಟಿಸುವವರೆಗೂ ಯಾರೂ ಅಭ್ಯರ್ಥಿ ಆಗುವುದಿಲ್ಲ. ನಿಷ್ಠಾವಂತ ಕಾರ್ಯಕರ್ತರನ್ನು ಕಣಕ್ಕೆ ಇಳಿಸುತ್ತೇವೆ. ಮತದಾರರು ಮನಸ್ಸು ಮಾಡಿದರೆ  ಎಷ್ಟೇ ಸಂಪನ್ಮೂಲ ಇದ್ದವರನ್ನೂ ಸೋಲಿಸಬಹುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು