ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾಕರ್ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳು ಶೀಘ್ರವೇ ಬಿಡುಗಡೆ: ಕಾಂಗ್ರೆಸ್

Last Updated 16 ಏಪ್ರಿಲ್ 2022, 12:55 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಬೇನಾಮಿ ಹೆಸರಿನಲ್ಲಿ ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು 15 ದಿನಗಳಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ನಗರದಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ತಿಳಿಸಿದರು.

‘ಆರೋಗ್ಯ ಇಲಾಖೆಯ ಎಂಜಿನಿಯರಿಂಗ್‌ ವಿಭಾಗದಲ್ಲಿ ಸಚಿವ ಡಾ.ಕೆ. ಸುಧಾಕರ್ ₹ 2 ಸಾವಿರ ಕೋಟಿ ವೆಚ್ಚದ ‌ಕಾಮಗಾರಿ ನಡೆಸಿದ್ದಾರೆ. ಅದರಲ್ಲಿ ಶೇ 60ರಷ್ಟು ಕಾಮಗಾರಿಗಳನ್ನು ತಮ್ಮದೇ ಬೇನಾಮಿ ಸಂಸ್ಥೆಗಳಿಗೆ ನೀಡಿದ್ದಾರೆ. ಅಲ್ಲಿಂದ ಅವರ ಸಂಸ್ಥೆಗಳಿಗೆ ಚೆಕ್ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪೂರ್ಣ ದಾಖಲೆಗಳನ್ನು ಶೀಘ್ರದಲ್ಲಿಯೇ ಬಿಡುಗಡೆಗೊಳಿಸುತ್ತೇವೆ’ ಎಂದು ಕಾಂಗ್ರೆಸ್ ಮುಖಂಡ ನಂದಿ ಆಂಜಿನಪ್ಪ ತಿಳಿಸಿದರು.

‘ಪತ್ನಿ, ಸಂಬಂಧಿಕರ ಹೆಸರಿನಲ್ಲಿ ಚೆಕ್ ಪಡೆದಿದ್ದಾರೆ. ಬೇನಾಮಿ ಸಂಸ್ಥೆಗಳ ಮೂಲಕ ಕಾಮಗಾರಿ ನಿರ್ವಹಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಮುಖಂಡ, ‘ಲಾಯರ್’ ನಾರಾಯಣ ಸ್ವಾಮಿ ಮಾತನಾಡಿ, ‘ಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಸುಧಾಕರ್ ತಿಳಿಸಿದ್ದಾರೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಸಲಕರಣೆಗಳ ಖರೀದಿ ವಿಚಾರವಾಗಿ ನಡೆದ ಅಕ್ರಮಗಳ ಬಗ್ಗೆ ಸದನದಲ್ಲಿಯೇ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರಸ್ತಾಪಿಸಿದ್ದರು. ಧಮ್ ಇದ್ದರೆ ಆಗಲೇ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಾಗಿತ್ತು’ ಎಂದು ಸವಾಲು ಹಾಕಿದರು.

‘ಪ್ರೀತಿ ನಿರ್ಮಾಣ ಸಂಸ್ಥೆ, ಸಾಸಾ ಸ್ಟೋನ್ಸ್ ಹೀಗೆ ಹಲವು ಬೇನಾಮಿ ಸಂಸ್ಥೆಗಳ ಮೂಲಕ ಕಾಮಗಾರಿ ನಡೆಸುತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ಸಾವಿರಾರು ಕೋಟಿ ಹಣ ಮಾಡಿದ ರಾಜಕಾರಣಿ ಇದ್ದರೆ ಅದು ಡಾ.ಕೆ.ಸುಧಾಕರ್ ಮಾತ್ರ. ಕೋವಿಡ್ ನಾಲ್ಕನೇ ಅಲೆಯೂ ಬರಲಿ ಎಂದು ಕಾಯುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಆರೋಗ್ಯ ಸಚಿವರು ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನಲ್ಲಿ ಎಷ್ಟು ಆಸ್ತಿಗಳನ್ನು ಮಾಡಿದ್ದಾರೆ ಎನ್ನುವ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗೂಂಡಾಗಿರಿ ಹೆಚ್ಚಿದೆ. ಸುಧಾಕರ್ ವಿರುದ್ಧ ಮಾತನಾಡಿದರೆ ಪ್ರಕರಣ ದಾಖಲಿಸಲಾಗುತ್ತಿದೆ. ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಗುತ್ತಿದೆ. ಇತ್ತೀಚೆಗೆ ದಲಿತ ಸಮುದಾಯದ ಮೂವರು ಮಾಜಿ ಶಾಸಕರ ಮೇಲೆಯೇ ಪ್ರಕರಣ ದಾಖಲಿಸಿ ನಂತರ ಬಿ ರಿಪೋರ್ಟ್ ಹಾಕಿದ್ದಾರೆ ಎಂದರು.

‘ಪ್ರಜಾವಾಣಿ’ ವರದಿ ಪ್ರಸ್ತಾಪ
ಆರೋಗ್ಯ ಇಲಾಖೆಯಲ್ಲಿನ ಭ್ರಷ್ಟಾಚಾರಗಳಿಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ್ದರು. ಆಗಲೇ ಸಚಿವ ಸುಧಾಕರ್ ವಿರುದ್ಧ ನಮ್ಮ ನಾಯಕರು ಹೋರಾಟ ತೀವ್ರಗೊಳಿಸಿ ರಾಜೀನಾಮೆಗೆ ಆಗ್ರಹಿಸಬೇಕಾಗಿತ್ತು ಎಂದು ನಂದಿ ಆಂಜನಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT