ಶನಿವಾರ, ಜುಲೈ 24, 2021
27 °C
ಕೋವಿಡ್‌ನಿಂದ ಮೃತಪಟ್ಟಿರುವ ಸಹಕಾರಿ ಕ್ಷೇತ್ರದಲ್ಲಿ ಸಾಲ ಪಡೆದ ರೈತರ ಮಾಹಿತಿಯನ್ನು ಸಹಕಾರ ಇಲಾಖೆಗೆ ರವಾನಿಸಿದ ಡಿಸಿಸಿ ಬ್ಯಾಂಕ್‌

ಸಾಲ ಮನ್ನಾ: ಚಿಕ್ಕಬಳ್ಳಾಪುರ ಜಿಲ್ಲೆಯ 122 ರೈತ ಕುಟುಂಬ ಅರ್ಹ

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೋವಿಡ್‌ನಿಂದ ಮೃತಪಟ್ಟಿರುವ ಸಹಕಾರಿ ಕ್ಷೇತ್ರದಿಂದ ಸಾಲ ಪಡೆದ ರೈತರ ಸಾಲವನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ಮನಸ್ಸು ಮಾಡಿದೆ. ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಸಾಲ ಮನ್ನಾ ಶೇ 100ರಷ್ಟು ಖಚಿತ. ವಾರದ ಒಳಗೆ ಈ ಸಂಬಂಧ ಮಾಹಿತಿ ಪಡೆಯಲಾಗುವುದು ಎಂದು ಹೇಳಿದ್ದಾರೆ.

ಈಗಾಗಲೇ ಸಹಕಾರ ಇಲಾಖೆಯು ಪ್ರತಿ ಜಿಲ್ಲೆಯಿಂದ ಕೋವಿಡ್‌ನಿಂದ ಮೃತಪಟ್ಟ ರೈತರು, ಅವರು ಸಹಕಾರಿ ಕ್ಷೇತ್ರದಲ್ಲಿ ಎಷ್ಟು ಸಾಲ ಪಡೆದಿದ್ದಾರೆ ಎನ್ನುವ ವಿವರಗಳನ್ನು ಕಳುಹಿಸಿಕೊಡುವಂತೆ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ. ಆ ಪ್ರಕಾರ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ ವ್ಯಾಪ್ತಿಯಲ್ಲಿ ಸಾಲ ಪಡೆದಿದ್ದ 122 ರೈತರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 62 ಮತ್ತು ಕೋಲಾರ ಜಿಲ್ಲೆಯಲ್ಲಿ 60 ರೈತರ ಕುಟುಂಬಗಳು ಈ ಸಾಲ ಮನ್ನಾಕ್ಕೆ ಅರ್ಹವಾಗಿವೆ. ಮೃತಪಟ್ಟ ರೈತರ ಹೆಸರು, ತಂದೆ/ಗಂಡನ ಹೆಸರು, ತಾಲ್ಲೂಕು, ಜಿಲ್ಲೆ, ರೈತರ ಸಾಲದ ಖಾತೆ, ಆಧಾರ್ ಸಂಖ್ಯೆ, ಸಾಲದ ಉದ್ದೇಶ, ಸಾಲ ಪಡೆದ ಮೊತ್ತ, 2021ರ ಜೂನ್ 30ಕ್ಕೆ ಹೊರಬಾಕಿ, ಮರಣ ಹೊಂದಿದ ದಿನಾಂಕ, ಕೋವಿಡ್ ಮರಣ ಪ್ರಮಾಣದ ದಿನಾಂಕ ಹೀಗೆ ಇಷ್ಟು ಪೂರ್ಣ ಮಾಹಿತಿಯನ್ನು ಡಿಸಿಸಿ ಬ್ಯಾಂಕ್ ಸಹಕಾರ ಇಲಾಖೆಗೆ ಸಲ್ಲಿಸಿದೆ.

ಎರಡೂ ಜಿಲ್ಲೆಗಳ ಈ 122 ರೈತರ ಒಟ್ಟು ಸಾಲದ ಮೊತ್ತ ₹ 2,26,81,184 ಇದೆ. ಇದರಲ್ಲಿ ₹ 1,71,02,379 ಅಸಲು ಇದೆ. ₹ 18,60,946 ಬಡ್ಡಿ ಬಾಕಿ ಇದೆ. ಕೃಷಿ ಸಾಲ (ಕೆಸಿಸಿ), ಹೈನುಗಾರಿಕೆ, ಪೌಲ್ಟ್ರಿ, ಮಿನಿಡೈರಿ ಸಾಲ, ಸ್ವಸಹಾಯ ಗುಂಪು (ಎಸ್‌ಎಚ್‌ಜಿ) ಸಾಲ, ಮಧ್ಯಮಾವಧಿ ಸಾಲ, ವ್ಯಾಪಾರ ಸಾಲ, ಮಾವು ಬೆಳೆ ಸಾಲವನ್ನು ಈ ರೈತರು ಪಡೆದಿದ್ದಾರೆ. ಇವರಲ್ಲಿ ಗರಿಷ್ಠ ಮಂದಿ ಕೆಸಿಸಿ ಸಾಲವನ್ನು ಪಡೆದಿದ್ದಾರೆ.

ಪೂರ್ಣ ಸಾಲಮನ್ನಾ ಮಾಡಬೇಕೆ ಅಥವಾ  ಇಂತಿಷ್ಟು ಸಾಲ ಮನ್ನಾ ಎನ್ನುವ ಮಿತಿ ವಿಧಿಸಬೇಕೇ ಎನ್ನುವ ಚರ್ಚೆ ಸರ್ಕಾರದ ಹಂತದಲ್ಲಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನ 25 ಹಾಗೂ ಕೋಲಾರ ತಾಲ್ಲೂಕಿನಲ್ಲಿ 17 ರೈತ ಕುಟುಂಬಗಳು ಈ ಸಾಲ ಮನ್ನಾ ಸೌಲಭ್ಯಕ್ಕೆ ಅರ್ಹವಾಗಿವೆ. ಈ ಎರಡೂ ತಾಲ್ಲೂಕುಗಳಲ್ಲಿಯೇ ಗರಿಷ್ಠ ಸಂಖ್ಯೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ರೈತರು ಇದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನಲ್ಲಿ ನಾಲ್ಕು ಮತ್ತು ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನಲ್ಲಿ ಆರು ರೈತರು ಮೃತಪಟ್ಟಿದ್ದಾರೆ. ಇವು ಕನಿಷ್ಠ ಸಂಖ್ಯೆಯಲ್ಲಿ ರೈತರು ಮೃತಪಟ್ಟ ತಾಲ್ಲೂಕುಗಳಾಗಿವೆ.

‘ಈಗಾಗಲೇ ಕೋವಿಡ್‌ನಿಂದ ಮೃತಪಟ್ಟವರಿಗೆ ರಾಜ್ಯ ಸರ್ಕಾರ ₹ 1 ಲಕ್ಷ ನೀಡುವುದಾಗಿ ಪ್ರಕಟಿಸಿದೆ. ಈಗ ಸಾಲ ಮನ್ನಾ ಆದರೆ ಅವರ ಕುಟುಂಬಗಳಿಗೂ ಅನುಕೂಲ. ಮೃತ ರೈತರ ಕುಟುಂಬಗಳು ನೆಮ್ಮದಿಯಿಂದ ಬದುಕುತ್ತವೆ’ ಎಂದು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.

ಪಟ್ಟಿಗೆ; ಎರಡೂ ಪಟ್ಟಿಗಳನ್ನು ಪ್ರತ್ಯೇಕವಾಗಿ ಮಾಡಿಸಿ ತೆಗೆದುಕೊಳ್ಳಿ
***

ಚಿಕ್ಕಬಳ್ಳಾಪುರ ಜಿಲ್ಲೆಯ ಮಾಹಿತಿ

ತಾಲ್ಲೂಕು;ರೈತ ಸಂಖ್ಯೆ
ಚಿಂತಾಮಣಿ;1
ಶಿಡ್ಲಘಟ್ಟ;25
ಚಿಕ್ಕಬಳ್ಳಾಪುರ;6
ಬಾಗೇಪಲ್ಲಿ;8
ಗುಡಿಬಂಡೆ;4
ಗೌರಿಬಿದನೂರು;18
ಒಟ್ಟು;62

***

ಕೋಲಾರ ಜಿಲ್ಲೆಯ ಮಾಹಿತಿ

ತಾಲ್ಲೂಕು;ರೈತ ಸಂಖ್ಯೆ
ಕೋಲಾರ;17
ಮಾಲೂರು;8
ಬಂಗಾರಪೇಟೆ;8
ಕೆಜಿಎಫ್‌;6
ಮುಳಬಾಗಿಲು;14
ಶ್ರೀನಿವಾಸಪುರ;7
ಒಟ್ಟು;60

***

ಪೂರ್ಣ ಸಾಲ ಮನ್ನಾ ಮಾಡಿದರೆ ಒಳ್ಳೆಯದು

‘ಕೋವಿಡ್ ಸಂಕಷ್ಟದಲ್ಲಿ ಇರುವವರಿಗೆ ಸಾಲ ಮನ್ನ ಮಾಡುವುದು ಒಳ್ಳೆಯದು. ಕೋವಿಡ್‌ನಿಂದ ಸಂಕಷ್ಟಗಳು ಅಲುಗಾಡಿವೆ. ನನ್ನ ವೈಯಕ್ತಿಕ ಅಭಿಪ್ರಾಯ ಎಂದರೆ ಹೀಗೆ ಮೃತಪಟ್ಟ ಕುಟುಂಬಗಳ ಎಷ್ಟು ಪೂರ್ಣ ಸಾಲವನ್ನು ಮನ್ನಾ ಮಾಡಬೇಕು. ಕೆಲವು ರೈತರು ₹ 50 ಸಾವಿರ, ₹ 1 ಲಕ್ಷ ಸಾಲ ಪಡೆದಿರಬಹುದು. ಪೂರ್ಣ ಸಾಲ ಮನ್ನಾ ಮಾಡಿದರೆ ಆ ಕುಟುಂಬಗಳು ನಿರಾಳವಾಗುತ್ತವೆ. ಮತ್ತೆ ನಂತರವೂ ಸಾಲ ಪಡೆಯಬಹುದು’ ಎಂದು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ‘ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು