ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಮಳೆ ಪಾಲಾದ 1200 ಎಕರೆ ಬೆಳೆ

Last Updated 23 ನವೆಂಬರ್ 2021, 4:56 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಬೆಳ್ಳೂಟಿ ಕೆರೆಯು ಕೋಡಿ ಹರಿದಿದ್ದು, ನೀರು ಮುಂದೆ ಹರಿಯಲು ಮೊದಲಿದ್ದ ಭಕ್ತರಹಳ್ಳಿ ನಾರವಾಳ ರಾಜಕಾಲುವೆ ಒತ್ತುವರಿಯಾದ ಕಾರಣ, ಭಕ್ತರಹಳ್ಳಿ ಪಕ್ಕದಿಂದ ಕಾಕಚೊಕ್ಕಂಡಹಳ್ಳಿ ಹಾದು ಭದ್ರನಕೆರೆ ತಲುಪಬೇಕಿದ್ದ ನೀರು ಸುಮಾರು ಒಂದೂವರೆ ಕಿ.ಮೀ ವ್ಯಾಪ್ತಿಯಲ್ಲಿ ಜಮೀನುಗಳ ಮೇಲೆ ಹರಿದಿದೆ. ತಾಲ್ಲೂಕಿನ ಭಕ್ತರಹಳ್ಳಿ, ಬೆಳ್ಳೂಟಿ, ಮೇಲೂರು, ಚೌಡಸಂದ್ರ ವ್ಯಾಪ್ತಿಯ ಸುಮಾರು 1,200 ಎಕರೆ ಕೃಷಿ ಭೂಮಿಯಲ್ಲಿ ನೀರು ನಿಂತಿದ್ದು, ರೈತರು ಕಂಗಾಲಾಗಿದ್ದಾರೆ.

ಜಿಲ್ಲೆಯ ಕಂದವಾರ ಕೆರೆ, ಗೋಪಾಲಕೃಷ್ಣ ಕೆರೆ, ಮಂಚನಬೆಲೆ, ಮುಷ್ಟೂರು, ರಂಗಧಾಮನಕೆರೆ, ಜಾತವಾರ, ಕೇಶವಾರ ಕೆರೆ, ರಾಳ್ಳಕೆರೆಗಳು ತುಂಬಿ ನೀರು ಹರಿದು ಬೆಳ್ಳೂಟಿ ಕೆರೆಗೆ ಬಂದು, ಬೆಳ್ಳೂಟಿ ಕೆರೆಯೂ ಕೋಡಿ ಹರಿದಿದೆ. ಬೆಳ್ಳೂಟಿ ಕೆರೆಯಿಂದ ಕೋಡಿ ಹರಿದ ನೀರು ಮುಂದೆ ಭದ್ರನ ಕೆರೆಗೆ ಹೋಗಲು ಮಾಡಿರುವ ನಾರವಾಳ ರಾಜಕಾಲುವೆ ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ಹಲವು ಬಾರಿ ಸುತ್ತಲಿನ ಗ್ರಾಮಸ್ಥರು ತಹಶೀಲ್ದಾರ್ ಗಮನಕ್ಕೆ ತಂದಿದ್ದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ.

‘ಒತ್ತುವರಿ ತೆರವುಗೊಳಿಸಬೇಕೆಂದು ರೈತ ಸಂಘದಿಂದ ಅಧಿಕಾರಿಗಳಿಗೆ ಒತ್ತಾಯಿಸುತ್ತಲೇ ಬಂದಿದ್ದೇವೆ. ಅವರ ನಿರ್ಲಕ್ಷ್ಯದಿಂದ ಇದೀಗ ನಾಲ್ಕೈದು ಗ್ರಾಮಗಳ ರೈತರು ನಷ್ಟ ಅನುಭವಿಸುವಂತಾಗಿದೆ. ನಮ್ಮ ತೋಟದಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆದಿದ್ದೆ. ನೀರಿನಲ್ಲಿ ನಿಂತುಕೊಂಡೇ ಕತ್ತರಿಸಬೇಕಾಯಿತು’ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.

ತಹಶೀಲ್ದಾರ್, ನಷ್ಟದ ಪ್ರಮಾಣ ಪರಿಗಣನೆಗೆ ತೆಗೆದುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿ, ರೈತರಿಗೆ ಪರಿಹಾರ ಸಿಗಲು ನೆರವಾಗಬೇಕು’ ಎಂದು ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಒತ್ತಾಯಿಸಿದರು.

ಸುಮಾರು 1,200 ಎಕರೆಗಳಷ್ಟು ರೈತರ ಬೆಳೆಗಳ ಹಾನಿಗೆ ಯಾರು ಹೊಣೆ. ರಾಜಕಾಲುವೆ ಒತ್ತುವರಿ ಮಾಡಿರುವವರೋ ಅಥವಾ ತೆರವು ಮಾಡಿಸದ ಅಧಿಕಾರಿಗಳೋ. ಜಿಲ್ಲಾಧಿಕಾರಿ ಈ ಬಗ್ಗೆ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ನಿರ್ಲಕ್ಷ್ಯವನ್ನು ರೈತರು ಕ್ಷಮಿಸುವುದಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ.ರವಿಪ್ರಸಾದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT