ಗುರುವಾರ , ಅಕ್ಟೋಬರ್ 22, 2020
22 °C
ಮೀಸಲಾತಿ ಬದಲಾವಣೆ: ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಕಾಂಗ್ರೆಸ್‌ ಮುಖಂಡರ ಆರೋಪ

ಸಚಿವರಿಗೆ ದಲಿತರ ಶಾಪ ತಟ್ಟಲಿದೆ: ಕಾಂಗ್ರೆಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ದಲಿತರ ಮತ ಪಡೆದು ಶಾಸಕ, ಸಚಿವರಾದ ಡಾ.ಕೆ.ಸುಧಾಕರ್ ಅವರು ದಲಿತರಿಗೆ ಸಿಗಬೇಕಾಗಿದ್ದ ನಗರಸಭೆಯ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾಯಿಸುವ ದಲಿತ ವಿರೋಧಿ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಅವರಿಗೆ ದಲಿತರ ಶಾಪ ತಟ್ಟಲಿದೆ’ ಎಂದು ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ನಗರಸಭೆ ಅಧ್ಯಕ್ಷ ಸ್ಥಾನವನ್ನು ಸಚಿವ ಸುಧಾಕರ್ ಅವರು ತಮ್ಮ ರಾಜಕೀಯ ಪ್ರಭಾವದಿಂದ ಸಾಮಾನ್ಯ ವರ್ಗಕ್ಕೆ ಬದಲಾಯಿಸುವ ಮೂಲಕ ದಲಿತರಿಗೆ ಅನ್ಯಾಯ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ದಲಿತರು ಉನ್ನತ ಸ್ಥಾನಗಳಿಗೆ ಏರಲು ಅವಕಾಶವಿಲ್ಲ ಎಂಬುದು ಸಾಬೀತಾಗಿದೆ. ಕಳೆದ ಫೆಬ್ರುವರಿಯಲ್ಲಿ ನಡೆದ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯ ಆರು ಅಭ್ಯರ್ಥಿಗಳು ಮಂದಿ ಚುನಾಯಿತಾಗಿದ್ದಾರೆ. ಅವರಿಗೆ ಸಿಗಬೇಕಾದ ಸ್ಥಾನವನ್ನು ಸುಧಾಕರ್ ಅವರು ತಪ್ಪಿಸಿದ್ದಾರೆ. ಅಧ್ಯಕ್ಷ ಸ್ಥಾನದ ಮೀಸಲಾತಿ ಹಿಂದಿನಂತೆ ಬದಲಾಯಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಪ್ರಕಾಶ್‌ ಮಾತನಾಡಿ, ‘ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾಯಿಸಿದ್ದು ಪ್ರಶ್ನಿಸಿ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಲಾಗಿದೆ. ಹೀಗಾಗಿ, ಅಧ್ಯಕ್ಷ ಸ್ಥಾನದ ಚುನಾವಣೆ ವಿಳಂಬವಾಗಲಿದೆ. ಈ ಚುನಾವಣೆಯಲ್ಲಿ ಬಿಜೆಪಿಯವರ ಆಪರೇಷನ್‌ ಕಮಲ ನಡೆಯುವುದಿಲ್ಲ’ ಎಂದು ಹೇಳಿದರು.

ನಗರಸಭೆ ಸದಸ್ಯ ಕಣಿತಹಳ್ಳಿ ವೆಂಕಟೇಶ್ ಮಾತನಾಡಿ, ‘ಬಿಜೆಪಿ ಸೇರಿದ ಬಳಿಕ ಸುಧಾಕರ್ ಅವರು ಪರಿಶಿಷ್ಟರ ಮೇಲೆ ದ್ವೇಷ ಮನೋಭಾವ ಬೆಳೆಸಿಕೊಂಡಿದ್ದಾರೆ. ದಲಿತರ ನಂಬಿಕೆಗೆ ಮಸಿ ಬಳಿಯುತ್ತ, ಪ್ರತಿಯೊಂದು ಹಂತದಲ್ಲಿಯೂ ದಲಿತರ ಮೇಲೆ ದೌರ್ಜನ್ಯ ಮುಂದುವರಿಸಿದ್ದಾರೆ’ ಎಂದು ಆಪಾದಿಸಿದರು.

ಮುಖಂಡ ಮಿಲ್ಟನ್ ವೆಂಕಟೇಶ್ ಮಾತನಾಡಿ, ‘ಚಿಕ್ಕಬಳ್ಳಾಪುರ ಪುರಸಭೆಯು 1996ರಲ್ಲಿ ನಗರಸಭೆಯಾಗಿ ಬದಲಾದ ಬಳಿಕ ಈವರೆಗೆ ಪರಿಶಿಷ್ಟ ಜಾತಿಯವರನ್ನು ಹೊರತುಪಡಿಸಿ ಎಲ್ಲ ಸಮುದಾಯದವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿದ್ದ ಸ್ಥಾನವನ್ನು ಸಚಿವರು ಉದ್ದೇಶಪೂರ್ವಕವಾಗಿ ತಪ್ಪಿಸುವ ಮೂಲಕ ಆ ಸಮುದಾಯದವರಿಗೆ ಅವಮಾನ ಮಾಡಿದ್ದಾರೆ’ ಎಂದು ತಿಳಿಸಿದರು.

ಮುಖಂಡರಾದ ಯಲುವಳ್ಳಿ ಎನ್.ರಮೇಶ್, ನಗರಸಭೆ ಸದಸ್ಯರಾದ ಎಸ್.ಎಂ.ರಫೀಕ್, ಅಂಬರೀಷ್, ದೀಪಕ್, ಅಫ್ಜಲ್, ರಾಜಶೇಖರ್, ಮಂಜುನಾಥ್, ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಪ್ರಧಾನ ಕಾರ್ಯದರ್ಶಿ ವಿ.ಸುರೇಶ್ ಹಾಜರಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.