ಶುಕ್ರವಾರ, ಡಿಸೆಂಬರ್ 4, 2020
24 °C
ದೇಗುಲಗಳಲ್ಲಿ ಕಲಶ ಸ್ವರೂಪಿ ಸಿರಿಗೌರಿ ಪ್ರತಿಷ್ಠಾಪನೆ

ಚಿಕ್ಕಬಳ್ಳಾಪುರ: ದೀಪಾವಳಿಯ ಸಡಗರ, ಕಜ್ಜಾಯದ ಘಮಲು

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಕೊರೊನಾ ಸೋಂಕು ಇಳಿಮುಖವಾಗುತ್ತಿದೆ. ಈ ವರ್ಷ ಉತ್ತಮವಾಗಿ ಮಳೆಯಾಗಿದ್ದು ಬೆಳೆಗಳು ಹುಲುಸಾಗಿ ಬೆಳೆದಿರುವುದರಿಂದ ದೀಪಗಳ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ನಗರ ಹಾಗೂ ತಾಲ್ಲೂಕಿನ ಜನತೆ ಭರದಿಂದ ಸಿದ್ಧತೆ ನಡೆಸಿದ್ದಾರೆ.

ಶನಿವಾರದಿಂದ ಮೂರು ದಿನಗಳ ಕಾಲ ಸಂಭ್ರಮ ಮುಗಿಲು ಮುಟ್ಟಲಿದೆ. ಶನಿವಾರ ನರಕಚತುದರ್ಶಿ, ಭಾನುವಾರ ದೀಪಾವಳಿ, ಸೋಮವಾರ ಬಲಿಪಾಡ್ಯಮಿ ಆಚರಿಸಲು ಸಿದ್ಧತೆ ನಡೆದಿದೆ. ಸಮೃದ್ಧಿಯ ಸಂಕೇತವಾಗಿ ದೀಪಾವಳಿಯಂದು ಮಹಿಳೆಯರು ದೀಪಗಳನ್ನು ಬೆಳಗಿಸಿ ಸಂಭ್ರಮಿಸುತ್ತಾರೆ. ಕಳೆದ 6-7 ತಿಂಗಳುಗಳಿಂದ ಕೊರೊನಾ ಸೋಂಕಿಗೆ ಸಿಲುಕಿ ಹೈರಾಣವಾಗಿದ್ದ ಜನರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಉಳ್ಳವರು ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸುತ್ತಿದ್ದರೆ ಬಡವರು ಕತ್ತಲಿನಿಂದ ಬೆಳಕಿನೆಡೆಗೆ ಸಾಗಲು ಪ್ರಯತ್ನ ನಡೆಸಿದ್ದಾರೆ. ಪಟಾಕಿ ಹಾಗೂ ಕಜ್ಜಾಯ ದೀಪಾವಳಿಯ ವಿಶೇಷ. ದೊಡ್ಡವರಿಗಿಂತ ಮಕ್ಕಳಿಗೆ ಹೆಚ್ಚು ಖುಷಿ ನೀಡುವ ಹಬ್ಬ ಇದು. ಕೊರೊನಾ ನಡುವೆಯೂ ನಗರದಲ್ಲಿ ಬಟ್ಟೆ ಅಂಗಡಿ, ಹಣತೆ, ಸ್ವೀಟ್ಸ್ ಸ್ಟಾಲ್, ನೋಮುದಾರ, ಹೂ, ಹಣ್ಣು, ದಿನಸಿ ಅಂಗಡಿಗಳಲ್ಲಿ ಭರಪೂರ ವ್ಯಾಪಾರ ನಡೆಯುತ್ತಿದೆ. ಮಳೆ, ಬೆಳೆ ಉತ್ತವಾಗಿರುವುದರಿಂದ ಚೆನ್ನಾಗಿ ವ್ಯಾಪಾರ ನಡೆಯುತ್ತಿದೆ. ಮಕ್ಕಳು ಅತ್ತು ಕರೆದು ಪೋಷಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.

ಪಟಾಕಿ ಹಚ್ಚುವುದರಿಂದ ಕೊರೊನಾ ಹರಡಲು ಅವಕಾಶವಾಗು ತ್ತದೆ. ಹೀಗಾಗಿ ಈ ಬಾರಿ ಪಟಾಕಿ ಇಲ್ಲದೆ ದೀಪಾವಳಿ ಸರಳವಾಗಿ ಆಚರಿಸಬೇಕು ಎಂದು ತಜ್ಞರು ವರದಿ ನೀಡಿದ್ದರು. ಈ ವರದಿಯಂತೆ ಮೊದಲು ಪಟಾಕಿ ಮಾರಾಟ ನಿಷೇಧಿಸಲಾಗುತ್ತದೆ ಎಂದ ಸರ್ಕಾರ, ನಂತರ ಒತ್ತಡಗಳಿಗೆ ಮಣಿದು ಹಸಿರು ಪಟಾಕಿಗೆ ಮಾತ್ರ ಅವಕಾಶ ಎಂದು ಆದೇಶ ಹೊರಡಿಸಿತು. ಆದರೂ ಜನರು ಪಟಾಕಿಯನ್ನು ಹಚ್ಚಲು ಸಿದ್ಧರಾಗಿದ್ದಾರೆ.

ಮೂರು ದಿನಗಳ ಕಾಲ ಒಂದೊಂದು ಸಮುದಾಯದವರು ಒಂದೊಂದು ದಿನ ಹಬ್ಬ ಆಚರಿಸುವುದು ರೂಢಿಯಲ್ಲಿದೆ. ಕಜ್ಜಾಯಗಳನ್ನು ಸಿದ್ಧ ಮಾಡಿಕೊಂಡು ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಲಾಗುವ ಕಲಶ ಸ್ವರೂಪಿ ಸಿರಿಗೌರಿಯ ಮುಂದೆ ಬಾಗಿನ ಅರ್ಪಿಸುವುದು ಹಬ್ಬದ ವಿಶೇಷ.

‘ನಾಗರಿಕತೆ ಬೆಳೆದಂತೆ ಹಬ್ಬಗಳ ಆಚರಣೆ ತನ್ನ ಸಂಪ್ರದಾಯ ಕಳೆದುಕೊಳ್ಳುತ್ತಿದೆ ಎಂದು ಕೆಲವರು ಹೇಳುತ್ತಾರೆ. ಆದರೂ ಹಿಂದಿನ ಪದ್ಧತಿಯ ಪ್ರಕಾರ ಹಬ್ಬಗಳನ್ನು ಈಗಲೂ ಆಚರಿಸಿಕೊಂಡು ಸಂಪ್ರದಾಯ ಉಳಿಸಿಕೊಂಡು ಬರುತ್ತಿರುವುದು ಸಂತಸದ ಸಂಗತಿಯೇ ಸರಿ. ಬಿದಿರಿನ ಮೊರದಲ್ಲಿ ಬಾಳೆ ಎಲೆ ಹಾಕಿ, ಅದರ ಮೇಲೆ ಕುಟುಂಬದ ಪದ್ಧತಿಯಂತೆ ಕೆಲವರು 21, 48 ಜೋಡಿ, ಮತ್ತೆ ಕೆಲವರು ರಾಶಿ ಮೂಲಕ ಕಜ್ಜಾಯಗಳನ್ನು ತುಂಬಿಸುತ್ತಾರೆ. ಅದರೊಂದಿಗೆ ಬಟ್ಟಲಡಿಕೆ, ಜೋಡಿ ಎಲೆ, ಬಾಳೆಹಣ್ಣು, ಅರಿಸಿನದ ಕೊಂಬು, ನೋಮುದಾರಗಳು ತೆಗೆದು ಕೊಂಡು ಹೋಗಿ ಕಲಶ ಸ್ವರೂಪಿ ಸಿರಿಗೌರಿಯ ಮುಂದೆ ಇಟ್ಟು ಪೂಜೆ ಸಲ್ಲಿಸುತ್ತೇವೆ’ ಎಂದರು ಗೃಹಿಣಿ ಪಲ್ಲವಿ.

‘ಪೂಜೆಯ ನಂತರ ಮನೆಗೆ ಬಂದು ನೋಮುದಾರಗಳನ್ನು ಮನೆಯವರೆಲ್ಲ ಕೈಗಳಿಗೆ ಕಟ್ಟಿಕೊಂಡು ನೋಮಿದ ಕಜ್ಜಾಯ, ಬಾಳೆಹಣ್ಣನ್ನು ಪ್ರಸಾದ ಎಂದು ತೆಗೆದುಕೊಳ್ಳುತ್ತಾರೆ. ನಂತರ ಹಬ್ಬದ ವಿಶೇಷ ಅಡುಗೆಯನ್ನು ಊಟ ಮಾಡುತ್ತಾರೆ. ಸಂಜೆ ಮನೆಯ ಒಳಗೆ ಮತ್ತು ಹೊರಗೆ. ಆವರಣದಲ್ಲಿ ದೀಪ ಬೆಳಗಿಸಿ ಹೊಸಲಿಗೆ ಪೂಜೆ ಮಾಡಿ, ಪಟಾಕಿ ಸಿಡಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು