ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ವಿದ್ಯಾರ್ಥಿಗಳ ಗಡಿಪಾರಿಗೆ ಆಗ್ರಹ

ಎನ್‍ಎಸ್‌ಯುಐ ಜಿಲ್ಲಾ ಘಟಕದ ಪದಾಧಿಕಾರಿಗಳಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ
Last Updated 18 ಫೆಬ್ರುವರಿ 2020, 11:13 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಪಾಕಿಸ್ತಾನದ ಪರ ಘೋಷಣೆ ಕೂಗಿದ ಹುಬ್ಬಳ್ಳಿಯ ಕೆಎಲ್ಇ ಎಂಜಿನಿಯರಿಂಗ್‌ ಕಾಲೇಜಿನ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‍ಎಸ್‌ಯುಐ) ಜಿಲ್ಲಾ ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಕೆ.ನರಸಿಂಹಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಎನ್‍ಎಸ್‌ಯುಐ ರಾಜ್ಯ ಘಟಕದ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ‘ಕೆಎಲ್ಇ ಎಂಜಿನಿಯರಿಂಗ್‌ ಕಾಲೇಜಿನ ಸಿವಿಲ್‌ ವಿಭಾಗದಲ್ಲಿ 4ನೇ ಸೆಮಿಸ್ಟರ್‌ ಓದುತ್ತಿರುವ ಅಮೀರ್‌, ಬಾಸಿತ್‌ ಹಾಗೂ ಎರಡನೇ ಸೆಮಿಸ್ಟರ್‌ ಓದುತ್ತಿರುವ ತಾಲೀಬ್‌ ಎಂಬುವರು ಫೆ.14 ರಂದು ಕಾಲೇಜಿನ ವಸತಿ ಗೃಹದಲ್ಲಿ ಪಾಕ್‌ ಸೇನೆಯ ಹಾಡಿಗೆ ದನಿಗೂಡಿಸಿ ‘ಪಾಕಿಸ್ತಾನ ಜಿಂದಾಬಾದ್’, ‘ಪಾಕಿಸ್ತಾನ ಆಜಾದಿ’ ಎಂದು ಘೋಷಣೆ ಕೂಗಿದ್ದರು. ಅದನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹರಿಬಿಡುವ ಮೂಲಕ ಕೋಮು ಸೌಹಾರ್ದ ಕದಡುವ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

‘ಪುಲ್ವಾಮಾ ದಾಳಿ ನಡೆದು ವರ್ಷ ಪೂರೈಸಿದ ಪ್ರಯುಕ್ತ ಫೆ.14 ರಂದು ಕಾಲೇಜಿನಲ್ಲಿ ಹುತಾತ್ಮರನ್ನು ಸ್ಮರಿಸಲಾಗಿತ್ತು. ಅದೇ ದಿನ ಈ ಮೂರು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗುವ ಮೂಲಕ ದೇಶದ್ರೋಹಿ ನಡೆ ಪ್ರದರ್ಶಿಸಿದ್ದಾರೆ. ದೇಶದ ಗಾಳಿ, ಅನ್ನ, ನೀರು, ಶಿಕ್ಷಣ ಪಡೆದು ಪಾಕ್‌ ಪರ ಘೋಷಣೆ ಕೂಗುವವರ ಸರ್ಕಾರಿ ಸೌಲಭ್ಯಗಳನ್ನು ಹಿಂಪಡೆಯಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಹೇಳಿಕೆ ನೀಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿರುವ ವಿಡಿಯೊ ಇದ್ದಾಗಲೂ, ಪೊಲೀಸರು ಸೂಕ್ತ ಸಾಕ್ಷಿ ಇಲ್ಲ ಎಂದು ಹೇಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಪೊಲೀಸ್‌ ಅಧಿಕಾರಿಗಳು ದಿನಕ್ಕೊಂದು ಹೇಳಿಕೆ ನೀಡುತ್ತ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕಾನೂನು ರಕ್ಷಕರಾಗಿರುವ ಪೊಲೀಸರು ದೇಶದ್ರೋಹಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ ಎನ್ನುವ ಅನುಮಾನವಿದೆ. ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ಪೊಲೀಸರು ತಮ್ಮ ಕುರಿತ ಸಂಶಯಗಳನ್ನು ನಿವಾರಿಸಬೇಕು. ಇಂತಹ ಘಟನೆ ಮುಂದೆ ಮರುಕಳುಹಿಸದಂತೆ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಎನ್‍ಎಸ್‌ಯುಐ ಪದಾಧಿಕಾರಿಗಳಾದ ಡಿ.ಎ.ಮಧುಸೂಧನ್‌ ರೆಡ್ಡಿ, ಕೆ.ಎಸ್.ತರುಣ್‌ ಕುಮಾರ್, ವಿ.ಎ.ಸುಹಾಸ್‌ ಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT