ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿಗಿರಿಧಾಮ; ಆಕರ್ಷಣೆಗಾಗಿ ವಿವಿಧ ಅಭಿವೃದ್ಧಿ ಕಾರ್ಯಕೈಗೊಂಡ ಕೆಎಸ್‌ಟಿಡಿಸಿ

Published 27 ಆಗಸ್ಟ್ 2023, 13:29 IST
Last Updated 27 ಆಗಸ್ಟ್ 2023, 13:29 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಐತಿಹಾಸಿಕ ನಂದಿಗಿರಿಧಾಮಕ್ಕೆ ದಿನದಿಂದ ದಿನಕ್ಕೆ ಪ್ರವಾಸಿಗರ ಪ್ರವೇಶ ಹೆಚ್ಚುತ್ತಲೇ ಇದೆ. ವಿಶೇಷವಾಗಿ ವಾರಾಂತ್ಯದ ಶನಿವಾರ ಮತ್ತು ಭಾನುವಾರ ದಿನಗಳಲ್ಲಿ ಗಿರಿಧಾಮವು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತಿದೆ. ಇಂತಹ ಗಿರಿಧಾಮದಲ್ಲಿ ಈಗ ಅಭಿವೃದ್ಧಿ ಚಟುವಟಿಕೆಗಳ ಪರ್ವ ಆರಂಭವಾಗಿದೆ.

ನಂದಿಬೆಟ್ಟಕ್ಕೆ ಪ್ರವಾಸಿಗರನ್ನು ಸೆಳೆಯಲು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಯೋಜನೆಗಳನ್ನು ಸಹ ರೂಪಿಸುತ್ತಿದೆ. ಪರಿಸರಕ್ಕೆ ಯಾವುದೇ ಹಾನಿ ಆಗದ ರೀತಿಯಲ್ಲಿ ಮತ್ತು ಪ್ರವಾಸಿಗರನ್ನು ಮತ್ತಷ್ಟು ಸೆಳೆಯುವಂತೆ ಗಿರಿಧಾಮದಲ್ಲಿ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ನಿಗಮದ ವ್ಯವಸ್ಥಾಪಕ ಜಿ.ಜಗದೀಶ್ ಅವರ ಆಸಕ್ತಿಯ ಫಲವಾಗಿ ಈ ಕಾರ್ಯಗಳು ನಡೆಯುತ್ತಿವೆ. 

ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ವಾರಾಂತ್ಯದ ದಿನಗಳಲ್ಲಿ ಗಿರಿಧಾಮದಲ್ಲಿ ಸಂಚಾರ ದಟ್ಟಣೆ ಎದುರಾಗುತ್ತಿದೆ. ಈಗ ನಿಗದಿತ ಸಂಖ್ಯೆಯಲ್ಲಿ ಮಾತ್ರ ವಾಹನಗಳ ನಿಲುಗಡೆಗೆ ಗಿರಿಧಾಮದಲ್ಲಿ ಅವಕಾಶವಿದೆ. ವಾಹನ ನಿಲುಗಡೆ ಸ್ಥಳ ಭರ್ತಿಯಾದರೆ, ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅಡ್ಡಿ ಆಗುತ್ತದೆ. ಪಾರ್ಕಿಂಗ್ ಸ್ಥಳದಿಂದ ವಾಹನಗಳು ತೆರವಾದ ನಂತರ ಗಿರಿಧಾಮಕ್ಕೆ ಕಾರು, ಬೈಕ್‌ಗಳಲ್ಲಿ ಬಂದ ಪ್ರವಾಸಿಗರನ್ನು ಕಳುಹಿಸಲಾಗುತ್ತಿದೆ. 

ಇದರಿಂದ ಪ್ರತಿ ವಾರಾಂತ್ಯದ ದಿನಗಳಲ್ಲಿ ನಂದಿಗಿರಿಧಾಮದಲ್ಲಿ ಸಂಚಾರ ದಟ್ಟಣೆ ಎನ್ನುವ ಮಾತುಗಳು ಸಾಮಾನ್ಯ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮುಂದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ನಂದಿಗಿರಿಧಾಮದ ಪ್ರವೇಶದಲ್ಲಿ ನಾಲ್ಕು ಎಕರೆ ಜಾಗ ಮಂಜೂರು ಮಾಡಿದ್ದಾರೆ. ಇಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲು ನಿಗಮವು ಮುಂದಾಗಿದೆ.

ಪ್ರವಾಸಿಗರನ್ನು ಇಲ್ಲಿಂದ ಎಲೆಕ್ಟ್ರಿಕ್ ವಾಹನಗಳಲ್ಲಿ ಗಿರಿಧಾಮಕ್ಕೆ ಕರೆದೊಯ್ಯಲಾಗುತ್ತದೆ. ಪರಿಸರ ಸ್ನೇಹಿ ಎನ್ನುವ ದೃಷ್ಟಿಯಿಂದ ಈ ವಾಹನಗಳನ್ನು ಬಳಸಲು ನಿಗಮ ಮುಂದಾಗಿದೆ. ಸುಮಾರು 450 ಕಾರುಗಳ ನಿಲುಗಡೆಗೆ ಗಿರಿಧಾಮದ ಇಂದಿನ ವಾಹನ ನಿಲುಗಡೆ ಸ್ಥಳದಲ್ಲಿ ಅವಕಾಶವಿದೆ. ಇಷ್ಟು ವಾಹನಗಳು ಭರ್ತಿಯಾದ ನಂತರ ಎಲೆಕ್ಟ್ರಿಕಲ್  ವಾಹನಗಳಲ್ಲಿ ಪ್ರವಾಸಿಗರನ್ನು ಗಿರಿಧಾಮಕ್ಕೆ ಕರೆದೊಯ್ಯುವ ಚಿಂತನೆ ನಿಗಮದ್ದು.

₹20ಕ್ಕೆ ಊಟ: ಗಿರಿಧಾಮದ ಮಯೂರ ಹೋಟೆಲ್‌ನಲ್ಲಿ ಊಟ, ತಿಂಡಿಯ ದರಗಳು ಹೆಚ್ಚಿವೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಕೆಲವರು ದರ ಪಟ್ಟಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಈಗ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿಯೇ ಗಿರಿಧಾಮದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕಡಿಮೆ ದರದಲ್ಲಿ ಊಟ, ತಿಂಡಿ ನೀಡಲು ಮುಂದಾಗಿದೆ. ಗಿರಿಧಾಮದ ಮಯೂರ ಕ್ಯಾಂಟೀನ್‌ನಲ್ಲಿ ₹20ಕ್ಕೆ ಅನ್ನ ಸಾಂಬಾರ್, ಬಿಸಿಬೇಳೆ ಬಾತ್, ಉಪ್ಪಿಟ್ಟು, ₹10ಕ್ಕೆ ಕಾಫಿ, ಟೀ, ₹15ಕ್ಕೆ ಮೊಸರನ್ನವನ್ನು ನಿಗಮ ನೀಡುತ್ತಿದೆ. ಕ್ಯಾಂಟೀನ್ ಮುಂಭಾಗದಲ್ಲಿಯೇ ದರಪಟ್ಟಿ ನಮೂದಿಸಲಾಗಿದೆ.

ಜಗದೀಶ್ ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ
ಜಗದೀಶ್ ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ

ಪರಿಸರ ಸೂಕ್ಷ್ಮವಲಯಕ್ಕೆ ಧಕ್ಕೆ ಆಗದಿರಲಿ

ನಂದಿಗಿರಿಧಾಮವು ಪರಿಸರ ಸೂಕ್ಷ್ಮವಲಯ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸಭಾಂಗಣ ನಿರ್ಮಿಸಿರುವುದು ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಇಲ್ಲಿನ ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆ ಆಗದಂತೆ ಕ್ರಮ ವಹಿಸಬೇಕು. ನಂದಿಗಿರಿಧಾಮ ಚಿಕ್ಕಬಳ್ಳಾಪುರದ ಮುಕುಟ ಮಣಿ ಇದ್ದಂತೆ. ಇದರಿಂದಲೇ ರಾಜ್ಯದಲ್ಲಿ ಚಿಕ್ಕಬಳ್ಳಾಪುರಕ್ಕೆ ವಿಶಿಷ್ಟ ಸ್ಥಾನವಿದೆ ಎನ್ನುತ್ತಾರೆ ಚಿಕ್ಕಬಳ್ಳಾಪುರದ ನಾಗರಿಕ ನಾರಾಯಣಸ್ವಾಮಿ.

ಪ್ರವಾಸಿಗರ ನೆಚ್ಚಿನ ತಾಣ ಗಿರಿಧಾಮದಲ್ಲಿ ಸೌಲಭ್ಯಗಳು ಉತ್ತಮವಾಗಿವೆ. ಒಂದು ದಿನದ ಪ್ರವಾಸಕ್ಕೆ ಉತ್ತಮ ಸ್ಥಳ ಎನಿಸಿದೆ. ಫೋಟೊ ಶೂಟ್ ಧಾರಾವಾಹಿಗಳ ಚಿತ್ರೀಕರಣ ಸಹ ನಡೆಯುತ್ತದೆ. ಬೆಂಗಳೂರಿಗೆ ಹತ್ತಿರವಿರುವ ಕಾರಣ ನಾವು ಇಲ್ಲಿಗೆ ಆಗಾಗ್ಗೆ ಭೇಟಿ ನೀಡುತ್ತೇವೆ. ಕೆಲವು ವೇಳೆ ಬೆಳಿಗ್ಗೆ ಬಂದರೆ ಕೆಲವು ಸಮಯ ಸಂಜೆ ಭೇಟಿ ನೀಡುತ್ತೇವೆ. ಇದು ಉತ್ತಮ ಪ್ರವಾಸಿ ಸ್ಥಳವಾಗಿದೆ ಎನ್ನುವುದು ಬೆಂಗಳೂರಿನ ಪ್ರವಾಸಿಗ ವಿಶ್ವನಾಥ್ ಮಾತು.

ಸುಸಜ್ಜಿತ ಸಭಾಂಗಣ ಗಿರಿಧಾಮದಲ್ಲಿಯೇ ವಿವಾಹ ಆರತಕ್ಷತೆ ನಾಮಕರಣ ಸೇರಿದಂತೆ ಖಾಸಗಿ ಶುಭ ಸಮಾರಂಭಗಳು ಸಂಘ ಸಂಸ್ಥೆಗಳ ಕಾರ್ಯಕ್ರಮಗಳು ಸರ್ಕಾರಿ ಕಾರ್ಯಕ್ರಮಗಳು– ಹೀಗೆ ವಿವಿಧ ಕಾರ್ಯಕ್ರಮಗಳನ್ನು ಗಿರಿಧಾಮದಲ್ಲಿ ನಡೆಸಲು ಅನುಕೂಲವಾಗು ರೀತಿ ಸಭಾಂಗಣ ಸಹ ನಿರ್ಮಿಸಲಾಗಿದೆ.  ಇತ್ತೀಚೆಗೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಈ ಸಭಾಂಗಣವನ್ನು ಉದ್ಘಾಟಿಸಿದ್ದಾರೆ. 200 ಆಸನಗಳ ಸಾಮರ್ಥ್ಯದ ಸಭಾಂಗಣವನ್ನು ₹95 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT