ಗುರಿ ಸಾಧನೆಗೆ ಶಿಸ್ತು ಮುಖ್ಯ: ವಿದ್ಯಾರ್ಥಿಗಳಿಗೆ ಕಿವಿಮಾತು

7
ಜಚನಿ ಕಾಲೇಜಿನಲ್ಲಿ ಎನ್‌ಎಸ್‌ಎಸ್‌, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಗುರಿ ಸಾಧನೆಗೆ ಶಿಸ್ತು ಮುಖ್ಯ: ವಿದ್ಯಾರ್ಥಿಗಳಿಗೆ ಕಿವಿಮಾತು

Published:
Updated:
Deccan Herald

ಚಿಕ್ಕಬಳ್ಳಾಪುರ: ‘ವ್ಯಾಸಂಗದ ಅವಧಿಯಲ್ಲಿ ವಿದ್ಯಾರ್ಥಿಗಳು ಶಿಸ್ತು, ಸಂಯಮ ಮತ್ತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಗುರಿ ಸಾಧನೆ ಮಾಡಬೇಕು’ ಎಂದು ಜಚನಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಶಿವಜ್ಯೋತಿ ಹೇಳಿದರು.

ನಗರದ ಜಚನಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಜಚನಿ ಪ್ರಥಮ ದರ್ಜೆ ಕಾಲೇಜು, ಸಿದ್ದರಾಮಯ್ಯ ಕಾನೂನು ಮಹಾ ವಿದ್ಯಾಲಯ, ಜಚನಿ ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದ್ದು. ವೈಯಕ್ತಿಕ ಬೆಳವಣಿಗೆ ಮಾತ್ರವಲ್ಲದೆ ಸಮಾಜ ಮತ್ತು ದೇಶದ ಪ್ರಗತಿ ಬಗ್ಗೆಯೂ ವಿದ್ಯಾರ್ಥಿ, ಯುವಜನರಿಗೆ ಜವಾಬ್ದಾರಿ ಇರಬೇಕು. ಓದುವ ಸಮಯದಲ್ಲಿ ಕಾಲಹರಣ ಮಾಡಿದರೆ ಕಷ್ಟ, ನೋವು ಕಟ್ಟಿಟ್ಟ ಬುತ್ತಿ ಎಂಬುದು ಮರೆಯಬಾರದು. ನೈತಿಕ ಮಾರ್ಗದಲ್ಲಿ ನಡೆದು ಗುರಿ ಸಾಧನೆ ಮಾಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ನಿಡುಮಾಮಿಡಿ ಮಾನವ ಧರ್ಮಪೀಠವು ಮಠ ಪರಂಪರೆಯಲ್ಲಿ ವಿಭಿನ್ನ ಮತ್ತು ವಿಶಿಷ್ಟ ದೃಷ್ಟಿಕೋನವನ್ನು ಹೊಂದಿದೆ. ಸಮಾಜದಲ್ಲಿನ ದೀನ ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಮಠ ಮೊದಲಿನಿಂದಲೂ ಶ್ರಮಿಸುತ್ತಿದೆ. ಇದೇ ಪರಂಪರೆಯನ್ನು ಜಚನಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಮುಂದುವರೆಸಬೇಕು’ ಎಂದರು.

ಚಿಂತಾಮಣಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಎನ್.ರಘು ಮಾತನಾಡಿ, ‘ಸಮಾಜದಲ್ಲಿ ವಿದ್ಯಾವಂತರಿಗೆ ಮಹತ್ವದ ಸ್ಥಾನವಿದೆ. ವಿದ್ಯಾರ್ಥಿಗಳ ತುಡಿತ ಸದಾ ಜ್ಞಾನಾರ್ಜನೆಯ ಕಡೆಗೇ ಇರಬೇಕು. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆ ಜತೆಗೆ ಕಲೆ, ಸಾಹಿತ್ಯ, ಸಾಂಸ್ಕೃತಿಕದಂತಹ ಪಠ್ಯೇತರ ಚಟುವಟಿಕೆ ಕಡೆಗೆ ಗಮನ ಹರಿಸಬೇಕು. ಆಗ ಮಾತ್ರ ಪರಿಪೂರ್ಣ ವ್ಯಕ್ತಿತ್ವದೆಡೆಗೆ ಸಾಗಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಜನ್ಮ ನೀಡಿ ಸಾಕಿ ಸಲುಹಿದ ತಂದೆ ತಾಯಿಗಳು, ಪೋಷಕರು ಹಾಗೂ ವಿದ್ಯೆ ನೀಡಿ ಬೆಳವಣಿಗೆಗೆ ಕಾರಣರಾದ ಗುರುಗಳನ್ನು ಎಂದಿಗೂ ಮರೆಯಬಾರದು. ಅವರಿಗೆ ಎಂದೆಂದೂ ಚಿರಋಣಿಗಳಾಗಿರಬೇಕು. ವಿದ್ಯಾರ್ಥಿ ಜೀವನದಲ್ಲಿ ಮೊಬೈಲ್, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಗುಂಗಿನಲ್ಲಿ ಮುಳುಗಿ ಸಮಯ ಪೋಲು ಮಾಡುವುದು ಸಲ್ಲದು. ಶ್ರಮಪಟ್ಟು ಓದುವವರು ಭವಿಷ್ಯದಲ್ಲಿ ಸುಖವಾಗಿ ಬದುಕು ಕಟ್ಟಿಕೊಳ್ಳಬಹುದು’ ಎಂದು ತಿಳಿಸಿದರು.

ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.ಜಚನಿ ಪದವಿ, ಪದವಿ ಪೂರ್ವ ಹಾಗೂ ಕಾನೂನು ಕಾಲೇಜಿನ ಪ್ರಾಚಾರ್ಯರಾದ ವೆಂಕಟರಮಣ, ನರಸಿಂಹಮೂರ್ತಿ ಮತ್ತು ಸುರೇಶ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !